ಉಪ್ಪಿನಂಗಡಿ: ಏಕಾಏಕಿ ಮನೆಗೆ ನುಗ್ಗಿ ಗೃಹಿಣಿಗೆ ಚಾಕು ತೋರಿಸಿ ಬೆದರಿಸಿದ ಅಪರಿಚಿತ

Update: 2016-08-15 15:45 GMT

ಉಪ್ಪಿನಂಗಡಿ, ಆ.15: ಮನೆಗೆ ನುಗ್ಗಿದ ಅಪರಿಚಿತನೋರ್ವ ಮನೆಯಲ್ಲಿದ್ದ ಗೃಹಿಣಿಯೋರ್ವರಿಗೆ ಚಾಕು ತೋರಿಸಿ ಬೆದರಿಸಿದ ಘಟನೆ ಉಪ್ಪಿನಂಗಡಿಯ ರಾಮನಗರದ ಕುದ್ಲೂರು ಎಂಬಲ್ಲಿ ಇಂದು ಹಾಡಹಗಲೇ ನಡೆದಿದ್ದು, ಮನೆಯಲ್ಲಿದ್ದ ಮಹಿಳೆಯ ಪತಿ ಈತನನ್ನು ಬೆನ್ನಟ್ಟಿದರಾದರೂ ಈತ ಓಡಿ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾನೆ.

ಕುದ್ಲೂರಿನ ಅಯೂಬ್ ಎಂಬವರ ಮನೆಗೆ ಸೋಮವಾರ ಪೂರ್ವಾಹ್ನ 11ಗಂಟೆಯ ಸುಮಾರಿಗೆ ಬಂದ ಅಪರಿಚಿತ ವ್ಯಕ್ತಿಯೋರ್ವ, ಮನೆಯ ಹೊರಗಡೆ ನಿಂತು ಕರೆದಿದ್ದು, ಈ ಸಂದರ್ಭ ಮನೆಯಲ್ಲಿದ್ದ ಅಯೂಬ್ ಅವರ ಪತ್ನಿ ಬಾಗಿಲು ತೆರೆದಾಗ ಏಕಾಏಕಿ ಮನೆಯೊಳಗೆ ನುಗ್ಗಿದ ಈತ ಹಿಂದಿಯಲ್ಲಿ ಮಾತನಾಡುತ್ತಲೇ ಆಕೆಗೆ ಚಾಕು ತೋರಿಸಿದ್ದಾನೆ. ಆದರೆ ಅದೃಷ್ಟವಶಾತ್ ಅಯ್ಯೂಬ್ ಅವರು ಈ ಸಂದರ್ ಮನೆಯಲ್ಲಿಯೇ ಕೋಣೆಯಲ್ಲಿ ಇದ್ದು, ಪತ್ನಿಯ ಬೊಬ್ಬೆ ಕೇಳಿ ಅವರು ಹೊರಗೆ ಬಂದಾಗ ಅವರನ್ನು ನೋಡಿದ ಈತ ಅಲ್ಲಿಂದ ಓಟಕಿತ್ತಿದ್ದಾನೆ.

ಅಯೂಬ್ ಅವರೂ ಈತನನ್ನು ಬೆನ್ನಟ್ಟಿದ್ದು, ಕುದ್ಲೂರು ಮಸೀದಿ ಸಮೀಪದ ಜನತಾ ಕಾಲನಿಯ ಕಡೆಗೆ ಹೋಗಿ ಬಳಿಕ ತೋಟವೊಂದಕ್ಕೆ ನುಸುಳಿ ಗುಡ್ಡ ಹತ್ತಿ ಈತ ಅಲ್ಲಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾನೆ. ಸುದ್ದಿ ತಿಳಿದು ಸ್ಥಳೀಯರು ಈತನಿಗಾಗಿ ಹುಡುಕಾಡಿದರಾದರೂ, ಈತನ ಸುಳಿವು ಮಾತ್ರ ಲಭ್ಯವಾಗಿಲ್ಲ. ಬಳಿಕ ಮಾಹಿತಿ ತಿಳಿದು ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಬಂದಿದ್ದು, ಈ ಅಪರಿಚಿತ ವ್ಯಕ್ತಿಯನ್ನು ಅಯೂಬ್ ಅವರು ಬೆನ್ನಟ್ಟಿದ್ದಾಗ ಆತನ ಕೈಯಿಂದ ಬಿದ್ದಿದ್ದ ಮೊಬೈಲ್ ಹಾಗೂ ಚೀಲವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಅಯೂಬ್ ಅವರ ಮನೆಗೆ ತೆರಳುವ ಮೊದಲು ಇಲ್ಲಿನ ಆಸುಪಾಸಿನ ಮನೆಗಳಿಗೆ ಇದೇ ಅಪರಿಚಿತ ವ್ಯಕ್ತಿ ತೆರಳಿದ್ದು, ಹಿಂದಿ ಮಾತನಾಡುತ್ತಿದ್ದ ಈತ ಅವರಲ್ಲಿ ಇಲ್ಲಿ ಸಿಗುವ ಕೆಲವು ದಾರಿಯನ್ನು ತೋರಿಸಿ ಇಲ್ಲಿಂದ ಹೋದರೆ ಎಲ್ಲಿಗೆ ಹೋಗುತ್ತೆ? ಈ ಮೂಲಕ ಹೋದರೆ ನದಿಯೇನಾದರೂ ಸಿಗುತ್ತದೆಯೇ ಎಂದು ವಿಚಾರಿಸಿದ್ದಾನೆ ಎಂದು ಸ್ಥಳೀಯರು ತಿಳಿಸುತ್ತಾರೆ.

ಈ ಮಧ್ಯೆ ನಿನ್ನಿಕಲ್ಲು ನಿವಾಸಿಯಾಗಿರುವ ಉದ್ಯಮಿ ಲತೀಫ್ ಎಂಬವರ ಮನೆಗೆ ರವಿವಾರ ರಾತ್ರಿ ತಂಡವೊಂದು ಕನ್ನ ಹಾಕಲು ಯತ್ನಿಸಿದ ಘಟನೆ ನಡೆದಿದ್ದು, ಮನೆಯವರು ಎಚ್ಚರಗೊಂಡಾಗ ಕಳ್ಳರು ಪರಾರಿಯಾಗಿದ್ದಾರೆ. ಇವರ ಮನೆಯ ಬಾಗಿಲನ್ನು ಎರಡು ಬಾರಿ ಮುರಿಯುವ ಯತ್ನ ನಡೆದಿದೆಯಾದರೂ ಮನೆಯವರು ಎಚ್ಚರವಾಗಿದ್ದರಿಂದ ಅದು ವಿಫಲವಾಗುವಂತಾಗಿದೆ. ಇನ್ನೊಂದೆಡೆ ನಸುಕಿನ ಜಾವದಲ್ಲಿ ರಾಮನಗರ ನಿವಾಸಿ ದೀಪಕ್ ಎಂಬವರ ಮನೆಯ ಕಾಲಿಂಗ್ ಬೆಲ್ ಅನ್ನು ಕೂಡಾ ಯಾರೋ ಬಾರಿಸಿದ್ದಾರೆ. ಆದರೆ ಮನೆಯಲ್ಲಿ ಮಲಗಿದ್ದ ಮನೆಯವರು ಎದ್ದು ಲೈಟ್ ಉರಿಸಿದಾಗ ಕಾಲಿಂಗ್ ಬೆಲ್ ಬಾರಿಸಿದವರು ಪರಾರಿಯಾದ ಘಟನೆಯೂ ನಡೆದಿದೆ. 

ಪರಿಸರದಲ್ಲಿ ನಿರ್ಮಾಣವಾಗಿರುವ ಭಯದ ವಾತಾವರಣದಿಂದ ಮುಕ್ತಗೊಳಿಸುವಂತೆ ಸ್ಥಳೀಯರು ಪೊಲೀಸರನ್ನು ಒತ್ತಾಯಿಸಿದ್ದಾರೆ. ಉಪ್ಪಿನಂಗಡಿ ಪರಿಸರದಲ್ಲಿ ಉತ್ತರ ಭಾರತ ಮೂಲದ ಹಲವು ಮಂದಿ ಕಟ್ಟಡ ಕಾರ್ಮಿಕರಾಗಿ, ಕಂಬಳಿ, ಪ್ಲಾಸ್ಟಿಕ್ ಉತ್ಪನ್ನ, ಮನೆ ಮನೆ ಜವಳಿ ಮಾರಾಟ ಮಾಡುವ ಕೆಲಸ ನಡೆಸುತ್ತಿದ್ದಾರೆ. ಆದ್ದರಿಂದ ಅವರ ಮೇಲೆಯೂ ಪೊಲೀಸರು ನಿಗಾ ಇಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News