ಫಲಾನುಭವಿಗಳಿಂದ ಗೂಂಡಾ ವರ್ತನೆ ವದಂತಿ: ಖಂಡನೆ

Update: 2016-08-16 18:23 GMT

ಬೆಳ್ತಂಗಡಿ, ಆ.16: ಕನ್ಯಾಡಿ ಗ್ರಾಮದ ಇಂದಬೆಟ್ಟು ಹಾಗೂ ಕನ್ಯಾಡಿಗೆ ಸಂಪರ್ಕಿಸುವ ಕೈಲಾಜೆ ಅಂಡಿಮಾರು ರಸ್ತೆಯನ್ನು ಖಾಸಗಿ ವ್ಯಕ್ತಿಯೊರ್ವರು ಆಕ್ರಮಿಸಿದ್ದನ್ನು ಸ್ಥಳೀಯರ ಮನವಿ ಮೇರೆಗೆ ಬೆಳ್ತಂಗಡಿ ತಹಶೀಲ್ದಾರರು ತೆರವುಗೊಳಿಸುವ ಸಂದರ್ಭ ಫಲಾನುಭವಿ ಸಾರ್ವಜನಿಕರು ಗೂಂಡಾ ವರ್ತನೆ ಮಾಡಿದ್ದಾರೆ. ಅಲ್ಲದೆ ಗೂಂಡಾಗಿರಿಗೆ ಶಾಸಕ ವಸಂತ ಬಂಗೇರ ಪ್ರಚೋದನೆ ನೀಡಿದ್ದಾರೆ ಎಂಬ ವದಂತಿಗಳನ್ನು ಕೆಲವರು ಹರಡುತ್ತಿದ್ದು ಆದರೆ ಈ ಘಟನೆ ಸತ್ಯಕ್ಕೆ ದೂರವಾಗಿದೆ ಎಂದು ಫಲಾನುಭವಿ ಗ್ರಾಮಸ್ಥರು ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಧ್ಯಮದಲ್ಲಿ ಬಂದಿರುವ ವಿಚಾರವನ್ನು ಖಂಡಿಸಿದ್ದರಲ್ಲದೆ, ಸತ್ಯಾಸತ್ಯತೆಯನ್ನು ವಿವರಿಸಿದರು.
ಇಂದಬೆಟ್ಟು ಹಾಗೂ ಕನ್ಯಾಡಿಗೆ ಸಂಪರ್ಕಿಸುವ ಕೈಲಾಜೆ, ಅಂಡಿಮಾರು ರಸ್ತೆಯ 100 ಮೀ. ವ್ಯಾಪ್ತಿಯಲ್ಲಿ ಅಲ್ಲಿನ ಕುಂಞಣ್ಣ ಗೌಡ ಹಾಗು ಅವರ ಮಗ ಸಂತೋಷ್ ಗೌಡ ಎರಡು ವರ್ಷಗಳ ಹಿಂದೆ ಆಕ್ರಮಿಸಿ ರಬ್ಬರು ಗಿಡಗಳನ್ನು ನೆಟ್ಟಿದ್ದರು. ಈ ರಸ್ತೆ ಸುಮಾರು 70 ಕುಟುಂಬಗಳಿಗೆ ಪ್ರಯೋಜನಕಾರಿಯಾಗಿದೆ. ಅಕ್ರಮ ಕಂಡುಬಂದ ಹಿನ್ನೆಲೆಯಲ್ಲಿ ನಮ್ಮ ಮನವಿ ಮೇರೆಗೆ ಆ.12 ರಂದು ತಹಶೀಲ್ದಾರರ ಸೂಚನೆಯಂತೆ ಗ್ರಾಮಸ್ಥರ ಸಮ್ಮುಖದಲ್ಲಿ ರಸ್ತೆಯನ್ನು ಪುನರ್ ನಿರ್ಮಿಸಲಾಗಿತ್ತು. ಅಲ್ಲಿ ಪೊಲೀಸರ ಸಮ್ಮುಖದಲ್ಲಿಯೇ ರಸ್ತೆ ನಿರ್ಮಾಣದ ಕಾರ್ಯ ನಡೆದಿದ್ದು ಯಾವುದೇ ಘರ್ಷಣೆಗಳು ನಡೆದಿರಲಿಲ್ಲ. ಗೂಂಡಾಗಿರಿ ನಡೆಸಲಾಗಿದೆ ಎಂದು ಪ್ರಚಾರವಾಗಿದೆ ಎಂದರು. ಶಾಸಕ ವಸಂತ ಬಂಗೇರ ಹಾಗೂ ನಮ್ಮ ಮೇಲೆ ಮಾಡಿರುವ ಆರೋಪಗಳೆಲ್ಲವೂ ನಿರಾಧಾರ ಮತ್ತು ಇದೊಂದು ರಾಜಕೀಯ ಕುತಂತ್ರ ಎಂದು ಸ್ಪಷ್ಟಪಡಿಸಿದರು. ಗೋಷ್ಠಿಯಲ್ಲಿ ಇನಾಸ್ ಡಿಸೋಜ, ದಲಿತ ಮುಖಂಡರಾದ ಪ್ರಭಾಕರ ನಾಯ್ಕ, ಸಂದೇಶ್ ನಾಯ್ಕ, ಮಾಜಿ ಗ್ರಾಪಂ ಸದಸ್ಯ ಸಂಜೀವ ಗೌಡ ಮಾಲ್ದಂಡ, ಕುಶಾಲಪ್ಪ ಗೌಡ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News