ಸೆ.2ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ: ಜಿಲ್ಲಾಮಟ್ಟದ ವಾಹನ ಪ್ರಚಾರ ಜಾಥಾಕ್ಕೆ ಚಾಲನೆ

Update: 2016-08-17 13:00 GMT

ಮಂಗಳೂರು, ಆ.17: ಕಾರ್ಮಿಕ ವರ್ಗದ 17 ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಸೆ.2ರಂದು ಅಖಿಲ ಭಾರತ ಮುಷ್ಕರಕ್ಕೆ ಕರೆ ನೀಡಲಾಗಿದ್ದು, ಮುಷ್ಕರದ ಜಿಲ್ಲಾ ಮಟ್ಟದ ವಾಹನ ಪ್ರಚಾರ ಜಾಥಾಕ್ಕೆ ಇಂದು ನಗರದ ಕೇಂದ್ರ ಸರ್ವಿಸ್ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಲಾಯಿತು.

ವಾಹನ ಜಾಥವನ್ನು ಉದ್ಘಾಟಿಸಿದ ಎಚ್‌ಎಂಎಸ್ ಸಂಘಟನೆಯ ರಾಜ್ಯಾಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ, ದೇಶದ ಆಸ್ತಿಯಾಗಿರುವ ಕಾರ್ಮಿಕ ವರ್ಗ ಇವತ್ತಿನ ಕೇಂದ್ರ ಸರಕಾರದ ನೀತಿಗಳಿಂದಾಗಿ ಸಹಿಸಲಾರದ ಸಂಕಷ್ಟದ ಪರಿಸ್ಥಿತಿಯಲ್ಲಿದ್ದು, ಅದಕ್ಕಾಗಿಯೇ ಕಾರ್ಮಿಕ ಸಂಘಟನೆಗಳು ಒಟ್ಟಾಗಿ ಅಖಿಲ ಭಾರತ ಮುಷ್ಕರವನ್ನು ಹಮ್ಮಿಕೊಂಡಿದೆ . ಸಾರ್ವಜನಿಕ ರಂಗದಲ್ಲಿ ಹಿಂದೆ ಇದ್ದ ಉದ್ಯೋಗಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗುತ್ತಿದೆ. ಅಲ್ಲದೆ ವೇತನವನ್ನೂ ಕಡಿತಗೊಳಿಸಲಾಗುತ್ತಿದೆ. ಹೀಗಾಗಿ ಕನಿಷ್ಟ 18,000 ರೂ. ವೇತನ ಮೊದಲಾದ 17 ಬೇಡಿಕೆಗಳನ್ನು ಆಗ್ರಹಿಸಿ ಸೆ. 2ರಂದು ಅಖಿಲ ಭಾರತ ಮುಷ್ಕರ ನಡೆಯಲಿದೆ ಎಂದು ಹೇಳಿದರು.

 ಸಿಐಟಿಯು ರಾಜ್ಯ ಕಾರ್ಯದರ್ಶಿ ವಸಂತ ಆಚಾರಿ ಮಾತನಾಡಿ, ಯಾವ ಕಾರ್ಮಿಕರಿಂದಾಗಿ ದೇಶದ ಸಂಪತ್ತು ಸೃಷ್ಟಿಯಾಗಿದೆಯೋ, ಅವರನ್ನು ರಕ್ಷಿಸಬೇಕಾದ ಕೇಂದ್ರ ಸರ್ಕಾರ ಕಾರ್ಮಿಕ ಕಾನೂನುಗಳನ್ನು ದುರ್ಬಲಗೊಳಿಸುತ್ತಿದೆ, ಅಲ್ಲದೆ ಉದ್ಯೋಗಪತಿಗಳಾದ ಬಂಡವಾಳಶಾಹಿಗಳಿಗೆ ತೆರಿಗೆ ವಿನಾಯಿತಿ ನೀಡಲಾಗುತ್ತಿದೆ. ಬೆಲೆ ಏರಿಕೆಯನ್ನು ತಡೆಗಟ್ಟುತ್ತಿಲ್ಲ. ಹಾಗಾಗಿ ಕಾರ್ಮಿಕರು ತಮ್ಮ ರಕ್ಷಣೆಗಾಗಿ ಹೋರಾಟಕ್ಕೆ ಮುಂದಾಗಿದ್ದಾರೆ ಎಂದು ಹೇಳಿದರು.
 
ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಇಳಿಕೆಯಾಗಿದ್ದರೂ, ದೇಶದ ಖಾಸಗಿ ತೈಲ ಕಂಪೆನಿಗಳ ರಕ್ಷಣೆಗಾಗಿ ತೈಲ ಬೆಲೆಯ ಮೇಲೆ ತೆರಿಗೆಗಳನ್ನು ಹೆಚ್ಚಿಸಿ ಗ್ರಾಹಕರ ಮೇಲೆ ಹೊರಿಸಲಾಗಿದೆ. ಇದರ ಪರಿಣಾಮವಾಗಿ ಎಲ್ಲಾ ವಸ್ತುಗಳ ಬೆಲೆಗಳೂ ಏರಿಕೆಯಾಗಿದೆ. ಇನ್ನೊಂದೆಡೆ ಉದ್ಯೋಗದಲ್ಲಿ ನೇಮಕಾತಿಗಳಿಗೆ ನಿಷೇಧವಿದೆ. ಇರುವ ಕೆಲಸವನ್ನು ಗುತ್ತಿಗೆಯಲ್ಲಿ ಮಾಡಿಸಲಾಗುತ್ತಿದೆ. ಸಾರ್ವಜನಿಕ ಉದ್ಯಮಗಳನ್ನು ಖಾಸಗಿಯವರಿಗೆ ನೀಡುವ ಕ್ರಮಗಳು ಆರಂಭವಾಗಿದೆ. ದೊಡ್ಡ ಬಂಡವಾಳಶಾಹಿಗಳ ರಕ್ಷಣೆಗಾಗಿ ಸರ್ಕಾರ ಬೆಲೆಏರಿಕೆ ಹಾಗೂ ಕಾರ್ಮಿಕ ಕಾನೂನುಗಳನ್ನು ದುರ್ಬಲಗೊಳಿಸಲು ಅವಕಾಶ ನೀಡಿದ್ದು, ಈ ದೊಡ್ಡ ಬಂಡವಾಳಶಾಹಿಯ ಎದುರಾಗಿ ಕಾರ್ಮಿಕ ಸಂಘಟನೆಗಳು ಅಖಿಲ ಭಾರತ ಮುಷ್ಕರವನ್ನು ಹಮ್ಮಿಕೊಂಡಿವೆ ಎಂದು ಹೇಳಿದರು.

ಎಐಟಿಯುಸಿ ದ.ಕ ಜಿಲ್ಲಾ ಕಾರ್ಯದರ್ಶಿ ಎಚ್.ವಿ.ರಾವ್ ಮಾತನಾಡಿ, ಕೇಂದ್ರ ಸರಕಾರದ ಈ ಅವಧಿಯಲ್ಲಿ ಬೇಳೆಕಾಳು ಬೆಲೆ ದುಪ್ಪಟ್ಟಾಗಿದೆ. ಕಾರ್ಮಿಕರಿಗೆ ಬೆಲೆ ಏರಿಕೆಗೆ ತಕ್ಕ ತುಟ್ಟಿಭತ್ತೆ ದೊರೆಯುತ್ತಿಲ್ಲ. ಸ್ವಾತಂತ್ರ್ಯದ ಬಳಿಕ ದೇಶದ ಕಾರ್ಮಿಕರು ನಡೆಸಿದ ಹೋರಾಟಗಳ ಪರಿಣಾಮವಾಗಿ ಕಾರ್ಮಿಕರಿಗೆ ಹಲವಾರು ಸವಲತ್ತಗಳು ದೊರಕಿದ್ದು, ಈಗಿನ ಕೇಂದ್ರ ಸರ್ಕಾರ ಅವೆಲ್ಲವನ್ನು ಕಳಚಿ 5 ಕಾರ್ಮಿಕ ಕೋಡ್‌ಗಳಾಗಿ ಮಾಡಿ, ಸಿಕ್ಕ ಸವಲತ್ತುಗಳನ್ನು ಇಲ್ಲವಾಗಿಸುವ ಕ್ರಮ ಕೈಗೊಳ್ಳುತ್ತಿದೆ ಎಂದು ಆರೋಪಿಸಿದರು.

ಸಿಐಟಿಯು ದ.ಕ. ಜಿಲ್ಲಾಧ್ಯಕ್ಷ ಜೆ. ಬಾಲಕೃಷ್ಣ ಶೆಟ್ಟಿ ಪ್ರಸ್ತಾವನೆಗೈದರು. ಸುನೀಲ್‌ಕುಮಾರ್ ಬಜಾಲ್ ವಂದಿಸಿದರು. ಬಿಎಸ್‌ಎನ್‌ಎಲ್ ನೌಕರ ಸಂಘದ ಮುಖಂಡ ಕೃಷ್ಣ ಉಪಸ್ಥಿತರಿದ್ದರು.

ವಾಹನ ಜಾಥಾವು ಮಂಗಳೂರಿನಿಂದ ತೊಕ್ಕೊಟ್ಟು, ಬಿ.ಸಿ.ರೋಡ್, ಕಲ್ಲಡ್ಕ, ವಿಟ್ಲ, ಪುತ್ತೂರು, ಸುಳ್ಯ, ಬೆಳ್ತಂಗಡಿ, ಮೂಡಬಿದ್ರಿ, ಗುರುಪುರ ಕೈಕಂಬ ಮೊದಲಾದೆಡೆ ಸಂಚರಿಸಿ, ಆಗಸ್ಟ್ 19ರ ಸಂಜೆ ಕೂಳೂರಿನಲ್ಲಿ ಸಮಾಪನಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News