ಆ.20ರಂದು ಮೈಸೂರಿನಲ್ಲಿ ಎಸ್ಸೆಸ್ಸೆಫ್ ಆಝಾದಿ ರ್ಯಾಲಿ ಹಾಗೂ ಸಮಾವೇಶ

Update: 2016-08-18 18:10 GMT

ಮಂಗಳೂರು, ಆ.18: 70ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ ಹಮ್ಮಿಕೊಂಡಿರುವ ಆಝಾದಿ ಸಪ್ತಾಹದ ಸಮಾರೋಪ ಹಾಗೂ ಬೃಹತ್ ಆಝಾದಿ ರ್ಯಾಲಿ ಮತ್ತು ಸಮಾವೇಶವು ಆಗಸ್ಟ್ 20 ಶನಿವಾರ ಅಪರಾಹ್ನ ಮೈಸೂರಿನಲ್ಲಿ ನಡೆಯಲಿದೆ.

‘ನಮ್ಮೊಳಗಿನ ಭಾರತ ಜಾಗೃತಗೊಳ್ಳಲಿ’ ಎಂಬ ಧ್ಯೇಯ ವಾಕ್ಯದೊಂದಿಗೆ ಎಸ್ಸೆಸ್ಸೆಫ್ ವರ್ಷಂಪ್ರತಿ ಆಝಾದಿ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಂಡು, ದೇಶಪ್ರೇಮ ಮತ್ತು ರಾಷ್ಟ್ರರಕ್ಷಣೆಯ ಬಗ್ಗೆ ಅರಿವು ಮೂಡಿಸಿ,ಉಗ್ರವಾದ,ಕೋಮುವಾದ, ಭ್ರಷ್ಟಾಚಾರ ,ದೇಶಕ್ಕೆ ಮಾರಕವಾಗುವ ಇತರ ವಿಷಯಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ.

ರಾಜ್ಯದ ನಾನಾ ಕಡೆಗಳಿಂದ ಆಗಮಿಸುವ ಸಂಘಟನೆಯ ಪ್ರತಿನಿಧಿಗಳು ರಾಷ್ಟ್ರದ ಉದಾತ್ತವಾದ ಸೌಹಾರ್ದ ಪರಂಪರೆಯನ್ನು ಎತ್ತಿಹಿಡಿಯುವ ಸಂಕಲ್ಪ ತೊಟ್ಟು ಪ್ರತಿಜ್ಞೆಯನ್ನು ಸ್ವೀಕರಿಸಲಿದ್ದಾರೆ.

ಶನಿವಾರ ಅಪರಾಹ್ನ 2 ಗಂಟೆಗೆ ಮೈಸೂರಿನ ಶಾಂತಿನಗರದಿಂದ ಆಝಾದಿ ರ್ಯಾಲಿ ಗೆ ಚಾಲನೆ ದೊರೆಯಲಿದ್ದು, ಅಪರಾಹ್ನ 3:30ಕ್ಕೆ ರಾಜೀವ್ ನಗರದಲ್ಲಿ ಸಮಾವೇಶಗೊಳ್ಳಲಿದೆ. ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ವಕ್ಫರ್ ಬೋರ್ಡ್ ನಿರ್ದೇಶಕ ಎನ್.ಕೆ.ಎಂ. ಶಾಫಿ ಸಅದಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಮೌಲಾನ ಮುಫ್ತಿ ಸಜ್ಜಾದ್ ಹುಸೈನ್ ಮಿಸ್ಬಾಹಿ, ಖಾಝಿ ಎ ಶರೀಅಃ ಮೈಸೂರು ಜಿಲ್ಲೆ ದುಆ ನೇತೃತ್ವ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮೌಲಾನ ಎಮ್ಮೆಸ್ಸೆಂ ಝೈನಿ ಕಾಮಿಲ್ ಸಖಾಫಿ, ಶ್ರೀ ಸಚ್ಚಿದಾನಂದ ಸ್ವಾಮೀಜಿ ಗಣಪತಿ ಮಠ ಮೈಸೂರು, ರೆ.ಫಾ ಅಲ್ಮೇರಾ ಮದರ್ ತೆರೆಸಾ ಇಗರ್ಜಿ ಮೈಸೂರು ಸಂದೇಶ ಭಾಷಣ ಮಾಡಲಿದ್ದಾರೆ. ಮೈಸೂರು ಉಸ್ತುವಾರಿ ಸಚಿವ ಡಾ. ಎಚ್.ಸಿ ಮಹದೇವಪ್ಪ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್, ಆಹಾರ ಮತ್ತು ನಾಗರಿಕ ಇಲಾಖೆ ಸಚಿವ ಯು.ಟಿ ಖಾದರ್, ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಸ್ಥಳೀಯ ಶಾಸಕರಾದ ವಾಸು, ಮಂಗಳೂರು ಉತ್ತರ ಕ್ಷೇತ್ರದ ಶಾಸಕರಾದ ಮೊಯ್ದೀನ್ ಬಾವ, ಮೇಯರ್ ಬಿ.ಎಲ್ ಭೈರಪ್ಪ ಸೇರಿದಂತೆ ಧಾರ್ಮಿಕ , ಸಾಮಾಜಿಕ, ರಾಜಕೀಯ ನಾಯಕರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News