ವಾಮಂಜೂರು: ಚರಣ್ ಪೂಜಾರಿ ಕೊಲೆ ಪ್ರಕರಣ; ಐವರು ವಶಕ್ಕೆ?

Update: 2016-08-19 13:59 GMT

ಮಂಗಳೂರು, ಆ.19: ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳ ತಂಡವೊಂದು ರೌಡಿ ಶೀಟರ್‌ನೋರ್ವನನ್ನು ಕಡಿದು ಕೊಲೆ ಮಾಡಿದ ಘಟನೆ ಇಂದು ಮಧ್ಯಾಹ್ನ ವಾಮಂಜೂರಿನಲ್ಲಿ ನಡೆದಿದೆ. ಕೊಲೆಗೆ ಸಂಬಂಧಿಸಿ ಪೊಲೀಸರು ಐದು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಕೊಲೆಗೀಡಾದ ಮೂಡುಶೆಡ್ಡೆ ನಿವಾಸಿ ಚರಣ್ ಪೂಜಾರಿ ಎಂದು ಗುರುತಿಸಲಾಗಿದೆ. ಚರಣ್ ಇಂದು ಮಧ್ಯಾಹ್ನ ಸುಮಾರು 1 ಗಂಟೆ ಹೊತ್ತಿಗೆ ತನ್ನ ಪತ್ನಿ ಹಾಗೂ ಮಗುವಿನ ಸಮೇತ ಆಟೋ ರಿಕ್ಷಾದಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ವಾಮಂಜೂರು ಪೆಟ್ರೋಲ್ ಬಂಕ್ ಬಳಿ ಸ್ಕಾರ್ಪಿಯೋ ಕಾರಿನಲ್ಲಿ ಬಂದ ತಂಡವೊಂದು ಚರಣ್‌ರನ್ನು ಎಳೆದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆ. ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಚರಣ್‌ರನ್ನು ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಧ್ಯಾಹ್ನ ಸುಮಾರು 3:15ಕ್ಕೆ ಆತ ಮೃತಪಟ್ಟಿರುವುದಾಗಿ ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಕೊಲೆ ಗೀಡಾದ ಚರಣ್ ರೌಡಿ ಶೀಟರ್‌ಯಾಗಿದ್ದು, ಕೆಲವು ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿದೆ. ವಾಮಂಜೂರು ರೋಹಿತ್ ಕೊಲೆ ಪ್ರಕರಣ ಹಾಗೂ ಕಾವೂರಿನ ಅನ್ಸಾರ್ ಎಂಬಾತನ ಮೇಲೆ ನಡೆದ ಕೊಲೆ ಯತ್ನ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಚರಣ್ ಹಾಗೂ ಕೊಲೆ ನಡೆಸಿದ ತಂಡದ ನಡುವೆ ಇದ್ದ ಹಳೆಯ ವೈಷಮ್ಯವೇ ಕೊಲೆಗೆ ಕಾರಣ ಎಂದು ಹೇಳಲಾಗಿದೆ.

ಐವರು ವಶಕ್ಕೆ ?

ಕೊಲೆಗೆ ಸಂಬಂಧಿಸಿ ಮೂಡುಶೆಡ್ಡೆಯ ರಿಜ್ಜು ಯಾನೆ ರಿಝ್ವೆನ್, ವಾಮಂಜೂರಿನ ರಾಯಿಫ್, ಶಾರುಖ್, ವಾಮಂಜೂರಿನ ಮುಸ್ತಫಾ, ಗುರುಪುರದ ನವಾಝ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯ ಬಳಿಕ ಪರಾರಿಯಾಗಿದ್ದ ಆರೋಪಿಗಳನ್ನು ಕೆಲವೇ ತಾಸಿನಲ್ಲಿ ಪೊಲೀಸರು ಬಿ.ಸಿ.ರೋಡ್‌ನ ಟೋಲ್‌ಗೇಟ್ ಬಳಿ ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿದೆ. ಕೊಲೆ ನಡೆದ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದು, ಆರೋಪಿಗಳು ಸಂಚರಿಸುತ್ತಿದ್ದ ಬೊಲೊರೊ ಕಾರನ್ನು ಬಿ.ಸಿ.ರೋಡ್‌ನ ಟೋಲ್‌ಗೇಟ್ ಬಳಿ ತಡೆದು ನಿಲ್ಲಿಸಿ ಐವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News