ಕೈಗೆ ಬಂದ ತುತ್ತು ಬಾಯಿಗೆ ಸಿಗಲಿಲ್ಲ!: ಮಂಗಳೂರಿನ ಕೆಎಸ್‌ಟಿಡಿಸಿ ಬಸ್ ಸೌಲಭ್ಯ ಸ್ಥಗಿತ

Update: 2016-08-19 18:54 GMT

ಮಂಗಳೂರು, ಆ.19: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆ(ಕೆಎಸ್‌ಟಿಡಿಸಿ)ಯಿಂದ ಪ್ರವಾಸಿಗರಿಗೆ ಮಂಗಳೂರು ಸುತ್ತ ಪ್ರಯಾಣ ಕಲ್ಪಿಸಲು ಆರಂಭಗೊಂಡ ಕೆಎಸ್‌ಟಿಡಿಸಿ ಬಸ್ ಉದ್ಘಾಟನೆಗೊಂಡ ಮೂರೇ ತಿಂಗಳಲ್ಲಿ ಸ್ಥಗಿತಗೊಂಡು ಮೈಸೂರು ಸೇರಿದ್ದು, ಇದರಿಂದ ಪ್ರಯಾಣಿಕರ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ.

ಎ.17ರಂದು ಮಂಗಳೂರಿನ ಪಿಲಿಕುಳ ಡಾ.ಶಿವರಾಮ ಕಾರಂತ ನಿಸರ್ಗಧಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ ಕೆಎಸ್‌ಡಿಸಿ ಬಸ್‌ನ್ನು ಉದ್ಘಾಟಿಸಿದ್ದರು. ಆದರೆ ಬಸ್ ಉದ್ಘಾಟನೆಗೊಂಡ ಸಂದರ್ಭದಲ್ಲಿದ್ದ ಉತ್ಸಾಹ ಮಾತ್ರ ಪ್ರಯಾಣದಲ್ಲಿ ಇಲ್ಲದೇ ಹೋದಂತಾಗಿದೆ. ಬಸ್ ಆರಂಭವಾದ ಕೆಲ ದಿನಗಳಲ್ಲೇ ಮೂಲೆ ಗುಂಪಾಗಿತ್ತು. ಬಳಿಕ ಮುಂಗಾರು ಆರಂಭಗೊಳ್ಳುತ್ತಿದ್ದಂತೆಯೇ, ಬಸ್‌ನ ಹವಾನಿಯಂತ್ರಿತ ವ್ಯವಸ್ಥೆ ಹದಗೆಟ್ಟಿತು. ಇದರಿಂದ ಕೆಲ ಕಾಲ ಸ್ಥಗಿತಗೊಂಡಿದ್ದ ಬಸ್‌ನ ಕೆಲವೊಂದು ಬಿಡಿ ಭಾಗಗಳು ಸಹ ಹಾಳಾಗುತ್ತಿರುವುದನ್ನು ಗಮನಿಸಿದ ಇಲಾಖೆ ಕೊನೆಗೂ ಕೆಲ ದಿನಗಳ ಹಿಂದೆ ಅದನ್ನು ಬೆಂಗಳೂರಿಗೆ ಸಾಗಿಸಿದೆ.

ಮಂಗಳೂರಿನಲ್ಲಿ ಖಾಸಗಿ ಬಸ್‌ಗಳು ಸಾಕಷ್ಟು ಇರುವುದ ರಿಂದಲೋ ಅಥವಾ ಪ್ರವಾಸಿಗರಿಗೆ ಈ ಬಸ್‌ನ ಬಗ್ಗೆ ಮಾಹಿತಿ ದೊರೆಯದಿರುವುದರಿಂದಲೋ ಇಲಾಖೆ ಕೂಡಾ ಈ ಕುರಿತು ಹೆಚ್ಚಿನ ಆಸಕ್ತಿ ತೋರಿಸದ ಕಾರಣ ಪ್ರವಾಸಿ ಗರ ಅನುಕೂಲಕ್ಕೆಂದು ರೂಪಿಸಲಾಗಿದ್ದ ಬಸ್ ಕೊನೆಗೂ ಮಂಗಳೂರಿನಿಂದ ಎತ್ತಂಗಡಿ ಆಗಿದೆ. ಮಳೆಗಾಲದ ಬಳಿಕ ಮತ್ತೆ ಬಸ್ ಕಾರ್ಯಾರಂಭಿಸಲಿದೆ ಎನ್ನುವುದು ಪ್ರವಾಸೋದ್ಯಮ ಇಲಾಖೆಯ ಸ್ಥಳೀಯ ಅಧಿಕಾರಿಗಳ ಅಭಿಪ್ರಾಯ.

ನಗರದ ಪ್ರಮುಖ ತಾಣಗಳ ಪ್ರಯಾಣ ಸೌಲಭ್ಯ

ಕೆಎಸ್‌ಟಿಡಿಸಿಯ ಸಿಟಿ ಪ್ರವಾಸಿ ಬಸ್ ಪ್ರತಿದಿನವೂ ಪ್ರವಾಸಿಗರಿಗೆ ಲಭ್ಯವಾಗಲಿದೆ ಎಂಬುದು ಇಲಾಖೆಯ ಹೇಳಿಕೆಯಾಗಿತ್ತು. ಪ್ರಯಾಣವೊಂದರಲ್ಲಿ ಕನಿಷ್ಠ 10 ಮಂದಿ ಪ್ರವಾಸಿಗರು ಇರಲೇಬೇಕು ಎಂದು ಷರತ್ತನ್ನೂ ವಿಧಿಸಲಾಗಿತ್ತು. ಪ್ರತಿಯೊಬ್ಬರಿಗೆ ತಲಾ 190 ರೂ. ಪ್ರಯಾಣ ದರ. ಬೆಳಗ್ಗೆ 8ಕ್ಕೆ ಲಾಲ್‌ಬಾಗ್‌ನಿಂದ ಹೊರಟು ಕುದ್ರೋಳಿ ದೇವಸ್ಥಾನ, 9:15ಕ್ಕೆ ಕದ್ರಿ ದೇವಸ್ಥಾನ, 10:15ಕ್ಕೆ ಮಂಗಳಾದೇವಿ ದೇವಸ್ಥಾನ, 11:15ಕ್ಕೆ ಸಂತ ಅಲೋಶಿಯಸ್ ಚಾಪಲ್, 12:30 ಊಟದ ವಿರಾಮ, 2 ಗಂಟೆಗೆ ಪಿಲಿಕುಳ ನಿಸರ್ಗಧಾಮ, ಜೈವಿಕ ಉದ್ಯಾನವನ, ಸಂಜೆ 5ಕ್ಕೆ ತಣ್ಣೀರುಬಾವಿ ಟ್ರೀ ಪಾರ್ಕ್ ಮತ್ತು ಸಮುದ್ರ ತೀರಕ್ಕೆ ಸಂಚರಿಸಿ 7ಕ್ಕೆ ಲಾಲ್‌ಬಾಗ್‌ಗೆ ತೆರಳುವಂತೆ ಸಮಯ ನಿಗದಿಯಾಗಿತ್ತು. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪ್ರವಾಸ ಕೈಗೊಳ್ಳಲು ಅವಕಾಶದ ಜತೆಗೆ ವಿದ್ಯಾರ್ಥಿಗಳಿಗೆ ಶೇ.10 ರಿಯಾಯಿತಿಯನ್ನೂ ನೀಡಲಾಗಿತ್ತು.

‘ಶೀಘ್ರದಲ್ಲೇ ಬರಲಿದೆ ಪ್ರವಾಸಿ ಬಸ್’
‘ಭಾರೀ ನಿರೀಕ್ಷೆಯೊಂದಿಗೆ ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿ ಬಸ್‌ನ್ನು ಮಂಗಳೂರಿಗೆ ತರಲಾಗಿತ್ತು. ಆದರೆ ಇಲ್ಲಿ ಸಾಕಷ್ಟು ಪ್ರಚಾರದ ಕೊರತೆಯಿಂದ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ವಿಫಲವಾದ ಕಾರಣ, ಇದೀಗ ಸ್ಥಗಿತಗೊಂಡಿದೆ. ಈ ಬಗ್ಗೆ ಪ್ರವಾಸೋದ್ಯಮ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಮಾತುಕತೆ ನಡೆಸಿದ್ದೇನೆ. ಪ್ರವಾಸಿ ಬಸ್‌ನಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ವಿವಿಧೆಡೆ ಬುಕಿಂಗ್ ವ್ಯವಸ್ಥೆ ಕೈಗೊಳ್ಳಬೇಕು ಹಾಗೂ ಯಾವ ರೀತಿಯಲ್ಲಿ ಪ್ರಚಾರ ನೀಡಬೇಕು ಎಂಬ ಬಗ್ಗೆ ಚರ್ಚಿಸಲಾಗಿದೆ. ಅಲ್ಲದೆ ಮೈಸೂರಿನಲ್ಲಿ ಲಭ್ಯವಿರುವಂತೆ ತೆರೆದ ಬಸ್(ಓಪನ್ ಬಸ್)ಗಳ ವ್ಯವಸ್ಥೆಯನ್ನೂ ಮಂಗಳೂರಿಗೆ ಒದಗಿಸುವ ಮೂಲಕ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಬಹುದು ಎಂದು ಮನವರಿಕೆ ಮಾಡಿದ್ದು, ಇಲಾಖೆ ಮುಖ್ಯಸ್ಥರು ಒಪ್ಪಿಕೊಂಡಿದ್ದಾರೆ. ಶೀಘ್ರದಲ್ಲೇ ಬಸ್‌ಗಳು ಮತ್ತೆ ನಗರದಲ್ಲಿ ಓಡಾಡಲಿವೆ. ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ ಅವರು ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News