‘ಸಂತೆ ಉಳಿಸಿ’ ಹೋರಾಟ ಸಮಿತಿ ಸಭೆಯಲ್ಲಿ ಎ.ಸಿ ಆದೇಶಕ್ಕೆ ತೀವ್ರ ಆಕ್ಷೇಪ: ಹೋರಾಟದ ಎಚ್ಚರಿಕೆ

Update: 2016-08-20 11:43 GMT

ಪುತ್ತೂರು, ಆ.20: ಪುತ್ತೂರಿನ ಕಿಲ್ಲೆ ಮೈದಾನ ಮತ್ತು ಸುತ್ತಮುತ್ತಲಿನ ರಸ್ತೆ ಬದಿಗಳಲ್ಲಿ ಸೋಮವಾರ ನಡೆಯುತ್ತಿದ್ದ ವಾರದ ಸಂತೆಯನ್ನು ಸ್ಥಳಾಂತರಿಸುವ ಮೂಲಕ ರೈತರನ್ನು ಬೀದಿಪಾಲು ಮಾಡಿದ್ದಾರೆ ಎಂದು ಆರೋಪಿಸಿದ ಸಂತೆ ವ್ಯಾಪಾರಿಗಳು, ಉಪವಿಭಾಗಾಧಿಕಾರಿಗಳು ಸಂತೆ ಸ್ಥಳಾಂತರಿಸುವ ಕುರಿತು ಹೊರಡಿಸಿದ ಆದೇಶಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ವಾರದ ಸಂತೆ ಕಿಲ್ಲೆ ಮೈದಾನದಲ್ಲೇ ಮುಂದುವರಿಯಬೇಕು ಎಂದು ಆಗ್ರಹಿಸಿದ ಅವರು ತಪ್ಪಿದಲ್ಲಿ ಮುಂದೆ ಸಂವಿಸಬಹುದಾದ ಎಲ್ಲಾ ಪರಿಣಾಮಗಳಿಗೆ ಪುತ್ತೂರಿನ ಅಧಿಕಾರಿಗಳು ಹಾಗೂ ಸರಕಾರವೇ ಹೊಣೆ ಎಂದು ಎಚ್ಚರಿಸಿದ್ದಾರೆ.

ಸಂತೆ ಉಳಿಸಿ ಹೋರಾಟ ಸಮಿತಿಯ ವತಿಯಿಂದ ಗುರುವಾರ ಪುತ್ತೂರಿನ ಟೌನ್‌ಬ್ಯಾಂಕ್ ಸಭಾಂಗಣದಲ್ಲಿ ನಡೆದ ರೈತರನ್ನು ಬದುಕಲು ಬಿಡಿ ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿಗಳು ಹೊರಡಿಸಿರುವ ಆದೇಶಕ್ಕೆ ವಿರೋಧ ವ್ಯಕ್ತವಾಯಿತು, ಉಪವಿಬಾಗಾಧಿಕಾರಿಗಳ ಆದೇಶಕ್ಕೆ ಆಕ್ಷೇಪಣೆಗಳಿದ್ದರೆ ಆಗಸ್ಟ್ 20ರಂದು ಆಕ್ಷೇಪ ಸಲ್ಲಿಸಲು ತಿಳಿಸಿದ್ದಾರೆ. ಅದರಂತೆ ಈ ಆದೇಶಕ್ಕೆ ಆಕ್ಷೇಪಣೆ ಸಲ್ಲಿಸಲು ಸಂತೆ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷ, ಕಾರ್ಯದರ್ಶಿ, ಸದಸ್ಯರಿಗೂ ಅವಕಾಶ ನೀಡಬೇಕು. ಈ ಪ್ರಕ್ರಿಯೆಯಲ್ಲಿ ವ್ಯಾಪಾರಿ, ರೈತರನ್ನು ಪಕ್ಷಕಾರರನ್ನಾಗಿ ಮಾಡಿ ನೊಟೀಸು ನೀಡಿ ವಿವರವಾದ ಆಕ್ಷೇಪ ಸಲ್ಲಿಸಲು ಅವಕಾಶ ನೀಡಬೇಕು. ದಾಖಲೆ ಸಲ್ಲಿಸಲು ಅವಕಾಶ ನೀಡಿ ವಿಚಾರಣೆ ನಡೆಸಲು ಅನುಮತಿ ನೀಡುವಂತೆ ಒತ್ತಾಯಿಸಲಾಯಿತು.

ಪತ್ರಕರ್ತ ಬಿ.ಟಿ.ರಂಜನ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಏಕಪಕ್ಷೀಯ ವಿಚಾರವನ್ನು ಒಪ್ಪಲು ಸಾಧ್ಯವಿಲ್ಲ. ಉಪವಿಭಾಗಾಧಿಕಾರಿಗಳು ಪುತ್ತೂರಿನ ವಾರದ ಸಂತೆಯನ್ನು ಸ್ಥಳಾಂತರ ಮಾಡಲು ಆದೇಶ ನೀಡಿದ್ದಾರೆ. ಹಾಗಾದರೆ ನಗರಸಭೆಯ ಅಧಿಕಾರವೇನು ಎಂಬ ಬಗ್ಗೆ ಜಿಜ್ಞಾಸೆ ಮೂಡುತ್ತದೆ. ನಗರಸಭೆಗೆ ಅಥವಾ ಗುತ್ತಿಗೆದಾರರಿಗೆ ನೊಟಿಸ್ ನೀಡಿದರೆ ಆಕ್ಷೇಪ ಇರುತ್ತಿರಲಿಲ್ಲ. ಆದರೆ ಇಂತಹ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಅಧಿಕಾರ ಬಳಸಿಕೊಳ್ಳುತ್ತೇನೆ ಎಂದಾದರೆ ರಸ್ತೆಗೆ ಅಡ್ಡವಾಗಿರುವ ವಿದ್ಯುತ್ ಕಂಬಗಳನ್ನು ಮೊದಲು ಬದಿಗೆ ಹಾಕಲಿ. ವಾಹನ ಪಾರ್ಕಿಂಗ್‌ಗೆ ಸೂಕ್ತ ವ್ಯವಸ್ಥೆ ಮಾಡಲಿ. ಸಾಮರ್ಥ್ಯವಿದ್ದರೆ ಬೆಳ್ತಂಗಡಿಯ ಸಂತೆಯನ್ನು ಮುಟ್ಟಿ ನೋಡಲಿ ಎಂದು ಸವಾಲು ಹಾಕಿದರು.

ಸಂತೆ ಟೆಂಡರ್ ವಹಿಸಿಕೊಂಡಿರುವ ಜಯರಾಮ್ ಮಾತನಾಡಿ, ಸಂತೆಯನ್ನು ನಂಬಿಕೊಂಡು ಸಾಲ ಮಾಡಿ ಹಣ ಕಟ್ಟಿದ್ದೇನೆ. ಇದೀಗ ಬೀದಿಗೆ ಬೀಳುವಂತಾಗಿದೆ. ಏಕಾಏಕಿ ಹೊರದಬ್ಬಿದ್ದು ರಸ್ತೆ ಬದಿ ಬಿದ್ದು ಅನಾಥವಾಗಿದ್ದೇನೆ. ಉಪವಿಭಾಗಾಧಿಕಾರಿಗಳ ಊರಾದ ತೀರ್ಥಹಳ್ಳಿಯಲ್ಲಿ ರಸ್ತೆಬದಿಯೇ ಸಂತೆ ನಡೆಯುತ್ತದೆ. ಬೆಳ್ತಂಗಡಿಯಲ್ಲೂ ಬೀದಿಬದಿಯೇ ಸಂತೆ ನಡೆಯುತ್ತಿದೆ. ಆದರೆ ಪುತ್ತೂರಿನಲ್ಲಿ ಮಾತ್ರ ಕಿಲ್ಲೆ ಮೈದಾನದಲ್ಲಿ ಸಂತೆ ಮಾಡಬಾರದು ಎನ್ನುತ್ತಿದ್ದಾರೆ. ಚಿನ್ನ ಅಡವಿಟ್ಟು ಇದೀಗ ಏನು ಮಾಡುವುದು ಎಂಬ ಚಿಂತೆಯಲ್ಲಿದ್ದೇನೆ ಎಂದು ಅಳಲು ತೋಡಿಕೊಂಡರು.

ಸಂತೆ ವ್ಯಾಪಾರಿ ಹಾಸನದ ಮಂಜುನಾಥ್ ಮಾತನಾಡಿ, 15 ವರ್ಷಗಳ ಹಿಂದೆ ಇದೇ ಸಂತೆಯನ್ನು ಸ್ಥಳಾಂತರಿಸಬೇಕು ಎಂಬ ಪ್ರಸ್ತಾಪ ಬಂದಿತ್ತು. ಬಳಿಕ ನನೆಗುದಿಗೆ ಬಿತ್ತು. ತಾಯಿ-ಮಗುವನ್ನು ಒಮ್ಮಿಂದೊಮ್ಮೆಲೇ ಮನೆಯಿಂದ ಹೊರಗೆ ಹಾಕಿದ ಸ್ಥಿತಿ ನಮಗಿಂದು ಎದುರಾಗಿದೆ. ನಾವು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದೇವೆ ಎಂದರು.

ನಗರಸಭೆಯ ಸದಸ್ಯ ರಾಜೇಶ್ ಬನ್ನೂರು ಪ್ರಾಸ್ತಾವಿಕವಾಗಿ ಮಾತನಾಡಿ, ರೈತ ವ್ಯಾಪಾರಿಗಳ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ರೈತ ಶೀನಪ್ಪ ಮೂಲ್ಯ ಅಭಿಪ್ರಾಯ ವ್ಯಕ್ತಪಡಿಸಿದರು. ಸಮಿತಿ ಅಧ್ಯಕ್ಷ ಆನಂದ್, ಕಾರ್ಯದರ್ಶಿ ನಝೀರ್ ಮತ್ತಿತರರು ಇದ್ದರು.

ಟೌನ್ ಬ್ಯಾಂಕ್‌ನಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಂಡ ವ್ಯಾಪಾರಿಗಳು ಬಳಿಕ ಟೌನ್‌ಬ್ಯಾಂಕ್‌ನಿಂದ ಮುಖ್ಯರಸ್ತೆಗೆ ಸಾಗಿ, ಕೋರ್ಟ್ ರಸ್ತೆಯಾಗಿ ಮಿನಿ ವಿಧಾನಸೌಧಕ್ಕೆ ಜಾಥಾ ನಡೆಸಿ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು. ಉಪವಿಭಾಗಾಧಿಕಾರಿಗಳ ಕಚೇರಿಯ ಮ್ಯಾನೇಜರ್ ಮನವಿ ಸ್ವೀಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News