ಬೆಳ್ತಂಗಡಿ: ಡಿ. ದೇವರಾಜ ಅರಸು ಅವರ 101ನೆ ಜನ್ಮದಿನಾಚರಣೆ

Update: 2016-08-20 12:57 GMT

ಬೆಳ್ತಂಗಡಿ, ಆ.20: ಅಂದು ದೇವರಾಜು ಅರಸು ಅವರು ಮಾಡಿದ ಸುಧಾರಣಾ ಕಾರ್ಯಕ್ರಮಗಳಿಂದಾಗಿ ಹಿಂದುಳಿದ ವರ್ಗದ ಜನತೆ ನೆಮ್ಮದಿಯ ಜೀವನ ನಡೆಸುವಂತಾಗಿದೆ ಎಂದು ನ.ಪಂ. ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಹೇಳಿದರು.

ಅವರು ಶನಿವಾರ ತಾ.ಪಂ. ಸಭಾಂಗಣದಲ್ಲಿ ತಾಲೂಕು ಆಡಳಿತ, ತಾ.ಪಂ., ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ನ.ಪಂ. ವತಿಯಿಂದ ನಡೆದ ಡಿ.ದೇವರಾಜು ಅರಸುರವರ 101ನೆ ಜನ್ಮದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಇಂದು ರಾಜ್ಯದ ಪ್ರತಿ ತಾಲೂಕಿನಲ್ಲಿ ಹಿಂದುಳಿದ ವರ್ಗದವರಿಗೆ ವಿದ್ಯಾರ್ಥಿನಿಲಯಗಳು ಇದ್ದು, ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆದಿದ್ದಾರೆ ಮತ್ತು ಪಡೆಯುತ್ತಿದ್ದಾರೆ. ಈ ಯೋಜನೆಯು ಅರಸು ಅವರ ದೂರದೃಷ್ಟಿಯ ಫಲವಾಗಿದೆ ಎಂದರು.

ಅಕ್ಷರ ದಾಸೋಹ ಉಪನಿರ್ದೇಶಕ ಕೆ.ಜಿ. ಲಕ್ಷ್ಮಣ ಶೆಟ್ಟಿ ಪ್ರಧಾನ ಭಾಷಣ ಮಾಡಿ, ಉಳುವವನೇ ಹೊಲದೊಡೆಯ, ಭೂ ಸುಧಾರಣೆ, ಜೀತ ಪದ್ಧತಿ ನಿರ್ಮೂಲನೆ, ದಲಿತರಿಗೆ ಹೆಚ್ಚಿನ ಅವಕಾಶಗಳನ್ನು ನೀಡದ ಕೀರ್ತಿ ಅರಸು ಅವರಿಗಿದೆ. ಅವರ ಯೋಜನೆಗಳ ಫಲವನ್ನು ನಾವಿಂದು ಪಡೆಯುತ್ತಿದ್ದೇವೆ ಎಂದರು.

ಅಧ್ಯಕ್ಷತೆಯನ್ನು ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ ವಹಿಸಿದ್ದರು. ವೇದಿಕೆಯಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸಿ. ಆರ್.ನರೇಂದ್ರ, ತಹಶೀಲ್ದಾರ್ ಎಚ್. ಕೆ. ಪ್ರಸನ್ನಮೂರ್ತಿ ಇದ್ದರು. ಜಿ.ಪಂ. ಸದಸ್ಯರಾದ ಕೊರಗಪ್ಪ ನಾಯ್ಕ, ಮಮತಾ ಶೆಟ್ಟಿ, ತಾ.ಪಂ. ಸದಸ್ಯ ಸೆಬಾಸ್ಟಿಯನ್ ಉಪಸ್ಥಿತರಿದ್ದರು.

ಈ ಸಂದರ್ಭ ಹೊಲಿಗೆ ಯಂತ್ರ ವಿತರಣೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಪ್ರಭಾರ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಸುರೇಂದ್ರ ಎಸ್. ಸ್ವಾಗತಿಸಿದರು. ಬಾಲಕಿಯರ ನಿಲಯದ ಮೇಲ್ವಿಚಾರಕಿ ಚಂದ್ರಮ್ಮ ಡಿ. ವಂದಿಸಿದರು. ಮಡಂತ್ಯಾರು ಬಾಲಕರ ನಿಲಯದ ಮೇಲ್ವಿಚಾರಕ ಶೇಷಗಿರಿ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News