ಮರ್ದಾಳ-ಉಪ್ಪಿನಂಗಡಿ ರಸ್ತೆ ಅಗಲೀಕರಣಕ್ಕೆ ಗುದ್ದಲಿ ಪೂಜೆ

Update: 2016-08-20 15:27 GMT

ಕಡಬ, ಆ.20: ಮರ್ದಾಳ-ಕಡಬ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯನ್ನು ರಾಜ್ಯ ಹೆದ್ದಾರಿ ಅಭಿವೃದ್ದಿ ಯೋಜನೆಯಡಿಯಲ್ಲಿ 29.75 ಕೋಟಿ ರೂ.ವೆಚ್ಚದಲ್ಲಿ ಅಗಲೀಕರಣಗೊಳಿಸಿ ಅಭಿವೃದ್ಧಿಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದರು.

 ಕಡಬ ಪೇಟೆಯಲ್ಲಿ ಶನಿವಾರ ಸಂಜೆ ಮರ್ದಾಳ - ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಅಗಲೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ದ.ಕ ಹಾಗೂ ಉಡುಪಿ ಜಿಲ್ಲೆಯ ರಾಜ್ಯ ಹೆದ್ದಾರಿ ಅಭಿವೃದ್ದಿಗೆ 200 ಕೋಟಿ ರೂ. ಬಿಡುಗಡೆಯಾದ ಪೈಕಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಮರ್ದಾಳದಿಂದ  ಕೆಮ್ಮಾರದವರೆಗಿನ ರಸ್ತೆಯನ್ನು 21.5 ಕೋಟಿ ರೂ. ಹಾಗೂ ಬಳಿಕದ ಪುತ್ತೂರು ವಿಧಾನ ಸಭಾ ಕ್ಷೇತ್ರದ ಕೆಮ್ಮಾರದಿಂದ ಉಪ್ಪಿನಂಗಡಿಯವರೆಗಿನ ರಸ್ತೆಯನ್ನು 8.25 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ದಿಪಡಿಸಲಾಗುವುದು. ರಾಜ್ಯ ಸರಕಾರ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದೆ. ಹಲವಾರು ಅಭಿವೃದ್ಧಿ ಪರ ಯೋಜನೆಗಳನ್ನು ಹಮ್ಮಿಕೊಂಡಿದೆ. 94ಸಿ ಅಡಿಯಲ್ಲಿ ಮನೆ ಅಡಿಸ್ಥಳಕ್ಕೆ ಹಕ್ಕು ಪತ್ರ ನೀಡುವ ಉತ್ತಮ ಯೋಜನೆಯನ್ನು ಕಲ್ಪಿಸಲಾಗಿದ್ದು, ಕಡಬ ಭಾಗದ ಜನತೆ ಹೆಚ್ಚಿನ ರೀತಿಯಲ್ಲಿ ಇದರ ಉಪಯೋಗ ಪಡೆದುಕೊಂಡಿದ್ದಾರೆ. ಕಡಬ ಭಾಗದಲ್ಲಿ ವಿಶೇಷ ಅದ್ಯತೆ ನೀಡಿ ಅಭಿವೃದ್ದಿ ಪಡಿಸಲು ಶ್ರಮಿಸಲಾಗುತ್ತಿದೆ ಎಂದರು.

ಪುತ್ತೂರು ತಾಲೂಕಿನ ಕೊಲ ಪಶು ಸಂಗೋಪನ ಇಲಾಖಾ ಜಾಗದಲ್ಲಿ ಪಶುವೈದ್ಯಕೀಯ ಕಾಲೇಜು ಸ್ಥಾಪನೆಗೆ ಈಗಾಗಲೇ 100 ಕೋ.ರೂ. ಬಿಡುಗಡೆಯಾಗಿದೆ. ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಶೀಘ್ರದಲ್ಲಿ ಮುಖ್ಯಮಂತ್ರಿ ಜೊತೆಯಾಗಿ ಶಿಲಾನ್ಯಾಸ ನೇರವೇರಿಸಲಾಗುವುದು. ಕಡಬ ಸಮುದಾಯ ಆಸ್ಪತ್ರೆ ಅಭಿವೃದ್ದಿಗೆ 4.80 ಕೋಟಿ ರೂ. ಬಿಡುಗಡೆಯಾಗಿದೆ ಎಂದರು.

ಲೋಕೋಪಯೋಗಿ ಇಲಾಖಾ ಇಂಜಿನಿಯರ್ ನಾಗರಾಜ್ ರಸ್ತೆ ಕಾಮಗಾರಿಯ ಮಾಹಿತಿ ನೀಡಿ ಮರ್ದಾಳ-ಕೆಮ್ಮಾರ ತನಕದ ಗುತ್ತಿಗೆಯನ್ನು ಬಾಲರಾಜ್ ಹಾಗೂ ಬಳಿಕದ ರಸ್ತೆಯ ಅಭಿವೃದ್ದಿ ಗುತ್ತಿಗೆಯನ್ನು ಇಕ್ಬಾಲ್‌ರಿಗೆ ನೀಡಲಾಗಿದೆ ಎಂದು ವಿವರಿಸಿದರು.

ಕಡಬ ವಿಶೇಷ ತಹಶೀಲ್ದಾರ್ ಬಿ.ಲಿಂಗಯ್ಯ, ಸಮಾಜ ಕಲ್ಯಾಣ ಅಭಿವೃದ್ದಿ ಮಂಡಳಿ ಅಧ್ಯಕ್ಷೆ ದಿವ್ಯಾಪ್ರಭಾ ಚಿಲ್ತಡ್ಕ, ನೆಲ್ಯಾಡಿ ಜಿಲ್ಲಾ ಪಂಚಾಯತ್ ಸದಸ್ಯ ಸರ್ವೋತ್ತಮ ಗೌಡ, ಎಂ.ಎಸ್. ಮುಹಮ್ಮದ್, ತಾ.ಪಂ.ಸದಸ್ಯರಾದ ಫಝಲ್ ಕೋಡಿಂಬಾಳ, ಗಣೇಶ್ ಕೈಕುರೆ, ಆಶಾ ಲಕ್ಷ್ಮಣ ಗುಂಡ್ಯ, ಬಿಳಿನೆಲೆ ಗ್ರಾ.ಪಂ ಅಧ್ಯಕ್ಷೆ ಶಾರದಾ, ಕಡಬ ಗ್ರಾ.ಪಂ. ಅಧ್ಯಕ್ಷ ಬಾಬು ಮುಗೇರ, ನೂಜಿಬಾಳ್ತಿಲ ಗ್ರಾ.ಪಂ. ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ, ನೆಲ್ಯಾಡಿ ಗ್ರಾ.ಪಂ. ಅಧ್ಯಕ್ಷ ಜಯಾನಂದ ಬಂಟ್ರಿಯಾಲ್, ನೂಜಿಬಾಳ್ತಿಲ ಗ್ರಾ.ಪಂ. ಮಾಜಿ ಅಧ್ಯಕ್ಷ ಬಾಲಕೃಷ್ಣ ಗೌಡ ಬಳ್ಳೇರಿ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯ ಕುಮಾರ್ ರೈ ಕರ್ಮಾಯಿ, ಜಿಲ್ಲಾ ಕೆಡಿಪಿ ಸದಸ್ಯ ಸತೀಶ್ ಕುಮಾರ್ ಕೆಡೆಂಜಿ, ಕಡಬ ಬ್ಲಾಕ್ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಸೆಬಾಸ್ಟಿಯನ್, ಎಪಿಎಂಸಿ ಸದಸ್ಯೆ ಶಾಲಿನಿ ಸತೀಶ್ ನಾಕ್, ಕಡಬ ಗ್ರಾ.ಪಂ. ಸದಸ್ಯರಾದ ಅಶ್ರಪ್ ಶೇಡಿಗುಂಡಿ, ಹಾಜಿ. ಹನೀಫ್ ಕೆ.ಎಂ, ಶರೀಫ್ ಎ.ಎಸ್., ಗೋಳಿತೊಟ್ಟು ಗ್ರಾ.ಪಂ. ಮಾಜಿ ಉಪಾಧ್ಯಕ್ಷ ನಾಸಿರ್ ಹೊಸಮನೆ, ಮಾಜಿ ಸದಸ್ಯ ಅಝೀಝ್, ಕುಟ್ರುಪ್ಪಾಡಿ ಗ್ರಾ.ಪಂ. ಮಾಜಿ ಸದಸ್ಯ ಮ್ಯಾಥ್ಯು ಟಿ.ಎಂ., ಡಿಸಿಸಿ ಸದಸ್ಯ ಎಚ್.ಕೆ. ಇಲ್ಯಾಸ್, ಮರ್ದಾಳ ಪಂಚಾಯತ್ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಸುಲೈಮಾನ್ ಪಿ., ಕಡಬ ವಲಯ ಕಾಂಗ್ರೆಸ್ ಮುಖಂಡ ಸತೀಶ್ ಮೇಲಿನಮನೆ, ಕಡಬ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡೆನಿಸ್ ಫೆರ್ನಾಂಡೀಸ್, ಕಾಂಗ್ರೆಸ್ ಮುಖಂಡ ಬಿ.ಎಚ್. ಖಾದರ್ ಮೊದಲಾದವರು ಉಪಸ್ಥಿತರಿದ್ದರು.

ಜಿಲ್ಲಾ ಪಂಚಾಯತ್ ಸದಸ್ಯ ಪಿ.ಪಿ. ವರ್ಗಿಸ್ ಸ್ವಾಗತಿಸಿ ವಂದಿಸಿದರು. ಬಳಿಕ ಕಡಬ ಗ್ರಾಮ ಪಂಚಾಯತ್‌ನಲ್ಲಿ ಬಾಪೂಜಿ ಕೇಂದ್ರ ಉದ್ಘಾಟನೆ, ಕಡಬ ಅಂಗನವಾಡಿ ಕೇಂದ್ರಕ್ಕೆ ಶಂಕುಸ್ಥಾಪನೆ, ಕಡಬ ಗ್ರಾಮ ಪಂಚಾಯತ್‌ನಲ್ಲಿ ಕಡಬ ಹೋಬಳಿಯ 94 ಸಿ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News