ಬೆಳ್ತಂಗಡಿ: ಪ್ರೌಢಶಾಲಾ ಮಟ್ಟದ ಪ್ರತಿಭಾ ಕಾರಂಜಿ

Update: 2016-08-20 17:19 GMT

ಬೆಳ್ತಂಗಡಿ, ಆ.20: ಎಳವೆಯಲ್ಲೇ ಮಕ್ಕಳಲ್ಲಿ ಸುಪ್ತ ಪ್ರತಿಭೆಗಳು ಅಡಕವಾಗಿರುತ್ತದೆ. ಹಿರಿಯರ ಮತ್ತು ಶಿಕ್ಷಕ ವೃಂದದ ಪ್ರೋತ್ಸಾಹದ ಮೂಲಕ ಶಾಲಾ ವಿಭಾಗಗಳಲ್ಲಿ ನಡೆಯುವ ಪ್ರತಿಭಾ ಕಾರಂಜಿಗಳಂತಹ ಸ್ಪರ್ಧಾ ವೇದಿಕೆಗಳು ಮಕ್ಕಳಲ್ಲಿರುವ ಪ್ರತಿಭೆಗಳು ಅನಾವರಣಗೊಳ್ಳಲು ಒಂದು ವೇದಿಕೆಯಾಗುತ್ತದೆ ಎಂದು ಬೆಳ್ತಂಗಡಿ ತಾಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ, ನಿಡ್ಲೆ ಪ್ರೌಢಶಾಲಾ ಮುಖ್ಯ ಶಿಕ್ಷಕ ರಾಜಗುರು ಹೆಬ್ಬಾರ್ ನುಡಿದರು.

ಕೊಕ್ಕಡ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆಯು ಶುಕ್ರವಾರ ಕೊಕ್ಕಡ ಪ್ರೌಢಶಾಲೆಯಲ್ಲಿ ನಡೆದಿದ್ದು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೊಕ್ಕಡ ಗ್ರಾ.ಪಂ. ಅಧ್ಯಕ್ಷ ವಿ.ಜೆ ಸೆಬಾಸ್ಟಿಯನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಲಯ ಮಟ್ಟದ ಹಲವು ಶಾಲಾ ಮಕ್ಕಳಿಗೆ ತಮ್ಮ ಪ್ರತಿಭೆಗಳನ್ನು ಒರೆಗೆ ಹಚ್ಚಲು ಇಂದು ನಡೆಯುತ್ತಿರುವ ಪ್ರತಿಭಾ ಕಾರಂಜಿ ಕಾರ್ಯಕ್ರಮ ಅವಕಾಶವಾದಂತಾಗಿದೆ. ವಿದ್ಯಾರ್ಥಿಗಳು ಇನ್ನೂ ಮುಂದಿನ ಹಂತದ ಸ್ಪರ್ಧೆಗಳಲ್ಲೂ ಪ್ರತಿನಿಧಿಸುವಂತಾಗಲಿ ಎಂದು ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಶಾಲಾಭಿವೃದ್ದಿ ಸಮಿತಿ ಕಾರ್ಯಾಧ್ಯಕ್ಷ ಜಯಪ್ರಕಾಶ ಬಾಳ್ತಿಲ್ಲಾಯ, ಕೊಕ್ಕಡ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ್ ಮೂರ್ತಿ , ಗ್ರಾ.ಪಂ. ಸದಸ್ಯರಾದ ಶೀನ ನಾಯ್ಕಾ, ಇಬ್ರಾಹೀಂ ಮಲ್ಲಿಗೆಮಜಲು, ಶಾಲಾಭಿವೃದ್ದಿ ಸಮಿತಿ ಸದಸ್ಯರಾದ ಯೂಸುಫ್ ಹಲ್ಲಿಂಗೇರಿ, ಅಬ್ದುಲ್ ಖಾದರ್, ಹೊನ್ನಪ್ಪ ಗೌಡ, ಲಿಯೋ ಮೊಂತೆರೋ, ಮುಖ್ಯ ಶಿಕ್ಷಕ ದಿನೇಶ್, ಅಬ್ದಲ್ ಖಾದರ್ ಮುಸ್ಲಿಯಾರ್ ಮಲ್ಲಿಗೆ ಮಜಲು, ಝುಬೈರ್ ಮುಸ್ಲಿಯಾರ್ ಅಡ್ಡೈ ಉಪಸ್ಥಿತರಿದ್ದರು.

ಕೊಕ್ಕಡ ವಲಯಕ್ಕೆ ಸೇರಿದ ಎಲ್ಲಾ ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದರು.ದಿನೇಶ್ ಸ್ವಾಗತಿಸಿದರು. ಶಿಕ್ಷಕಿ ಪ್ರಪುಲ್ಲಾ ವಂದಿಸಿದರು. ಕನ್ನಡ ಉಪನ್ಯಾಸಕ ನಿರಂಜನ ಸ್ವಾಮಿ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News