ಜಮೀನು ಮಂಜೂರಾದರೂ ತಲೆಯೆತ್ತದ ಮನೆಗಳು: 4 ಕೊರಗ ಕುಟುಂಬಗಳ ಅತಂತ್ರ ಬದುಕು

Update: 2016-08-21 18:47 GMT

ಬೆಳ್ತಂಗಡಿ, ಆ.21: ಅಳಿವಿನಂಚಿನಲ್ಲಿರುವ ಸೀಮಿತ ಜನಸಂಖ್ಯೆಯ ಕೊರಗ ಸಮುದಾಯವು ತಮ್ಮ ಪಾರಂಪರಿಕ ಕಸುಬಿನೊಂದಿಗೆ ಅರಣ್ಯಗಳ ಸಮೀಪ ಜೀವನ ಸಾಗಿಸುತ್ತಾ ಬರುತ್ತಿದ್ದು, ಈ ಕುಟುಂಬಗಳ ಅಭಿವೃದ್ಧಿಗೆ ಸರಕಾರ ಕೋಟ್ಯಂತರ ರೂ. ಅನುದಾನ ಮೀಸಲಿಟ್ಟಿದೆ. ಆದರೆ ಇದು ಸಮರ್ಪಕವಾಗಿ ಅರ್ಹ ಕೊರಗ ಕುಟುಂಬಗಳಿಗೆ ತಲುಪದ ಕಾರಣ ಹತ್ತಾರು ಕುಟುಂಬಗಳು ಇನ್ನೂ ಅತಂತ್ರ ಸ್ಥಿತಿಯಲ್ಲಿ ಬದುಕುತ್ತಿವೆ. ಬೆಳ್ತಂಗಡಿ ತಾಲೂಕಿನಲ್ಲಿ ಕೊರಗರ ಜನಸಂಖ್ಯೆ ಹೆಚ್ಚಾಗಿದ್ದು, ಈ ಕುಟುಂಬಗಳ ಹಿತದೃಷ್ಟಿಯಿಂದ ಅನುಷ್ಠಾನಗೊಂಡಿರುವ ಯೋಜನೆಗಳು ಇನ್ನೂ ಸರಿಯಾಗಿ ಜಾರಿಯಾಗದಿರುವುದು ವಿಪರ್ಯಾಸ.

ಇತ್ತೀಚೆಗೆ ಕೊರಗ ಸಮುದಾಯ ಜಮೀನಿಲ್ಲದೆ, ಮನೆಯಿಲ್ಲದೆ ಕಾಡಿನ ನಡುವೆ ಬದುಕು ಸಾಗಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಜಮೀನಿಲ್ಲದ ಕಾರಣ ಅವರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಲಿಲ್ಲ ಎಂದು ಇಲಾಖಾಧಿಕಾರಿಗಳು ಹೇಳಿಕೊಂಡಿದ್ದರು. ಆದರೆ ಮುಂಡಾಜೆ ಗ್ರಾಮ ವ್ಯಾಪ್ತಿಯ ದೂಂಬೆಟ್ಟು ಎಂಬಲ್ಲಿ ನಾಲ್ಕು ಕೊರಗ ಕುಟುಂಬಗಳಿಗೆ ಆರು ವರ್ಷಗಳ ಹಿಂದೆಯೇ ಜಮೀನನ್ನು ನೀಡಲಾಗಿದೆ. ಮನೆಗೂ ಅನುದಾನ ಮಂಜೂರಾಗಿದೆ. ಆದರೆ ಇನ್ನೂ ಮನೆಗಳು ನಿರ್ಮಾಣವಾಗಿಲ್ಲ. ಮನೆಗೆ ಅಡಿಪಾಯ ಹಾಕಲಾಗಿದ್ದು, ಅದೀಗ ಬಹುತೇಕ ನೆಲಸಮವಾದಂತಿದೆ. ಮನೆಯಿಲ್ಲದ ಕಾರಣ ಈ ಜಮೀನಿನಲ್ಲಿ ಕೃಷಿ ಮಾಡಲು ಸಾಧ್ಯವಾಗದೆ ಈ ಕುಟುಂಬಗಳು ಪರದಾಡುತ್ತಿದೆ.

ತಲಾ 1 ಎಕ್ರೆ ಜಮೀನು ಮಂಜೂರು: ಮುಂಡಾಜೆ,ಕಕ್ಕಿಂಜೆ ಹಾಗೂ ಆಸುಪಾಸು ಪುಟ್ಟ ಗುಡಿಸಲುಗಳಲ್ಲಿ ವಾಸಿಸುತ್ತಿರುವ ಬಾಬು, ಮಾಂಕು, ರಘು, ಲಿಂಗಪ್ಪಎಂಬವರಿಗೆ 6 ವರ್ಷಗಳ ಹಿಂದೆ ಸಮಾಜ ಕಲ್ಯಾಣ ಹಾಗೂ ಐಟಿಡಿಪಿ ಇಲಾಖೆಯ ಸಹಕಾರದಿಂದ ತಲಾ 1 ಎಕ್ರೆ ಸರಕಾರಿ ಜಮೀನು ಮಂಜೂರು ಮಾಡಲಾಗಿತ್ತು. ಜಮೀನಿಗೆ ಹಕ್ಕುಪತ್ರವನ್ನೂ ನೀಡಲಾಗಿತ್ತು. ಅದರೊಂದಿಗೆ ಮನೆಯೂ ಮಂಜೂರಾಗಿತ್ತು. ಅಲ್ಲದೆ ಈ ಕುಟುಂಬಗಳು ಕೃಷಿಯಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗಲೆಂದು ಸುಸಜ್ಜಿತ ವಾಗಿರುವ ಕೆರೆಯನ್ನು ನಿರ್ಮಿಸಲಾಗಿದ್ದು, ಪಂಪ್‌ಸೆಟ್ ಕೂಡಾ ಅಳವಡಿಸಲಾಗಿದೆ. ಸರಕಾರದಿಂದ ಎಲ್ಲವೂ ಮಂಜೂರಾಗಿದ್ದರೂ ಕೊರಗ ಕುಟುಂಬಗಳಿಗೆ ಮಾತ್ರ ಇದರ ಪ್ರಯೋಜನ ಇನ್ನೂ ಸಿಗಲಿಲ್ಲ. ಕೆರೆಯ ನೀರನ್ನು ಉಪಯೋಗಿಸಲು ಈ ಕುಟುಂಬಗಳಿಗೆ ಸಾಧ್ಯವಾಗಿಲ್ಲ. ಜಮೀನು ಯಾವುದೇ ಉಪಯೋಗವಿಲ್ಲದೆ ಪಾಳು ಬಿದ್ದಿದೆ. ಈ ಕುಟುಂಬಗಳು ತಾವು ಹಿಂದಿದ್ದ ಪ್ರದೇಶದಲ್ಲಿಯೇ ಬದುಕನ್ನು ನಡೆಸುತ್ತಿದ್ದು, ಆಗಾಗ ಬಂದು ತಮಗೆ ಮಂಜೂರಾಗಿರುವ ಜಮೀನನ್ನು ನೋಡಿಕೊಂಡು ಹೋಗುತ್ತಿದ್ದಾರೆ.

ಒಂದಿಬ್ಬರು ಇದೀಗ ಇಲ್ಲಿ ಕೃಷಿ ಮಾಡಲು ಮುಂದಾಗಿದ್ದರೂ ಅದೂ ಪೂರ್ಣ ಯಶಸ್ವಿಯಾಗುತ್ತಿಲ್ಲ. ಮನೆ ಇದ್ದರೆ ಮಾತ್ರ ಇಲ್ಲಿ ಕೃಷಿ ಚಟುವಟಿಕೆ ಸಾಧ್ಯ. ಎಲ್ಲೋ ನೆಲೆಸಿ, ಇಲ್ಲಿ ಕೃಷಿ ಮಾಡಲು ಸಾಧ್ಯವಿಲ್ಲ ಎಂದು ಈ ಕುಟುಂಬಗಳ ಸದಸ್ಯರು ಹೇಳಿಕೊಳ್ಳುತ್ತಿದ್ದಾರೆ.

ಮಂಜೂರಾದ ಮನೆ ಎಲ್ಲಿ ಹೋಗಿದೆ?: ಸರ ಕಾರದಿಂದ ಮಂಜೂರಾದ ಮನೆ ಇನ್ನೂ ತಲೆ ಎತ್ತಿಲ್ಲ. ಇಲ್ಲಿ ಜಮೀನು ಹೊಂದಿರುವವರು ಹೇಳುವ ಪ್ರಕಾರ ಮನೆ ನಿರ್ಮಾಣದ ಜವಾಬ್ದಾರಿಯನ್ನು ಸಮಾಜ ಕಲ್ಯಾಣ ಇಲಾಖೆಯು ಕೊರಗ ಸಮುದಾಯದ ಮುಖಂಡ ರೊಬ್ಬರಿಗೆ ವಹಿಸಿಕೊಟ್ಟಿತ್ತು. ಆದರೆ ಆ ವ್ಯಕ್ತಿ ಇದನ್ನು ಅರ್ಧದಲ್ಲೆ ಕೈಬಿಟ್ಟಿರುವುದರಿಂದ ಈ ಕುಟುಂಬಗಳಿಗೆ ಮನೆಯಿಲ್ಲದಂತಾಗಿದೆ. ಮನೆ ನಿರ್ಮಾಣಕ್ಕಾಗಿ ಮಂಜೂರಾಗಿದ್ದ ಅನುದಾನದಲ್ಲಿ ಪ್ರಥಮ ಕಂತು ಈ ಕುಟುಂಬಗಳಿಗೆ ಬಂದಿದೆ. ಕಾಟಾಚಾರಕ್ಕೆ ಎಂಬಂತೆ ಕಟ್ಟಿರುವ ಪಂಚಾಂಗದ ಕಾರ್ಯ ಪೂರ್ಣಗೊಳಿಸಿದ ಕೂಡಲೆ ಸರಕಾರದಿಂದ ಲಭಿಸಿದ ತಲಾ 25 ಸಾವಿರ ರೂ.ವನ್ನು ಈ ಕುಟುಂಬಗಳು ಪಡೆದು ಗುತ್ತಿಗೆ ವಹಿಸಿಕೊಂಡವರಿಗೆ ನೀಡಿದ್ದಾರೆ.ಆದರೆ ಹಣ ಪಡೆದುಕೊಂಡು ಹೋದಾತ ಮತ್ತೆ ಇವರತ್ತ ಗಮನ ಹರಿಸಿಲ್ಲ. ಸಮಾಜ ಕಲ್ಯಾಣ ಇಲಾಖೆ ಅಥವಾ ಐಟಿಡಿಪಿ ಇಲಾಖೆಯ ಅಧಿಕಾರಿಗಳು ಈ ಮನೆಗಳು ತಲೆ ಎತ್ತದಿರುವ ಬಗ್ಗೆ ಪರಿಶೀಲಿಸಿಲ್ಲ. ಅಂದು ನನೆಗುದಿಗೆ ಬಿದ್ದ ಮನೆ ನಿರ್ಮಾಣದ ಕಾಮಗಾರಿ ಈಗಲೂ ಅದೇ ಸ್ಥಿತಿಯಲ್ಲಿದೆ. ಈ ಪಂಚಾಂಗದ ಮೇಲೆ ಮನೆ ಕಟ್ಟಲು ಇನ್ನು ಸಾಧ್ಯವಿಲ್ಲವಾಗಿದ್ದು ಬೇರೆಯೇ ಪಂಚಾಂಗ ಹಾಕಿ ಮನೆ ಕಟ್ಟಬೇಕಾದ ಅನಿವಾರ್ಯತೆಯಿದೆ.

ಎಚ್ಚೆತ್ತ ಅಧಿಕಾರಿಗಳು: ಕೊರಗರ ಕುಟುಂಬಗಳ ದುಸ್ಥಿತಿಯ ಬಗೆಗಿನ ಮಾಧ್ಯಮಗಳಲ್ಲಿ ವರದಿಗಳು ಬರಲಾರಂಭಿಸಿದ ಬಳಿಕ ಸಮಾಜ ಕಲ್ಯಾಣ ಇಲಾ ಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಇವರ ಜಮೀನಿಗೆ ಭೇಟಿ ನೀಡಿದ ಅಧಿಕಾರಿಗಳು ‘ನಿಮಗೆ ಹೊಸದಾಗಿ ಮನೆ ನಿರ್ಮಿಸಿಕೊಡಲಾಗುವುದು. ಅದಕ್ಕಾಗಿ ದಾಖಲೆಗಳೊಂದಿಗೆ ಬನ್ನಿ’ ಎಂದಿದ್ದಾರೆ. ಇದು ಈ ಕುಟುಂಬಗಳಲ್ಲಿ ಆಶಾಭಾವನೆ ಮೂಡಿಸಿದೆ. ಆದರೆ ಇದು ಕೇವಲ ಜನರ, ಮಾಧ್ಯಮಗಳ ಕಣ್ಣು ತಪ್ಪಿಸುವ ಸಲುವಾಗಿನ ಪ್ರಯತ್ನವಾಗದಿರಲಿ. ಇಲಾಖಾಧಿಕಾರಿಗಳು ಪ್ರಾಮಾಣಿಕವಾಗಿ ಪ್ರಯತ್ನ ನಡೆಸಿದರೆ ಈ ಕುಟುಂಬಗಳು ನೆಮ್ಮದಿಯ ಬದುಕನ್ನು ನಡೆಸಲು ಸಾಧ್ಯವಾಗಲಿದೆ ಎಂದು ಸ್ಥಳೀಯ ಪ್ರಜ್ಞಾವಂತರು ಅಭಿಪ್ರಾಯಪಟ್ಟಿದ್ದಾರೆ.

ದೊಂಬೆಟ್ಟು ಎಂಬಲ್ಲಿ ನನಗೆ 1 ಎಕ್ರೆ ಜಮೀನು ಮಂಜೂರಾಗಿದ್ದು, ಮನೆಗಾಗಿ ಸರಕಾರದಿಂದ 1.25 ಲಕ್ಷ ರೂ. ಮಂಜೂರಾಗಿತ್ತು. ಈ ವೇಳೆ ನಾನು ಅಪಘಾತಕ್ಕೀಡಾದ ಕಾರಣ ಇದರ ಬಗ್ಗೆ ಗಮನಹರಿಸಲು ಸಾಧ್ಯವಾಗಿಲ್ಲ. ಮನೆ ನಿರ್ಮಾಣಕ್ಕೆ ಗುತ್ತಿಗೆ ನೀಡಲಾಗಿತ್ತಾದರೂ ಇದುವರೆಗೆ ಮನೆ ನಿರ್ಮಾಣಗೊಂಡಿಲ್ಲ. ಈ ಗುತ್ತಿಗೆಯನ್ನು ಬಿಟ್ಟು ನೇರವಾಗಿ ನಮಗೆ ಅನುದಾನ ನೀಡಲಿ. ನಾವೇ ಮನೆ ನಿರ್ಮಿಸಿಕೊಳ್ಳುತ್ತೇವೆ. ಇಲ್ಲಿ ಕೃಷಿ ಮಾಡಬೇಕಾದರೆ ಮನೆ ನಿರ್ಮಿಸುವುದು ಅನಿವಾರ್ಯ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಲಿ.

ಮಾಂಕು ದೂಂಬೆಟ್ಟು ನಿವಾಸಿ 

Writer - ಶಿಬಿ ಧರ್ಮಸ್ಥಳ

contributor

Editor - ಶಿಬಿ ಧರ್ಮಸ್ಥಳ

contributor

Similar News