ಉಡುಪಿ ಜಿಲ್ಲೆಯಲ್ಲಿ ಅರಣ್ಯ ಬೆಳೆಸಲು ಸಿಎಸ್‌ಆರ್ ನಿಧಿ ಬಳಸಿ: ಯುಪಿಸಿಎಲ್‌ಗೆ ಸಚಿವ ರೈ ಸೂಚನೆ

Update: 2016-08-22 18:15 GMT

ಎಲ್ಲೂರು (ಪಡುಬಿದ್ರೆ), ಆ.22: ಬೃಹತ್ ಉದ್ದಿಮೆಯಾದ ಯುಪಿಸಿಎಲ್ ತನ್ನ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ನಿಧಿಯನ್ನು ಆಸುಪಾಸಿನ ಗ್ರಾಮಗಳಿಗೆ ಮಾತ್ರ ಸೀಮಿತಗೊಳಿಸದೆ ಉಡುಪಿ ಜಿಲ್ಲೆಯಲ್ಲಿ ಅರಣ್ಯ ಅಭಿವೃದ್ಧಿಗೂ ಬಳಸುವಂತೆ ಅರಣ್ಯ ಸಚಿವ ಬಿ.ರಮಾನಾಥ ರೈ ಸೂಚನೆ ನೀಡಿದ್ದಾರೆ.
ಇಂದು ಸಂಜೆ ಯುಪಿಸಿಎಲ್ ಯೋಜನಾ ಪ್ರದೇಶಕ್ಕೆ ಭೇಟಿ ನೀಡಿದ ಅವರು, ಇಲ್ಲಿ ಉಷ್ಣವಿದ್ಯುತ್ ಯೋಜನೆ ಸ್ಥಾಪನೆ ವಿರುದ್ಧ ಜನತೆ ಬಹುಕಾಲದಿಂದ ನಡೆಸಿದ ಪ್ರತಿರೋಧವನ್ನು, ಯೋಜನೆ ಅನುಷ್ಠಾನಗೊಂಡ ಬಳಿಕ ಪರಿಸರಕ್ಕೆ ಹಾಗೂ ಜನತೆ ಆಗಿರುವ ತೊಂದರೆಯನ್ನು ನೆನಪಿಸಿದರು. ಇದೀಗ ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸಿ ಆಸುಪಾಸಿನ ಜನತೆಗೆ ಮಾತ್ರವಲ್ಲ, ಜಿಲ್ಲೆಯ ಅಭಿವೃದ್ಧಿಗೂ ಕೈಜೋಡಿಸು ವಂತೆ ಯುಪಿಸಿಎಲ್ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ರಾಜ್ಯದ ನಾನಾ ಕಡೆಗಳಲ್ಲಿ ದೊಡ್ಡ ಉದ್ಯಮಗಳು, ಕಂಪೆನಿಗಳು ತಮ್ಮ ಸಿಎಸ್‌ಆರ್ ನಿಧಿಗಳನ್ನು ಪರಿಸರ ಕಾಳಜಿಯ ಕಾರ್ಯಗಳಿಗೂ ಬಳಸುತ್ತಿವೆ ಎಂದವರು ವಿವರಿಸಿದರು.
ಯುಪಿಸಿಎಲ್, ಅದಾನಿ ಕಂಪೆನಿಯ ಸ್ವಾಧೀನಕ್ಕೆ ಬಂದ ನಂತರ, ಸಿಎಸ್‌ಆರ್ ನಿಧಿಯಡಿ ಆಸುಪಾಸಿನ ಏಳು ಗ್ರಾಮಗಳ ವ್ಯಾಪ್ತಿಯಲ್ಲಿ ನಡೆಸಿದ ಚಟುವಟಿಕೆಗಳು, ಅಭಿವೃದ್ಧಿ ಕಾರ್ಯಕ್ರಮಗಳನ್ನು ವಿವರಿಸಿದ ಯುಪಿಸಿಎಲ್‌ನ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಐದು ಕೋಟಿಗೂ ಅಧಿಕ ಹಣವನ್ನು ವ್ಯಯಿಸಿದ್ದೇವೆ ಎಂದರು.
ನಾವು ಪರಿಸರದ 25 ಶಾಲೆಗಳಿಗೆ ಮೂಲಭೂತ ಸೌಲಭ್ಯದೊಂದಿಗೆ ಸಾವಿರಾರು ಮಕ್ಕಳಿಗೆ ಸ್ಕಾಲರ್‌ಶಿಪ್, ಉಚಿತ ಸಮವಸ್ತ್ರ, ಪುಸ್ತಕ, ಗ್ರಾಮಗಳಲ್ಲಿ ವೈದ್ಯಕೀಯ ಶಿಬಿರ, ಆರೋಗ್ಯನಿಧಿ ವಿತರಣೆ, ಪರಿಕರಗಳ ವಿತರಣೆ ಮಾಡುತ್ತಿದ್ದೇವೆ ಎಂದರು.
ಇವೆಲ್ಲವೂ ಪರಿಸರದ ಜನತೆಗಾಯಿತು. ಆದರೆ ಪರಿಸರ ಸಚಿವನಾಗಿ ತಾನು ನಿಮ್ಮಿಂದ ಇನ್ನೂ ಹೆಚ್ಚಿನದನ್ನು ನಿರೀಕ್ಷಿಸುತ್ತಿದ್ದೇನೆ. ಇಲ್ಲಿನ ಜನರ ಅನುಕೂಲಕ್ಕಾಗಿ ಸ್ಥಳೀಯ ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಇಲಾಖೆಯ ಅಧಿಕಾರಿಗಳು ನಿಮ್ಮ ಕಂಪೆನಿ ಪರಿಸರ ವಿಷಯಕ್ಕೆ ಸಂಬಂಧಿಸಿದಂತೆ ಅನುಸರಿಸಬೇಕಾದ ಮಾರ್ಗದರ್ಶಿ ಸೂತ್ರಗಳನ್ನು ನೀಡಲಿದ್ದಾರೆ. ಇವುಗಳೊಂದಿಗೆ ಬಡಗುಬೆಟ್ಟು ಗ್ರಾಮದಲ್ಲಿ ಕೋಟಿ ವೃಕ್ಷ ಯೋಜನೆಯ ‘ಟ್ರೀ ಪಾರ್ಕ್’ನಲ್ಲಿ ಅರಣ್ಯ ಬೆಳೆಸಲು ಹಾಗೂ ಜಾಗದ ಸುತ್ತಲೂ ಬೇಲಿ ನಿರ್ಮಿಸಲು ನೀವು ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ರಮಾನಾಥ ರೈ ಸೂಚನೆ ನೀಡಿದರು.

ಸಚಿವರ ಸೂಚನೆಗಳಿಗೆ ಸಮ್ಮತಿಸಿದ ಯುಪಿಸಿಎಲ್‌ನ ಅಧಿಕಾರಿಗಳು, ಪರಿಸರ ಹಾನಿ ತಡೆಗಟ್ಟಲು ಕಂಪೆನಿ ತೆಗೆದುಕೊಂಡ ಕ್ರಮಗಳ ಕುರಿತು ವಿವರಿಸಿದರು. ಕಂಪೆನಿ ಸ್ಥಳೀಯರಿಗೆ ಶೇ.72ರಷ್ಟು ಉದ್ಯೋಗಗಳನ್ನು ನೀಡಿದೆ. ಅಲ್ಲದೇ ಈಗ ಯುಪಿಸಿಎಲ್‌ನ ವಿಸ್ತರಣೆಗೆ ಪಡೆಯುವ ಜಮೀನಿಗೆ ಪ್ರತಿ ಎಕರೆಗೆ 40 ಲಕ್ಷ ರೂ. ನೀಡಲು ಹಾಗೂ ಸ್ಥಳೀಯರಿಗೆ ಉದ್ಯೋಗ ನೀಡಲು ಸಮ್ಮತಿಸಲಾಗಿದೆ ಎಂದು ಕಿಶೋರ್ ಆಳ್ವ ತಿಳಿಸಿದರು.
ಸಭೆಯಲ್ಲಿ ಅರಣ್ಯ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆಯ ವಿವಿಧ ಅಧಿಕಾರಿಗಳು ಹಾಗೂ ಯುಪಿಸಿಎಲ್‌ನ ಸ್ಟೇಶನ್ ಹೆಡ್ ಸುಂದರ್ ರೇ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
 

ಯುಪಿಸಿಎಲ್ ವಿಸ್ತರಣೆಗೆ ಒಪ್ಪಿಗೆ ಸಿಕ್ಕಿತೇ ?
ಯುಪಿಸಿಎಲ್‌ನ್ನು ಅದಾನಿ ಕಂಪೆನಿ ಖರೀದಿಸಿದ ಬಳಿಕ ಅದರ ಈಗಿನ 1,200 ಮೆ.ವ್ಯಾಟ್ ಸಾಮರ್ಥ್ಯವನ್ನು 2,800 ಮೆ.ವ್ಯಾಗೆ ವಿಸ್ತರಿಸಲು ನಿರ್ಧರಿಸಿದ್ದು, ಈಗಾ ಗಲೇ ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಕೈಗೊಂಡಿದೆ. 1,600 ಮೆ.ವ್ಯಾ.ನ ವಿಸ್ತರಣೆಗೆ ಸುಮಾರು ಒಂದು ಸಾವಿರ ಎಕರೆ ಹೆಚ್ಚುವರಿ ಭೂಮಿಯ ಅಗತ್ಯವಿದ್ದು, ಇದಕ್ಕೂ ಕಂಪೆನಿಗೆ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಹಸಿರು ನಿಶಾನೆ ದೊರಕಿರುವ ಸೂಚನೆ ಇದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ವಿಸ್ತರಣೆಗೆ ರಾಜ್ಯ ಸರಕಾರದಿಂದ ಮಾಲಿನ್ಯ ನಿಯಂ ತ್ರಣ ಮಂಡಳಿ, ಇಂಧನ ಇಲಾಖೆ, ಸಿಆರ್‌ಝಡ್‌ನ ಪರವಾನಿಗೆಗಳೂ ಸಿಗಬೇಕು. ಈ ಬಗ್ಗೆ ರಾಜ್ಯ ಪರಿಸರ ಸಚಿವ ರಮಾನಾಥ ರೈಯವರನ್ನು ಇಂದು ಪ್ರಶ್ನಿಸಿದಾಗ, ಅಂಥ ಯಾವ ಪ್ರಸ್ತಾವ ನಮಗೆ ಬಂದಿಲ್ಲ. ಬೇರೆ ಇಲಾಖೆಗೆ ಬಂದಿರಬಹುದು. ಅನುಮತಿ ಏನಿದ್ದರೂ ಕೇಂದ್ರ ಸರಕಾರದ ಕೆಲಸ ಎಂದು ಜಾರಿಕೊಂಡರು.
ಆದರೆ ಪರಿಸರ ಇಲಾಖೆಯ ಅನುಮತಿ ನೀಡುವು ದಕ್ಕೆ ಮುನ್ನ ಸಚಿವರು ಯುಪಿಸಿಎಲ್‌ಗೆ ಭೇಟಿ ನೀಡಿ, ಸರಕಾರದ ಕೆಲವು ಬೇಡಿಕೆಗಳನ್ನು ಕಂಪೆನಿಯ ಮುಂದಿ ಟ್ಟಿರಬಹುದಾದ ಗುಮಾನಿಯನ್ನು ಮೂಲಗಳು ವ್ಯಕ್ತ ಪಡಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News