ಆಹ್ವಾನವಿಲ್ಲದೆ ಪಾಕ್‌ಗೆ ಪ್ರಧಾನಿ ಭೇಟಿ ನೀಡಿದ್ದು ದೇಶದ್ರೋಹವಲ್ಲವೇ?: ಸಚಿವ ಖಾದರ್

Update: 2016-08-23 14:37 GMT

ಮಂಗಳೂರು, ಆ.23: ಯಾರದೋ ವೈಯಕ್ತಿಕ ಹೇಳಿಕೆಗಳಿಗೆ ಪ್ರತಿಭಟನೆ ಮಾಡುವವರು, ದೇಶದ ಪ್ರಧಾನಿಯೊಬ್ಬರು ಆಹ್ವಾನವಿಲ್ಲದೆ, ದಿಢೀರನೆ ಪಾಕಿಸ್ತಾನಕ್ಕೆ ಭೇಟಿ ನೀಡಿ ಊಟ ಮಾಡಿ ಬರುವುದು ದೇಶದ್ರೋಹವಲ್ಲವೇ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ಮಾಜಿ ಸಂಸದೆ ರಮ್ಯಾ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿರುವ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ದೇಶದ ಪ್ರಧಾನಿಯೇ ಪಾಕಿಸ್ತಾನಕ್ಕೆ ಭೇಟಿ ನೀಡಿ ಅಲ್ಲಿನ ಪ್ರಧಾನಿಯ ಮೊಮ್ಮಗನ ಮದುವೆಯಲ್ಲಿ ಭಾಗಿಯಾಗಿದ್ದರು. ಯಾವುದೇ ಮಾಹಿತಿ ನೀಡದೆ ಭೇಟಿ ನೀಡಿದರೂ ಪ್ರಶ್ನಿಸಿಲ್ಲ, ಪ್ರತಿಕ್ರಿಯಿಸಿಲ್ಲ. ಮಾತ್ರವಲ್ಲದೆ, ಆ ಸಮಾರಂಭದಲ್ಲಿ ಭೂಗತ ದೊರೆ ದಾವೂದ್ ಇಬ್ರಾಹೀಂ ಕೂಡಾ ಭಾಗವಹಿಸಿದ್ದಾಗಿ ಉತ್ತರ ಪ್ರದೇಶದ ಸಚಿವರೊಬ್ಬರು ಆರೋಪಿಸಿದ್ದರೂ, ಅವರು ಸುಳ್ಳು ಆರೋಪ ಮಾಡಿದ್ದಾರೆಂಬುದಾಗಿಯೂ ಯಾರೊಬ್ಬರೂ ದೂರು ದಾಖಲಿಸಿಲ್ಲ. ಹಾಗಿದ್ದರೂ ಒಬ್ಬರ ವೈಯಕ್ತಿಕ ಅಭಿಪ್ರಾಯಕ್ಕೆ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.

ಪಾಕಿಸ್ತಾನದವರ ಜತೆ ಮಾತನಾಡುವುದು, ಅವರು ಒಳ್ಳೆಯವರು ಎಂದು ಹೇಳುವುದು ದೇಶದ್ರೋಹವಾದರೆ ಪಾಕಿಸ್ತಾನಕ್ಕೆ ಭೇಟಿ ನೀಡಿದ ಪ್ರಧಾನಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಬಗ್ಗೆ ಯಾರೂ ಯಾಕೆ ಪ್ರತಿಕ್ರಿಯಿಸಿಲ್ಲ ಎಂದು ಪ್ರಶ್ನಿಸಿದರು. ಭಾರತ ವಿಭಜನೆಗೆ ಪ್ರಮುಖರೆಂದು ಹೇಳಲಾಗುತ್ತಿರುವ ಜಿನ್ನಾರನ್ನೇ ಒಳ್ಳೆಯ ವ್ಯಕ್ತಿ ಎಂದು ಹೇಳಿದ್ದ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ವಿರುದ್ಧ ಯಾರೂ ಮಾತನಾಡಿಲ್ಲ ಎಂದವರು ಹೇಳಿದರು.

ತಿರಂಗಾ ಯಾತ್ರೆಗಳನ್ನು ನಡೆಸುವವರು, ದೇಶದ ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದ ಮಹಾತ್ಮಾ ಗಾಂಧಿಯವರನ್ನು ಕೊಂದ ಗೋಡ್ಸೆ ಬಗ್ಗೆ ಅಭಿಪ್ರಾಯ ಹೇಳುತ್ತಿಲ್ಲ. ದೇಶದ ತ್ರಿವರ್ಣ ಧ್ವಜ ಸರಿಯಿಲ್ಲ ಎಂದು ಹೇಳಿದವರು, ಇಂದು ದೇಶದ ಸ್ವಾತಂತ್ರದ ಪ್ರತೀಕವಾದ ತ್ರಿವರ್ಣ ಧ್ವಜವನ್ನು ಕೈಯ್ಯಲ್ಲಿ ಹಿಡಿದು ಬೀದಿ ಬೀದಿ ಸುತ್ತುತ್ತಾ ದೇಶ ಪ್ರೇಮವನ್ನು ತೋರಿಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವದ ಶಕ್ತಿ. ಸಹಬಾಳ್ವೆಯಿಂದ ಜೀವನ ನಡೆಸುವುದೇ ದೇಶ ಪ್ರೇಮ ಎಂದು ಖಾದರ್ ನುಡಿದರು.

ದೇಶ ಪ್ರೇಮವನ್ನು ಯಾರಿಗೂ ಗುತ್ತಿಗೆ ವಹಿಸಲಾಗಿಲ್ಲ. ಆಮ್ನೆಸ್ಟಿ ಇಂಟರ್ ನ್ಯಾಷನಲ್ ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆ ವರದಿ ಬರಲಿ ಎಂದವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಯುವಕರನ್ನು  ಭಾವನಾತ್ಮಕವಾಗಿ ಈ ರೀತಿಯಲ್ಲಿ ಒಡೆಯುವುದರಿಂದಾಗಿಯೇ ಪ್ರವೀಣ್ ಪೂಜಾರಿ, ಹರೀಶ್, ರಾಜು ಮೊಗವೀರ ಮೊದಲಾದ ನಿರಪರಾಧಿಗಳ ಹತ್ಯೆಗೆ ಕಾರಣವಾಗಿದೆ. ದೇಶದ ವಿರುದ್ಧದ ಹೇಳಿಕೆಗಳನ್ನು ಯಾರೂ ಸಹಿಸುವುದಿಲ್ಲ. ಭಾರತೀಯರು ಯಾರೂ ಅಂತಹ ಹೇಳಿಕೆಗಳನ್ನು ನೀಡುವುದಿಲ್ಲ ಎಂದವರು ಹೇಳಿದರು.

ಉಳ್ಳಾಲ ನಗರ ಸಭೆ ಆಯುಕ್ತರ ವರ್ಗಾವಣೆ ವಿಚಾರದಲ್ಲಿ ಸ್ಥಳೀಯ ಶಾಸಕನಾದ ತನಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಈ ವಿಚಾರದಲ್ಲಿ ತಮ್ಮ ವಿರೋಧವನ್ನು ಜಿಲ್ಲಾಡಳಿತದ ಗಮನಕ್ಕೆ ತರಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಸಚಿವ ಖಾದರ್ ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News