ಚರಣ್ ಕೊಲೆ ಪ್ರಕರಣ: ಆರೋಪಿಗಳಿಗೆ ಪೊಲೀಸ್ ಕಸ್ಟಡಿ

Update: 2016-08-23 16:09 GMT

ಮಂಗಳೂರು, ಆ.2: ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ವಾಮಂಜೂರಿನಲ್ಲಿ ಹಾಡ ಹಗಲೇ ರೌಡಿ ಶೀಟರ್ ಚರಣ್ ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರಿಂದ ಬಂಧಿಸಲ್ಪಟ್ಟ ಐದು ಮಂದಿ ಆರೋಪಿಗಳನ್ನು ಪೊಲೀಸರು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗಳಿಗೆ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿ ವಿಧಿಸಿದೆ.

ಮೂಡುಶೆಡ್ಡೆ ಶಿವನಗರದ ನಿವಾಸಿ ರಿಝ್ವಾನ್ ವಾಮಂಜೂರು, ಕೆಲೆರೈಕೋಡಿಯ ಮುಹಮ್ಮದ್ ರಹೀಫ್ (19), ಮೂಡುಶೆಡ್ಡೆಯ ಮುಹಮ್ಮದ್ ಶಾರೂಕ್ (20), ಮುಹಮ್ಮದ್ ಮುಸ್ತಫಾ (19), ಗುರುಪುರದ ನಿವಾಸಿ ನವಾಝ್ (23) ಅವರಿಗೆ ನ್ಯಾಯಾಲಯ ಪೊಲೀಸ್ ಕಸ್ಟಡಿ ನೀಡಿದೆ. ಆರೋಪಿಗಳನ್ನು ಇಂದು ಬೆಳಗ್ಗೆ ಪಾಣೆಮಂಗಳೂರು ಹಳೆ ಟೋಲ್ಗೇಟ್ ಬಳಿಯಲ್ಲಿ ವಶಕ್ಕೆ ಪಡೆದುಕೊಂಡಿರುವುದಾಗಿ ಪೊಲೀಸ್ ಬ್ಲಾಗ್ ತಿಳಿಸಿದೆ.

ಆಗಸ್ಟ್ 19ರಂದು ಚರಣ್ ಎಂಬಾತ ತನ್ನ ಪತ್ನಿ ಹಾಗೂ ಮಗುವಿನ ಜೊತೆ ವಾಮಂಜೂರಿನ ಸಂತೋಷ್ ಎಂಬವರ ರಿಕ್ಷಾದಲ್ಲಿ ಕಾವೂರು ಪೊಲೀಸ್ ಠಾಣೆಗೆಂದು ಹೋಗುತ್ತಿದ್ದ ಸಂದರ್ಭದಲ್ಲಿ ವಾಮಂಜೂರು ಜಂಕ್ಷನ್ ಬಳಿಯ ಪೆಟ್ರೋಲ್ ಬಂಕ್‌ನ ಎದುರುಗಡೆ ಕಪ್ಪು ಬಣ್ಣದ ಬೊಲೆರೋ ಜೀಪನ್ನು ರಿಝ್ವಾನ್ ಎಂಬಾತ ಚಲಾಯಿಸಿಕೊಂಡು ರಿಕ್ಷಾ ಬಳಿ ಬಂದಿದ್ದು, ಚರಣ್ ರಿಕ್ಷಾದಿಂದ ಹಾರಿ ತಪ್ಪಿಸಿಕೊಂಡು ಸ್ವಲ್ಪ ದೂರ ಓಡಿ ಹೋಗುವಷ್ಟರಲ್ಲಿ ಆತನನ್ನು ಓಡಿಸಿಕೊಂಡು ಬಂದ ರಿಝ್ವಾನ್ ಮತ್ತು ಇತರರು ಅವರ ಕೈಯಲ್ಲಿದ್ದ ತಲವಾರಿನಿಂದ ಯದ್ವಾ ತದ್ವಾ ಹಲ್ಲೆ ನಡೆಸಿದ್ದಾರೆ. ಪರಿಣಾಮವಾಗಿ ಗಂಭೀರ ಗಾಯಗೊಂಡ ಚರಣ್‌ನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.

ಆರೋಪಿಗಳ ಪೈಕಿ ಮುಹಮ್ಮದ್ ರಿಝ್ವಾನ್ ಮತ್ತು ಮೃತ ಚರಣ್‌ಗೆ ಹಳೇ ದ್ವೇಷವಿದ್ದು, ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಳೆದ್ವೇಷದ ಹಿನ್ನೆಲೆಯಲ್ಲಿ ರಿಝ್ವನ್ ಇತರ ಆರೋಪಿಗಳ ಜೊತೆ ಸೇರಿ ಚರಣ್‌ನ ಕೊಲೆಗೈದಿದ್ದಾನೆ. ಆರೋಪಿ ಮುಹಮ್ಮದ್ ರಿಝ್ವಾನ್ ವಿರುದ್ಧ ಹಿಂದೆ ಉಡುಪಿ ಜಿಲ್ಲೆಯ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದೆ. ಮುಹಮ್ಮದ್ ರಯೀಫ್ ವಿರುದ್ಧ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಬೈಕ್ ಕಳವು ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಬ್ಲಾಗ್ ತಿಳಿಸಿದೆ.

ಸಿಸಿಬಿ ಘಟಕದ ಇನ್ಸ್‌ಪೆಕ್ಟರ್ ಸುನೀಲ್ ವೈ. ನಾಯ್ಕ್ ಮತ್ತು ಪಿಎಸ್ಸೈ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News