ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ಸಾಕ್ಷ್ಯನಾಶಗೈದ ಇಬ್ಬರು ಆರೋಪಿಗಳು ಸಿಐಡಿ ವಶಕ್ಕೆ

Update: 2016-08-24 15:41 GMT

ಉಡುಪಿ, ಆ.24: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಐವರು ಆರೋಪಿಗಳನ್ನು ಬುಧವಾರ ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಇವರಲ್ಲಿ ಸಾಕ್ಷ ನಾಶಪಡಿಸಿರುವ ಆರೋಪಿಗಳಾದ ನಿರಂಜನ್ ಭಟ್ ತಂದೆ ಶ್ರೀನಿವಾಸ ಭಟ್ ಹಾಗೂ ಕಾರು ಚಾಲಕ ರಾಘವೇಂದ್ರನನ್ನು ಐದು ದಿನಗಳ ಕಾಲ ಸಿಐಡಿ ವಶಕ್ಕೆ ಒಪ್ಪಿಸಲಾಗಿದೆ.

ಪ್ರಮುಖ ಆರೋಪಿ ಗಳಾದ ರಾಜೇಶ್ವರಿ ಶೆಟ್ಟಿ, ನವನೀತ್ ಶೆಟ್ಟಿ ಹಾಗೂ ನಿರಂಜನ್ ಭಟ್ ಅವರ ನ್ಯಾಯಾಂಗ ಬಂಧನವನ್ನು ಮತ್ತೆ 14 ದಿನಗಳ ಕಾಲ ವಿಸ್ತರಿಸಲಾಗಿದೆ.

ಆ.16ರಿಂದ ನ್ಯಾಯಾಂಗ ಬಂಧನದಲ್ಲಿರುವ ನವನೀತ್ ಶೆಟ್ಟಿ, ನಿರಂಜನ್ ಭಟ್ ಮತ್ತು ಆ.11ರಿಂದ ನ್ಯಾಯಾಂಗ ಬಂಧನದಲ್ಲಿರುವ ಶ್ರೀನಿವಾಸ ಭಟ್ ಹಾಗೂ ರಾಘವೇಂದ್ರನನ್ನು ಒಂದೇ ವಾಹನದಲ್ಲಿ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಬಿಗಿ ಪೊಲೀಸ್ ಭದ್ರತೆಯೊಂದಿಗೆ ಹಿರಿಯಡ್ಕ ಜೈಲಿನಿಂದ ಉಡುಪಿ ನ್ಯಾಯಾಲಯಕ್ಕೆ ಕರೆ ತರಲಾಯಿತು. ನಾಲ್ವರನ್ನು ಒಟ್ಟಿಗೆ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಮತ್ತು ಹೆಚ್ಚುವರಿ ಮುಖ್ಯನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಧೀಶ ರಾಜೇಶ್ ಕರ್ಣನ್ ಮುಂದೆ ಹಾಜರುಪಡಿಸಲಾಯಿತು.

ಈ ಸಂದರ್ಭದಲ್ಲಿ ಹಾಜರಿದ್ದ ಪ್ರಕರಣದ ತನಿಖಾಧಿಕಾರಿ ಸಿಐಡಿ ಡಿವೈಎಸ್ಪಿ ಚಂದ್ರಶೇಖರ್ ಹಿರಿಯ ಸಹಾಯಕ ಸರಕಾರಿ ಅಭಿಯೋಜಕ ಪ್ರವೀಣ್ ಕುಮಾರ್ ಆರ್. ಎನ್. ಅವರ ಮೂಲಕ ಸಾಕ್ಷನಾಶ ಪಡಿಸಿದ ಆರೋಪಿಗಳಾದ ಶ್ರೀನಿವಾಸ ಭಟ್ ಹಾಗೂ ರಾಘವೇಂದ್ರನನ್ನು ಐದು ದಿನಗಳ ಕಾಲ ವಶಕ್ಕೆ ನೀಡುವಂತೆ ಮನವಿ ಮಾಡಿದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಧೀಶರು ಈ ಇಬ್ಬರನ್ನು ಆ.29ರ ವರೆಗೆ ಸಿಐಡಿ ಪೊಲೀಸರ ಕಸ್ಟಡಿಗೆ ನೀಡಿ ಆದೇಶ ನೀಡಿದರು. ಉಳಿದ ಇಬ್ಬರನ್ನು ಕಸ್ಟಡಿಗೆ ಕೇಳದ ಹಿನ್ನೆಲೆಯಲ್ಲಿ ಸೆ.6ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.

ನಂತರ 1:45ರ ಸುಮಾರಿಗೆ ಮಂಗಳೂರಿನ ಕಾರಾಗೃಹ ದಲ್ಲಿ ಕಳೆದ ಎಂಟು ದಿನಗಳಿಂದ ನ್ಯಾಯಾಂಗ ಬಂಧನದಲ್ಲಿದ್ದ ರಾಜೇಶ್ವರಿ ಶೆಟ್ಟಿಯನ್ನು ನ್ಯಾಯಾಲಯಕ್ಕೆ ಕರೆತಂದು ನ್ಯಾಯಾಧೀಶ ರಾಜೇಶ್ ಕರ್ಣನ್ ಮುಂದೆ ಹಾಜರು ಪಡಿಸಲಾಯಿತು. ಈಕೆಯ ನ್ಯಾಯಾಂಗ ಬಂಧನವನ್ನು ಕೂಡ ಸೆ.6ರವರೆಗೆ ವಿಸ್ತರಿಸಿ ನ್ಯಾಯಾಧೀಶರು ಆದೇಶ ನೀಡಿದರು. ಬಳಿಕ ಇವರೆಲ್ಲರನ್ನು ಒಟ್ಟಿಗೆ ಬಿಗಿ ಭದ್ರತೆಯೊಂದಿಗೆ ಕೋರ್ಟ್‌ನಿಂದ ಕರೆದೊಯ್ಯಲಾಯಿತು. ಅವರಲ್ಲಿ ಇಬ್ಬರನ್ನು ಹಿರಿಯಡ್ಕ ಕಾರಾಗೃಹಕ್ಕೆ, ರಾಜೇಶ್ವರಿಯನ್ನು ಮಂಗಳೂರು ಕಾರಾಗೃಹಕ್ಕೆ ಕರೆದುಕೊಂಡು ಹೋಗಲಾ ಯಿತು. ಇಂದು ಕೂಡ ಆರೋಪಿಗಳನ್ನು ವೀಕ್ಷಿಸಲು ಸಾಕಷ್ಟು ಸಂಖ್ಯೆಯಲ್ಲಿ ಸಾರ್ವಜನಿಕರು ಕೋರ್ಟ್ ಆವರಣದ ಒಳಗೆ ಹಾಗೂ ಹೊರಗೆ ನೆರೆದಿದ್ದರು.

ಕೈಗೆ ಕೋಳ ಹಾಕಿ ಕರೆ ತಂದರು!

ಆರೋಪಿಗಳಾದ ನವನೀತ್ ಶೆಟ್ಟಿ ಹಾಗೂ ನಿರಂಜನ್ ಭಟ್‌ರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸುವ ವೇಳೆ ಇಬ್ಬರ ಕೈಗೂ ಒಂದೇ ಕೋಳ ಹಾಕಿ ಕರೆತರಲಾಗಿತ್ತು.

ಆದರೆ ಸಾಕ್ಷನಾಶ ಆರೋಪಿಗಳಾದ ಶ್ರೀನಿವಾಸ ಭಟ್ ಹಾಗೂ ರಾಘ ವೇಂದ್ರರಿಗೆ ಕೋಳ ಹಾಕದಿರುವುದು ಕಂಡುಬಂತು. ಅದೇ ರೀತಿ ರಾಜೇಶ್ವರಿ ಗೂ ಕೋಳ ತೊಡಿಸಿರಲಿಲ್ಲ. ಇವರಿಬ್ಬರಿಗೆ ಇದೇ ಮೊದಲ ಬಾರಿಗೆ ಕೈಗಳಿಗೆ ಕೋಳ ತೊಡಿಸಲಾಗಿತ್ತು. ಈ ಹಿಂದೆ ಪೊಲೀಸ್ ಕಸ್ಟಡಿಯಲ್ಲಿರುವಾಗ ಯಾವುದೇ ಆರೋಪಿಗಳಿಗೆ ಕೋಳ ಹಾಕಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News