ಡಾ.ಬಿ.ಆರ್.ಶೆಟ್ಟಿಯಿಂದ ಉಡುಪಿಯಲ್ಲಿ 400 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ

Update: 2016-08-24 15:16 GMT

ಬೆಂಗಳೂರು, ಆ.24: ಉಡುಪಿ ಜಿಲ್ಲೆಯ ಮೂಡನಿಡಂಬೂರು ಗ್ರಾಮದಲ್ಲಿ ಆರೋಗ್ಯ ಇಲಾಖೆಯ ಮೂರು ನಿವೇಶನಗಳ ಸರಕಾರಿ ಭೂಮಿಯಲ್ಲಿ ಸುಮಾರು 200 ಕೋ.ರೂ. ವೆಚ್ಚದಲ್ಲಿ 400 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ದುಬೈ ಮೂಲದ ಉದ್ಯಮಿ ಡಾ.ಬಿ.ಆರ್. ಶೆಟ್ಟಿಗೆ 30 ವರ್ಷಕ್ಕೆ ಗುತ್ತಿಗೆ ನೀಡಲು ಸಂಪುಟ ಒಪ್ಪಿಗೆ ನೀಡಿದೆ.

ಬುಧವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ, ಬಿ.ಆರ್.ಶೆಟ್ಟಿ ತಮ್ಮ ತಾಯಿಯ ಹೆಸರಿನಲ್ಲಿ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ ಸ್ಥಾಪಿಸಲು ನಿವೇಶನ ಕೋರಿದ್ದು, 60 ವರ್ಷಗಳ ಗುತ್ತಿಗೆ ಮನವಿ ಮಾಡಿದ್ದರು. ಆದರೆ, 30 ವರ್ಷಗಳ ಅವಧಿಗೆ ಗುತ್ತಿಗೆ ನೀಡಲು ತೀರ್ಮಾನಿಸಲಾಗಿದೆ ಎಂದರು.

ಈಗಾಗಲೇ ಆ ಸ್ಥಳಕ್ಕೆ ಹೊಂದಿಕೊಂಡಂತೆ ಸರಕಾರಿ ಆಸ್ಪತ್ರೆಯಿದ್ದು, ಅದು ಸುಸ್ಥಿತಿಯಲ್ಲಿಲ್ಲ. ಆ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದ ಅವರು, ಆಸ್ಪತ್ರೆಯ ಸೂಕ್ತ ನಿರ್ವಹಣೆಗೆ ಕಾನೂನು, ಆರೋಗ್ಯ ಇಲಾಖೆ ಅಧಿಕಾರಿಗಳ ಉಸ್ತುವಾರಿ ಸಮಿತಿ ರಚಿಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News