ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆ ಖಾಸಗೀಕರಣಕ್ಕೆ ಸಭಾಪತಿ ವಿರೋಧ

Update: 2016-08-25 18:40 GMT

ಉಡುಪಿ, ಆ.25: ಅಜ್ಜರಕಾಡಿನಲ್ಲಿರುವ ಜಿಲ್ಲಾ ಸರಕಾರಿ ಆಸ್ಪತ್ರೆಯನ್ನು ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ಹಸ್ತಾಂತರಿಸಬಾರದು ಎಂದು ಮಾಜಿ ಶಾಸಕ ಯು.ಆರ್.ಸಭಾಪತಿ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.
 ಈ ಆಸ್ಪತ್ರೆಗೆ ಭೂಮಿಯನ್ನು ದಾನವಾಗಿ ನೀಡಿದ ಹಾಜಿ ಅಬ್ದುಲ್ಲಾ ಸಾಹೇಬರು ತಮ್ಮ ದಾನಪತ್ರದಲ್ಲಿ ಈ ಭೂಮಿಯನ್ನು ಸರಕಾರದ ಆಸ್ಪತ್ರೆಗಾಗಿಯೇ ನೀಡಿದ್ದಾರೆ. ಹಿಂದೊಮ್ಮೆ ತಾನು ಉಡುಪಿ ಶಾಸಕನಾಗಿದ್ದಾಗ ಈ ಆಸ್ಪತ್ರೆಯನ್ನು ಮಣಿಪಾಲ ಆಸ್ಪತ್ರೆ ಆಡಳಿತಕ್ಕೆ ಹಸ್ತಾಂತರಿಸುವ ಪ್ರಸ್ತಾಪವನ್ನು ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಇಟ್ಟಾಗ ಇದನ್ನು ತೀವ್ರವಾಗಿ ವಿರೋಧಿಸಿದ್ದಾಗಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಲ್ಲದೆ ಅಂದು ಆಸ್ಪತ್ರೆಗೆ ಸರಕಾರದಿಂದ ಮೂರು ಕೋಟಿ ರೂ. ಬಿಡುಗಡೆಗೊಳಿಸಿ ಬ್ಲಡ್ ಬ್ಯಾಂಕ್, ಆಪರೇಶನ್ ಥೀಯೇಟರ್, ಮೋರ್ಚರಿ, ಕಣ್ಣಿನ ಆಪರೇಶನ್ ಥಿಯೇಟರ್‌ಗಳನ್ನು ಆಧುನಿಕ ರೀತಿಯಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ವ್ಯವಸ್ಥೆಗೊಳಿಸಲಾಗಿತ್ತು. ಇದಕ್ಕೆ ಅಂದು ರಾಜ್ಯಸಭಾ ಸದಸ್ಯರಾಗಿದ್ದ ಆಸ್ಕರ್ ಫೆರ್ನಾಂಡಿಸ್ ಹಾಗೂ ಸಂಸದರಾಗಿದ್ದ ವಿನಯಕುಮಾರ್ ಸೊರಕೆ ತಮ್ಮ ಸಂಸತ್ ಸದಸ್ಯರ ನಿಧಿಯಿಂದ ಸುಮಾರು ಮೂವತ್ತು ಲಕ್ಷ ರೂ. ನೀಡಿದ್ದರು.
ಆದುದರಿಂದ ಸರಕಾರ ತರಾತುರಿಯಲ್ಲಿ ಯಾವುದೇ ಕಾರಣಕ್ಕೂ ಉಡುಪಿ ಜಿಲ್ಲಾ ಆಸ್ಪತ್ರೆಯನ್ನು ಖಾಸಗಿಯವರಿಗೆ ಹಸ್ತಾಂತರಿಸುವ ನಿರ್ಣಯವನ್ನು ತೆಗೆದುಕೊಂಡಲ್ಲಿ ಉಡುಪಿಯ ಜನ ವಿರೋಧಿಸುತ್ತಾರೆ ಎಂದು ಸಭಾಪತಿ ಹೇಳಿದ್ದಾರೆ. ಒಂದು ವೇಳೆ ಜನಾಭಿಪ್ರಾಯಕ್ಕೆ ವಿರುದ್ಧವಾಗಿ ಸರಕಾರ ತನ್ನ ನಿಲುವಿಗೆ ಬದ್ಧವಾದಲ್ಲಿ ಜನವಿರೋಧಿ ಧೋರಣೆಯನ್ನು ಖಂಡಿಸಿ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News