ಮನಪಾ ಕಚೇರಿಯಲ್ಲಿ ಇ- ತ್ಯಾಜ್ಯ ಘಟಕಕ್ಕೆ ಚಾಲನೆ

Update: 2016-08-26 09:30 GMT

ಮಂಗಳೂರು, ಆ.26: ಬಳಕೆಯಾಗದ ಕಂಪ್ಯೂಟರ್, ಮೊಬೈಲ್ ಪೋನ್ ಸೇರಿದಂತೆ ಇಲೆಕ್ಟ್ರಾನಿಕ್ ತ್ಯಾಜ್ಯಗಳನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಆರಂಭಿಸಲಾಗಿರುವ ಇ- ತ್ಯಾಜ್ಯ ಘಟಕಕ್ಕೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಶುಕ್ರವಾರ ಚಾಲನೆ ನೀಡಿದರು. ಮಂಗಳೂರು ಮಹಾನಗರ ಪಾಲಿಕೆ ಕಚೇರಿ ಕಟ್ಟಡದಲ್ಲಿ ಇ-ತ್ಯಾಜ್ಯ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ವರ್ತಮಾನ ದಿನಗಳಲ್ಲಿ ಇ ತ್ಯಾಜ್ಯ ನಿರ್ವಹಣೆ ಹಾಗೂ ವಿಲೇ ಅತ್ಯಂತ ಕ್ಲಿಷ್ಟಕರವಾಲಿರುವ ಹಿನ್ನೆಲೆಯಲ್ಲಿ ಅದರ ಬಗ್ಗೆ ಮಾಹಿತಿ ಹಾಗೂ ಜಾಗೃತಿ ಮೂಡಿಸುವ ಕಾರ್ಯ ಅಗತ್ಯವಾಗಿದೆ ಎಂದರು. ಇ ತ್ಯಾಜ್ಯಗಳನ್ನು ಸಂಗ್ರಹಿಸಿ ಪುನರ್ಬಳಕೆ ಮಾಡುವ ಮೂಲಕ ಪರಿಸರ ಸಂರಕ್ಷಣೆಗೆ ಒತ್ತು ನೀಡುವುದು ಅತೀ ಅಗತ್ಯವಾಗಿದೆ. ಉದ್ಯಮ, ಕೈಗಾರಿಕಾ ಸಂಸ್ಥೆಗಳ ಜತೆಯಲ್ಲಿ ನಾಗರಿಕರು ಕೂಡಾ ಇ ತ್ಯಾಜ್ಯಗಳ ಗಂಭೀರತೆಯನ್ನು ಅರಿತುಕೊಳ್ಳಬೇಕಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜ, ಹವಾಮಾನ ವೈಪರೀತ್ಯದಿಂದ ಮಳೆ ಕಡಿಮೆ ಆಗಿ ತಾಪಮಾನ ಹೆಚ್ಚುತ್ತಿದೆ. ಮಳೆಗಾಗಿ ಪ್ರದೇಶವೊಂದರಲ್ಲಿ ಮೋಡ ಬಿತ್ತನೆ ಮಾಡಬೇಕೆಂದರೆ 90 ಕೋಟಿ ರೂ. ವ್ಯಯಿಸಬೇಕಾಗುತ್ತದೆ. ಅದಕ್ಕಾಗಿ ಪರಿಸರವನ್ನು ಸಂರಕ್ಷಿಸುವ ಬಗ್ಗೆ ಕಾಳಜಿ ವಹಿಸುವ ಮೂಲಕ ಪರಿಸರ ಸಮತೋಲನವನ್ನು ಕಾಯ್ದುಕೊಳ್ಳುವುದು ಬಹು ಮುಖ್ಯ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯ ಪರಿಸರ ನಿಯಂತ್ರಣ ಮಂಡಳಿಯ ಸಹಾಯಕ ನಿರ್ದೇಶಕ ಸುರೇಶ್, ಎನ್‌ಐಟಿಕೆಯ ನಿರ್ದೇಶಕ ಕೆ.ಎನ್. ಲೋಕೇಶ್, ಶಾಸಕ ಮೊಯ್ದಿನ್ ಬಾವಾ ಮಾತನಾಡಿದರು. ಮೇಯರ್ ಹರಿನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮನಪಾ ಸ್ಥಾಯಿ ಸಮಿತಿ ಅಧ್ಯಕ್ಷೆ ಕವಿತಾ ಸನಿಲ್, ಆಯುಕ್ತ ಮುಹಮ್ಮದ್ ನಝೀರ್ ಉಪಸ್ಥಿತರಿದ್ದರು.

ಇ ತ್ಯಾಜ್ಯದಲ್ಲಿದೆ ಅಪಾಯಕಾರಿ ರಾಸಾಯನಿಕ ವಸ್ತುಗಳು!
ದೇಶದಲ್ಲಿ ಇ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿ ಕೇಂದ್ರದ ಪರಿಸರ ಸಚಿವಾಲಯದ ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆಯಡಿ 2011ರಲ್ಲಿ ಸಿದ್ಧಪಡಿಸಲಾದ ನಿಯಮಗಳು ಹಲವಾರು ತಿದ್ದುಪಡಿಗಳೊಂದಿಗೆ 2016ರ ಮಾರ್ಚ್‌ನಲ್ಲಿ ಗಜೆಟ್ ಅಧಿಸೂಚನೆಗೊಂಡಿದೆ. ಅಕ್ಟೋಬರ್ 1ರಿಂದ ಈ ನಿಯಮಗಳು ದೇಶಾದ್ಯಂತ ಅನುಷ್ಠಾನಗೊಳ್ಳಲಿದೆ. ಸದ್ಯ ದೇಶಲ್ಲಿ ಇ ತ್ಯಾಜ್ಯದಲ್ಲಿರುವ ಚಿನ್ನ ಸೇರಿದಂತೆ ಇತರ ಲೋಹಗಳನ್ನು ಪ್ರತ್ಯೇಕಿಸುವ ವ್ಯವಸ್ಥೆ ಇಲ್ಲವಾಗಿದ್ದು, ಅದನ್ನು ಬೆಲ್ಜಿಯಂಗೆ ಕಳುಹಿಸಬೇಕಾಗಿದೆ. ಇ ತ್ಯಾಜ್ಯದಲ್ಲಿ ಪಾದರಸ, ಅರ್ಸಾನಿಕ್, ನಿಕೈಲ್ ಸೇರಿದಂತೆ ಅಪಾಯಕಾರಿ ರಾಸಾಯನಿಕ ವಸ್ತುಗಳು ಇರುವುದರಿಂದ ಅವುಗಳನ್ನು ಪ್ರತ್ಯೇಕಿಸಿ, ಪುನರ್ಬಳಕೆ ಮಾಡುವುದು ಅತೀ ಅಗತ್ಯವಾಗಿದೆ ಎಂದು ಪರಿಸರ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ರಾಜಶೇಖರ್ ಪುರಾಣಿಕ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News