ಎಲ್ಲರೂ ಒಂದಾಗಿ ಸ್ವಸ್ಥ ಸಮಾಜ ಕಟ್ಟೋಣ: ಹಾಜಿ ಅಬ್ದುರ್ರಶೀದ್

Update: 2016-08-26 13:53 GMT

ಉಳ್ಳಾಲ, ಆ.26: ಹಬ್ಬ ಹರಿದಿನ, ಆಚರಣೆಗಳು ಸಮಾಜದಲ್ಲಿ ಸೌಹಾರ್ದತೆಯ ವಾತಾವರಣದೊಂದಿಗೆ ಜನರಲ್ಲಿ ಒಗ್ಗಟ್ಟು ಮೂಡಿಸುವಂತಾಗಬೇಕು. ಎಲ್ಲಾ ಧರ್ಮದ ಜನರೂ ಜಾತಿ, ಮತ, ಬೇಧ ಮರೆತು ಒಂದಾಗಿ ಸ್ವಸ್ಥ ಸಮಾಜದಡಿ ನಾಡನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿಸಲು ಪ್ರಯತ್ನಿಸಬೇಕು ಎಂದು ಉಳ್ಳಾಲ ದರ್ಗಾದ ಅಧ್ಯಕ್ಷ ಹಾಜಿ ಅಬ್ದುರ್ರಶೀದ್ ಕರೆ ನೀಡಿದರು.

ತೊಕ್ಕೊಟ್ಟು ಶ್ರೀ ಜೈ ವೀರ ಮಾರುತಿ ವ್ಯಾಯಾಮ ಶಾಲೆಯ ಆಶ್ರಯದಲ್ಲಿ ನಡೆದ 56ನೆ ವರುಷದ ಮೊಸರುಕುಡಿಕೆ ಉತ್ಸವ ಸಮಾರಂಭದ ಸಭಾ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.

ತೊಕ್ಕೊಟ್ಟಿನ ಮೊಸರುಕುಡಿಕೆ ಉತ್ಸವಕ್ಕೆ ಅನೇಕ ವರುಷಗಳ ಇತಿಹಾಸವಿದ್ದು, ಹಿಂದಿನಿಂದಲೂ ನಾವು ಜಾತಿ ಬೇಧ ಮರೆತು ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದೇವೆ. ಎಲ್ಲಾ ಧರ್ಮಗಳಲ್ಲೂ ಕೆಲವು ಪುಂಡ ಶಕ್ತಿಗಳು ಸಮಾಜದ್ರೋಹಿ ಕೆಲಸ ಮಾಡುತ್ತಿದ್ದು, ಯಾವುದೇ ಸಬೆ ಸಮಾರಂಭಗಳನ್ನು ಯಶಸ್ವಿಯಾಗಿ ನೆರವೇರಿಸಲು ಆಯೋಜಕರು ಇಂದಿನ ದಿವಸಗಳಲ್ಲಿ ಕಷ್ಟಪಡುವ ಅನಿವಾರ್ಯತೆ ಬಂದೊದಗಿದೆ. ನಾವೆಲ್ಲರೂ ಒಟ್ಟಾಗಿ ಅಂತಹ ಶಕ್ತಿಗಳನ್ನು ದಮನಿಸಿ ಸರ್ವಜನಾಂಗದ ಶಾಂತಿಯ ತೋಟವನ್ನು ನಿರ್ಮಿಸೋಣ ಎಂದು ಕರೆ ನೀಡಿದರು.

ಸಚಿವ ಯು.ಟಿ ಖಾದರ್ ಮಾತನಾಡಿ, ಕೃಷ್ಣನ ಬಾಲಲೀಲೆಯನ್ನು ನೆನಪಿಸುವ ಮೊಸರುಕುಡಿಕೆ ಉತ್ಸವದ ಆಚರಣೆಯ ಮುಖಾಂತರ ಸ್ಥಳೀಯ ಪ್ರದೇಶದ ಜನರಲ್ಲಿ ಪರಸ್ಪರ ಬಾಂಧವ್ಯದ ಕೊಂಡಿಯನ್ನು ಸಧೃಡಗೊಳಿಸುವ ಕಾರ್ಯ ಜೈ ವೀರಮಾರುತಿ ವ್ಯಾಯಾಮ ಶಾಲೆಯ ಸದಸ್ಯರು ಮಾಡಿರುವುದು ಶ್ಲಾಘನೀಯ ಎಂದು ಹೇಳಿದರು.

ತೊಕ್ಕೊಟ್ಟು ಅಂಬೇಡ್ಕರ್ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಳ್ಳಾಲ ದರ್ಗಾ ಅಧ್ಯಕ್ಷ ರಶೀದ್ ಹಾಜಿ, ಮೂರು ಸಾವಿರಕ್ಕೂ ಅಧಿಕ ಶವಸಂಸ್ಕಾರಗಳಿಗೆ ಮಾರ್ಗದರ್ಶನಗೈದು ವಿಶಿಷ್ಟ ಸಮಾಜ ಸೇವೆಗೈದ ಬಾಬು ಪಿಲಾರ್,ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಗಮನಾರ್ಹ ಅಂಕಗಳನ್ನು ಪಡೆದ ಮಾ.ಸೊಹಾನ್, ರೈಲ್ವೆ ಸಲಹಾ ಸಮಿತಿ ಸದಸ್ಯ ಚಂದ್ರಹಾಸ್ ಅಡ್ಯಂತಾಯ ಅವರನ್ನು ಸನ್ಮಾನಿಸಲಾಯಿತು.

ಕಾಪಿಕಾಡಿನಿಂದ ತೊಕ್ಕೊಟ್ಟು ಒಳಪೇಟೆಯವರೆಗೂ ಆಕರ್ಷಕ ಶೋಭಾಯಾತ್ರೆಯು ನಡೆಯಿತು. ಕಾಪಿಕಾಡು ಉಮಾಮಹೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಎ.ಜೆ. ಶೇಖರ್, ಉಳ್ಳಾಲ ನಗರಸಭಾ ಉಪಾಧ್ಯಕ್ಷೆ ಚಿತ್ರಾ, ಜೈ ವೀರ ಮಾರುತಿ ವ್ಯಾಯಾಮ ಶಾಲೆಯ ಹಿರಿಯ ಗುರುಗಳಾದ ರಾಜೀವ್ ಮೆಂಡನ್, ರೋಹಿತ್ ಉಳ್ಳಾಲ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News