ಟಿಆರ್‌ಎಫ್ ಪ್ರಯತ್ನದ ಫಲಶುೃತಿ: ಗುಡಿಸಲಿನಲ್ಲಿದ್ದ ಕುಟುಂಬಕ್ಕೆ ಸುಸಜ್ಜಿತ ಮನೆ

Update: 2016-08-26 15:29 GMT

ಅಜಿಲಮೊಗರು: ಆ.26: ಅನಿವಾಸಿ ಭಾರತೀಯ ಉದ್ಯಮಿ ಮುಹಮ್ಮದ್ ಮನ್‌ಝರ್ ಬೆಳುವಾಯಿ (ಮನ್ಸೂರ್) ಮತ್ತವರ ಸಹೋದರರ ನೆರವಿನಿಂದ ಅಜಿಲಮೊಗರಿನ ನೇಲ್ಯಪಲ್ಕೆ ಎಂಬಲ್ಲಿ ಮೈಮುನಾ ಎಂಬಾಕೆಗೆ ನಿರ್ಮಾಣಗೊಂಡ ಮನೆ ಶುಕ್ರವಾರ ಉದ್ಘಾಟನೆಗೊಂಡಿತು.

ಮೈಮುನಾ ತನ್ನ ಅಣ್ಣನ ಜಾಗದಲ್ಲಿ ಪುಟ್ಟ ಗುಡಿಸಲಿನಲ್ಲಿ ತನ್ನೆರಡು ಮಕ್ಕಳೊಂದಿಗೆ ವಾಸಿಸುತ್ತಿದ್ದರು. ಅವರ ಈ ಶೋಚನೀಯ ಪರಿಸ್ಥಿತಿಯನ್ನು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಅರಿತುಕೊಂಡು ಉದ್ಯಮಿ ಮನ್ಸೂರ್ ಬೆಳುವಾಯಿಯವರ ಗಮನಕ್ಕೆ ತಂದಿತು. ಅದರಂತೆ ಈ ಮನೆಗೆ ಹೊಸ ರೂಪಕೊಡಲು ನಿರ್ಧರಿಸಿದ ಮನ್ಸೂರ್ ಮತ್ತವರ ಸಹೋದರರು ಟಿಆರ್‌ಎಫ್‌ಗೆ ಮನೆ ನಿರ್ಮಿಸಿ ಕೊಡಲು ಬೇಕಾದ ಅಗತ್ಯ ಆರ್ಥಿಕ ಸಹಾಯವನ್ನು ನೀಡಿದರು.

ದಾನಿ ಮನ್ಸೂರ್ ಬೆಳುವಾಯಿಯವರ ತಂದೆ ಬಿ. ಕಾಸಿಂ ಸಾಹೇಬ್ ಬೆಳುವಾಯಿ ಹೊಸ ಮನೆಯ ಕೀಲಿಕೈಯನ್ನು ಹಸ್ತಾಂತರಿಸುವ ಮೂಲಕ ಉದ್ಘಾಟಿಸಿದರು. ಅಜಿಲಮೊಗರು ಮಸೀದಿಯ ಖತೀಬ್ ಹಾಜಿ ಅಬ್ದುಲ್ ಹಮೀದ್ ಮುಸ್ಲಿಯಾರ್ ದುಆ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಅಜಿಲಮೊಗರು ಮಸೀದಿಯ ಅಧ್ಯಕ್ಷ ಹಾಗೂ ಉದ್ಯಮಿ ಪಿ.ಬಿ. ಅಬ್ದುಲ್ ಹಮೀದ್ ಹಾಜಿ, ಉಪಾಧ್ಯಕ್ಷ ಆದಂ ಹಾಜಿ, ಕಾರ್ಯದರ್ಶಿ ಆದಂ ಕುಂಞಿ, ಉದ್ಯಮಿ ರಾಧಾಕೃಷ್ಣ ರೈ ಅಜಿಲಮೊಗರು ಶುಭ ಹಾರೈಸಿದರು.

ದಾನಿಗಳಾದ ಮನ್ಸೂರ್ ಬೆಳುವಾಯಿ, ಅಸ್ಗರ್ ಬೆಳುವಾಯಿ, ಟ್ಯಾಲೆಂಟ್ ಸಲಹೆಗಾರ ಸುಲೈಮಾನ್ ಶೇಖ್ ಬೆಳುವಾಯಿ, ಗುತ್ತಿಗೆದಾರ ಹಂಝ, ಟ್ಯಾಲೆಂಟ್‌ನ ಅಧ್ಯಕ್ಷ ರಿಯಾಝ್ ಕಣ್ಣೂರು, ಉಪಾಧ್ಯಕ್ಷ ಸೈದುದ್ದೀನ್ ಬಜ್ಪೆ, ಹುಸೈನ್ ಬಡಿಲ, ನಝೀರ್ ಹೊಸಮೊಗರು ಮತ್ತಿತರರು ಉಪಸ್ಥಿತರಿದ್ದರು.

ಟ್ಯಾಲೆಂಟಿನ ಪ್ರಧಾನ ಕಾರ್ಯದರ್ಶಿ ಡಿ. ಅಬ್ದುಲ್ ಹಮೀದ್ ಕಣ್ಣೂರು ಸ್ವಾಗತಿಸಿದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News