ಕಡಬ: ಬಾಡಿಗೆ ವಿವಾದ

Update: 2016-08-26 18:25 GMT

ಕಡಬ, ಆ.26: ಗುತ್ತಿಗಾರಿನಿಂದ ಬಳಕ್ಕ-ಪಂಜ ಮಾರ್ಗವಾಗಿ ಕಡಬಕ್ಕೆ ಟೂರಿಸ್ಟ್ ವ್ಯಾನೊಂದು ಟ್ರಿಪ್ ನಡೆಸುವುದಕ್ಕೆ ಆಕ್ಷೇಪಿಸಿ ಪಂಜ-ಕಡಬ ರೂಟ್‌ನಲ್ಲಿ ಟ್ರಿಪ್ ನಡೆಸುವ ಖಾಸಗಿ ಜೀಪ್‌ನವರು ವ್ಯಾನ್‌ಗೆ ಜೀಪ್ ಅಡ್ಡವಿಟ್ಟ ಘಟನೆ ಶುಕ್ರವಾರ ಕಡಬದಲ್ಲಿ ನಡೆದಿದೆ. ಗ್ರಾಮೀಣ ಪ್ರದೇಶವಾದ ಗುತ್ತಿಗಾರಿನ ಬಳಕ್ಕ ಎಂಬಲ್ಲಿ ಸಾರ್ವಜನಿಕರಿಗೆ ವಾಹನದ ವ್ಯವಸ್ಥೆ ಇಲ್ಲದಿರುವುದರಿಂದ ಸ್ಥಳೀಯರೋರ್ವರು ಶುಕ್ರವಾರದಿಂದ ಟೂರಿಸ್ಟ್ ವ್ಯಾನ್‌ನಲ್ಲಿ ಟ್ರಿಪ್ ಆರಂಭಿಸಿದ್ದರು. ಇದಕ್ಕೆ ಆಕ್ಷೇಪಿಸಿದ ಪಂಜ-ಕಡಬ ನಡುವೆ ಸಂಚರಿಸುವ ಖಾಸಗಿ ವಾಹನ ಚಾಲಕರು ಜೀಪನ್ನು ಅಡ್ಡವಿಟ್ಟು ಪ್ರತಿಭಟಿಸಿದರು. ಕಡಬ ಸಂಗಮ ಟೂರಿಸ್ಟ್ ಜೀಪ್ ಚಾಲಕ ಮಾಲಕ ಸಂಘದವರು ವ್ಯಾನ್‌ಚಾಲಕನ ಬೆಂಬಲಕ್ಕೆ ನಿಂತರು.
 ಈ ಸಂದರ್ಭದಲ್ಲಿ ಸ್ಥಳದಲ್ಲಿ ಮಾತಿನ ಚಕಮಕಿ ಉಂಟಾಯಿತು. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಕಡಬ ಪೊಲೀಸರು ಇತ್ತಂಡಗಳವರನ್ನು ಶನಿವಾರ ಠಾಣೆಗೆ ಬರುವಂತೆ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News