ಸೃಜನಾತ್ಮಕ ಬರಹಗಾರನಿಗೆ ಆತ್ಮಕತೆ ರಚನೆ ಒಂದು ಸವಾಲು: ಡಾ.ನಟರಾಜ ಹುಳಿಯಾರ್

Update: 2016-08-28 13:21 GMT

ಮಂಗಳೂರು, ಆ.28: ಸೃಜನಾತ್ಮಕ ಬರಹಗಾರನಿಗೆ ಆತ್ಮಕಥೆ ಬರೆಯುವುದು ಒಂದು ಸವಾಲಿನ ಕೆಲಸವಾಗಿದೆ ಎಂದು ಸಾಹಿತಿ ಡಾ.ನಟರಾಜ ಹುಳಿಯಾರ್ ಅಭಿಪ್ರಾಯಪಟ್ಟಿದ್ದಾರೆ.

ಅವರು ಇಂದು ನಗರದ ಸಂತ ಅಲೋಶಿಯಸ್ ಕಾಲೇಜಿನ ಎರಿಕ್ ಮಥಾಯಸ್ ಸಭಾಂಗಣದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ, ಡಿವೈಎಫ್‌ಐ, ಸಾಹಿತ್ಯ ಸಮುದಾಯ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡ ‘ಕನ್ನಡ ಆತ್ಮಕತೆಗಳಲ್ಲಿ ದಲಿತ ಸಂವೇದನೆ’ ಎಂಬ ವಿಷಯದ ಕುರಿತ ಎರಡು ದಿನಗಳ ವಾಚನಾಭಿರುಚಿ ಕಮ್ಮಟದಲ್ಲಿ ‘ಆತ್ಮಕತೆಗಳು ಸ್ವ ಸಮಾಜ ಮತ್ತು ಸಂಸ್ಕ್ಕೃತಿ’ ಎಂಬ ವಿಷಯದ ಬಗ್ಗೆ ಮಾತನಾಡುತ್ತಿದ್ದರು.

ಆತ್ಮಕತೆಗಳು ಒಂದು ಕಾಲದ ಸಂಗತಿಗಳ ಬಗ್ಗೆ ಮಾತನಾಡುತ್ತವೆ. ಆ ಕಾರಣದಿಂದ ಅವು ಆ ಕಾಲದ ಕಥನಗಳು ಆಗುವ ಸಾಧ್ಯತೆ ಇದೆ. ಆತ್ಮಕ್ಕೆ ಹತ್ತಿರವಾಗುವ ವಿಷಯಗಳನ್ನು ಆತ್ಮಕಥೆಗಳು ಒಳಗೊಂಡಿರುವುದರಿಂದ, ಕಾಲದ ಸಾಮಾಜಿಕ ಸಾಂಸ್ಕ್ಕೃತಿಕ ಸಂರಚನೆಗಳ ಪ್ರಸ್ತಾಪಗಳು ದಾಖಲಾಗಿರುವುದರಿಂದ, ಅನ್ಯರ ಭಯ, ಸ್ವ ಹುಡುಕಾಟ ಮಾಡಬೇಕಾಗುವುದರಿಂದ ಅವುಗಳನ್ನು ಒಂದುಗೂಡಿಸಿ ಬರೆಯುವುದು ಒಂದು ಸವಾಲಿನ ಕೆಲಸ ಎಂದು ನಟರಾಜ ಹುಳಿಯಾರ್ ತಿಳಿಸಿದರು.

ಆತ್ಮಕತೆಗಳ ಮೂಲಕ ಸಮಾಜವನ್ನು ಬೆಸೆಯುವ ಕೆಲಸ ಮಾಡಬಹುದು. ಆದರೆ, ಒಡಕು ಮೂಡದಂತೆ ಎಚ್ಚರ ವಹಿಸಬೇಕಾದ ಅಗತ್ಯವಿದೆ.ಇನ್ನೊಬ್ಬರ ಮಾತಿನ ಮೂಲಕ ಒಬ್ಬನ ಆತ್ಮಕತೆಯನ್ನು ಕಟ್ಟಿಕೊಡಬಹುದು. ಸ್ವಪ್ರತಿಷ್ಠೆಯ ಆತ್ಮಕತೆಗಳು ಸ್ವವೈಭವೀಕರಣದಿಂದ ಕೂಡಿದಾಗ ಅವುಗಳು ಪರಿಪೂರ್ಣವಾಗಲು ಸಾಧ್ಯವಿಲ್ಲ. ಮುಗ್ದತೆಯೊಂದಿಗೆ ತಮ್ಮ ಕತೆಗಳನ್ನು ದಾಖಲಿಸುವ ಆತ್ಮಕತೆಗಳು ಹೆಚ್ಚು ಮುಖ್ಯವಾಗುತ್ತವೆ ಎಂದು ನಟರಾಜ ಹುಳಿಯಾರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News