ದೇಶ ಕಟ್ಟುವ ಸಾಮರ್ಥ್ಯ ದಲಿತರಲ್ಲಿದೆ: ಪ್ರೊ.ಕೆ.ಅಭಯ ಕುಮಾರ್

Update: 2016-08-29 15:37 GMT

ಮಂಗಳೂರು, ಆ.29: ದೇಶ ಕಟ್ಟುವ ಸಾಮರ್ಥ್ಯ ದಲಿತರಲ್ಲಿದೆ. ದಲಿತರ ಸ್ವಾಭಿಮಾನದ ಆತ್ಮಕತೆಗಳು ಹೆಚ್ಚಿನ ಪ್ರಮಾಣದಲ್ಲಿ ಬೆಳಕಿಗೆ ಬರಬೇಕಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಪ್ರೊ.ಅಭಯ ಕುಮಾರ್ ತಿಳಿಸಿದರು.

ಅವರು ಇಂದು ನಗರದ ಸಂತ ಅಲೋಶಿಯಸ್ ಕಾಲೇಜಿನ ಎರಿಕ್ ಮಥಾಯಸ್ ಸಭಾಂಗಣದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ, ಡಿವೈಎಫ್‌ಐ,ಸಾಹಿತ್ಯ ಸಮುದಾಯ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡ ಕನ್ನಡ ಆತ್ಮ ಕತೆಗಳಲ್ಲಿ ದಲಿತ ಸಂವೇದನೆ ಎಂಬ ವಿಷಯದ ಕುರಿತ ಎರಡು ದಿನಗಳ ವಾಚನಾಭಿರುಚಿ ಕಮ್ಮಟದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದಲಿತರು ಈ ದೇಶದ ಸಂಪತ್ತನ್ನು ಕೊಳ್ಳೆ ಹೊಡೆದವರಲ್ಲ, ಸ್ವಾತಂತ್ರಕ್ಕೆ ಅಪಮಾನ ಮಾಡಿದವರಲ್ಲ, ಸ್ವಾಭಿಮಾನಿಗಳಾಗಿ ಬದುಕಿದವರು ಮೀಸಲಾತಿಯಿಂದಲೇ ದಲಿತರು ಉದ್ಧಾರವಾಗಿದ್ದಾರೆ. ದಲಿತರು ಮಾತ್ರ ಗೋಮಾಂಸ ತಿನ್ನುತ್ತಾರೆ ಎನ್ನುವುದು ಅಪ್ಪಟ ಸುಳ್ಳು. ದಲಿತರ ಬದುಕಿನಲ್ಲಿ ಗೋವಿನ ಮಹತ್ವೇನು ಎನ್ನುವುದು ದಲಿತರಿಗೆ ಮಾತ್ರ ಗೊತ್ತು. ದಲಿತರ ಆತ್ಮಕತೆಗಳಲ್ಲಿ ಬಡತನ, ನೋವು, ಹಸಿವು, ಸಿಟ್ಟು, ಆಕ್ರೋಶಗಳು ವ್ಯಕ್ತಗೊಂಡಿವೆ.ಅವೆಲ್ಲವೂ ಅವರ ಬದುಕಿನ ಅನುಭವಗಳಾಗಿವೆ. ದಲಿತರಿಗೆ ಅವರದೆ ಆದ (‘ಐಡೆಂಟಿಟಿ’) ವ್ಯಕ್ತಿತ್ವವಿದೆ. ಅವರ ಜಾತಿಯಲ್ಲಿನ ಹಿರಿಮೆ, ದೈವಗಳ ಬಗೆಗಿನ ನಂಬಿಕೆಗಳಿವೆ. ಅದೇ ರೀತಿ ದಲಿತರ ಆತ್ಮಕತೆಗಳಲ್ಲಿ ತಾಯಿಯ ಸ್ಥಾನ ಸ್ವಲ್ಪ ಮರೆಯಾದಂತೆ ಕಂಡು ಬರುತ್ತದೆ. ದಲಿತರ ಬದುಕಿನಲ್ಲಿ ತಾಯಿಯ ಪಾತ್ರ ಮಹತ್ವದ್ದಾಗಿದೆ. ಆದರೆ ಆ ವ್ಯಕಿತ್ವದ ಚಿತ್ರಣವಿರುವ ದಲಿತರ ಆತ್ಮಕತೆಗಳು ಬಂದಿಲ್ಲ ಎಂದು ಅಭಯ ಕುಮಾರ್ ವಿವರಿಸಿದರು.

ದಲಿತರ ಆತ್ಮ ಕತೆಗಳಿಗೆ ದ.ಸಂ.ಸ ಪ್ರೇರಣೆ

1974ರಿಂದ ಆರಂಭಗೊಂಡ ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿ ದಲಿತರ ನಡುವೆ ಎಚ್ಚರವನ್ನು ಮೂಡಿಸುವಲ್ಲಿ ಪ್ರಮುಖ ಪ್ರೇರಣಾ ಶಕ್ತಿಯಾಯಿತು. ಈ ಎಚ್ಚರ ಸಾಹಿತ್ಯ ವಲಯದಲ್ಲೂ ವ್ಯಾಪಿಸಿ ದಲಿತರ ಆತ್ಮಕತೆಗಳು ಬೆಳಕಿಗೆ ಬರಲು ಕಾರಣವಾಯಿತು ಎಂದು ಅಭಯಕುಮಾರ್ ತಿಳಿಸಿದರು.
ಪ್ರಸಕ್ತ ದೇಶ ದೇಶ ಪ್ರೇಮದ ಬಗ್ಗೆ ಚರ್ಚಿತವಾಗುತ್ತಿರುವಾಗ ಪ್ರಥಮ ಬಾರಿಗೆ ದಲಿತ ಆತ್ಮಚರಿತ್ರೆಗಳ ಬಗ್ಗೆ ಕಮ್ಮಟ ನಡೆದಿರುವುದು ಉತ್ತಮ ಬೆಳವಣಿಗೆ ಎಂದು ಅಭಯ ಕುಮಾರ್ ತಿಳಿಸಿದರು.

ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಸಾಹಿತ್ಯ ಸಮುದಾಯದ ರಾಜ್ಯ ಸಂಚಾಲಕ ವಸಂತರಾಜ್ ಮಾತನಾಡುತ್ತಾ, ದಶಕದ ಸಾಹಿತ್ಯದ ಹಿನ್ನೊಟವನ್ನು ಗಮನಿಸಿದಾಗ ಮಾರುಕಟ್ಟೆ, ಮೂಲಭೂತವಾದಿ ಶಕ್ತಿಗಳು ದಲಿತರು-ಮುಸಲ್ಮಾನರ ನಡುವೆ, ಆದಿವಾಸಿ-ಕ್ರಿಶ್ಚಿಯನ್‌ರ ನಡುವೆ ಜಗಳ ಹಬ್ಬಿಸಿರುವ ಕಾಲಘಟ್ಟದಲ್ಲಿ ಮರಾಠಿ ಸಾಹಿತ್ಯದ ಪ್ರಭಾವದಿಂದ ಕನ್ನಡದಲ್ಲಿ ಹುಟ್ಟಿಕೊಂಡ ಆತ್ಮಚರಿತ್ರೆಗಳು ಕನ್ನಡ ಸಾಹಿತ್ಯದಲ್ಲಿ ಪ್ರಮುಖ ಸ್ಥಾನ ಪಡೆಯುತ್ತವೆ ಎಂದರು.

ವೇದಿಕೆಯಲ್ಲಿ ಡಾ.ನಾಗಪ್ಪ ಗೌಡ, ವಾಸುದೇವ ಉಚ್ಚಿಲ್, ಡಾ.ಸರಸ್ವತಿ, ಮುನೀರ್ ಕಾಟಿಪಳ್ಳ ಮೊದಲಾದವರು ಉಪಸ್ಥಿತರಿದ್ದರು.ಕೃಷ್ಣ ಮೂರ್ತಿ ಚಿತ್ರಾಪುರ ಕಾರ್ಯಕ್ರಮ ನಿರೂಪಿಸಿದರು.

ಎರಡು ದಿನಗಳ ಕಮ್ಮಟದಲ್ಲಿ ಕೇಳಿ ಬಂದ ತುಣುಕುಗಳು

ಇತ್ತೀಚೆಗೆ ತನ್ನ ಹೆಂಡತಿಯ ಶವವನ್ನು ಹೊತ್ತು 10ಕಿ.ಮೀ ದೂರ ನಡೆದ ಸುದ್ದಿ ಪತ್ರಿಕೆಯಲ್ಲಿ ಓದಿದಾಗ ಅಲ್ಲಿ ಮನುಷ್ಯರೇ ಇರಲಿಲ್ಲವೇ ..?ಎನ್ನುವ ಭಾವನೆ ನನ್ನಲ್ಲಿ ಮೂಡಿತು.

ಮಾಧವಿ ಭಂಡಾರಿ, ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಸಂಚಾಲಕರು.

‘‘ದಲಿತರು ಅವರ ಅರ್ಹತೆಯಿಂದ ಮೇಲೆ ಬಂದರೂ ಅವರನ್ನು ಮೀಸಲಾತಿಯಿಂದ ಮೇಲೆ ಬಂದಿದ್ದಾರೆ ಎಂದು ಟೀಕಿಸುವ ಮನೋಭಾವ ಕೆಲವರಲ್ಲಿದೆ ಇದು ಸರಿಯಲ್ಲ’’

ರೇಖಾ, ಮಂಗಳೂರು ವಿ.ವಿ.ವಿದ್ಯಾರ್ಥಿನಿ.


*‘‘ಸ್ವಾತಂತ್ರ ಗಾಂಧೀಜಿಗೆ, ಅಂಬೇಡ್ಕರ್‌ಗೆ ಒಂದುರೀತಿಯ ಉದ್ದೇಶಕ್ಕಾಗಿ ಖುಷಿ ಕೊಡುತ್ತದೆ, ನೆಹರೂರವರಿಗೆ ಇನ್ನೊಂದು ಕಾರಣಕ್ಕಾಗಿ ಮಹತ್ವವೆನಿಸುತ್ತದೆ. ನನ್ನ ತಂದೆಗೆ ಬಾವಿಯಿಂದ ನೀರು ಸೇದುವ ಸ್ವಾತಂತ್ರ ಬಂತು ಎಂದು ಅಕ್ಕ ಪಕ್ಕದ ಬಾವಿಯಿಂದ ನೀರು ಸೇದಿ ಆ ನೀರನ್ನು ಅಲ್ಲೇ ಚೆಲ್ಲಿ ಸ್ವಾತಂತ್ರ ಅನುಭವಿಸುತ್ತಾರೆ. ಮರುದಿನ ನಮ್ಮ ಬಾವಿಯಿಂದ ಯಾರು ನೀರು ಸೇದಿದ್ದಾನೆ ಆತ ಬರಲಿ ಎಂದು ಜನ ಕಾಯುತ್ತಿದ್ದರು. ನಮ್ಮ ಜನಸಾಮಾನ್ಯರ ಸ್ವಾತಂತ್ರ ಅಲ್ಲಿಗೆ ಸೀಮಿತವಾಗಿದೆ’’

‘ಗವರ್ನೆಂಟು ಬ್ರಾಹ್ಮಣ’ ಆತ್ಮಕತೆ ಬರೆದ ಸಾಹಿತಿ ಡಾ.ಅರವಿಂದ ಮಾಲಗತ್ತಿಯ ಅಭಿಪ್ರಾಯ   

ದಲಿತ ಆತ್ಮಕತೆಗಳ ಕಮ್ಮಟ ಯುವ ಜನರಲ್ಲಿ ಓದುವ ಕ್ರೀಯೆಗೆ ಹಚ್ಚುವುದರ ಜೊತೆ ಗೆ ದಲಿತ ಸಂವೇದನೆಯನ್ನು ಗ್ರಹಿಸುವ ಆಶಯವನ್ನು ಮೈಗೂಡಿಸಿಕೊಳ್ಳಲು ಸಹಕಾರಿಯಾಗಬೇಕಾಗಿದೆ ಎನ್ನುವ ಆಶಯವನ್ನು ಹೊಂದಿದೆ’’

ಡಾ. ವಿಠಲ ಭಂಡಾರಿ, ಕಮ್ಮಟದ ನಿರ್ದೇಶಕ.

*‘‘ಭೂ ಸುಧಾರಣೆಗೆ ಬಂದರೂ ದಲಿತರಿಗೆ ಭೂಮಿಯ ಹಕ್ಕು ದೊರೆಯಲಿಲ್ಲ. ಏಕೆಂದರೆ ಅವರು ಗೇಣಿದಾರರಾಗಿರಲಿಲ್ಲ. ಅವರು ಭೂರಹಿತ ಕೂಲಿಯಾಳುಗಳಾಗಿದ್ದರು. ಆ ಕಾರಣದಿಂದ ಅವರಿಗೆ ಸತ್ತ ದನದ ಚರ್ಮ ಅವರ ಬದುಕಿಗೆ ಆಧಾರವಾಗಿತ್ತು.’’

ಡಾ.ಬಿ.ಶಿವರಾಮಶೆಟ್ಟಿ, ಮಂಗಳೂರು ವಿ.ವಿ.ಎಸ್.ವಿ.ಪಿ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News