ತರಾತುರಿಯಲ್ಲಿ ಮುಗಿದ ಕಾರ್ಕಳ ಪುರಸಭೆ ಸಾಮಾನ್ಯ ಸಭೆ

Update: 2016-08-30 18:43 GMT

ಕಾರ್ಕಳ, ಆ.30: ತರಾತುರಿಯಲ್ಲಿ ಸಭೆ ಮುಗಿಸಿ, ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ಮುಖ್ಯಾಧಿಕಾರಿ ಜೊತೆ ಉಡುಪಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಘಟನೆ ಕಾರ್ಕಳ ಪುರಸಭೆ ಸಾಮಾನ್ಯ ಸಭೆಯಲ್ಲಿ ನಡೆದಿದೆ.

ಬಂಡೀಮಠ ಬಸ್ ನಿಲ್ದಾಣ ಸಮಾನವಾಗಿ ಬಳಕೆಯಾಗಬೇಕು ಎಂದು ಒತ್ತಾಯಿಸಿ ಪ್ರತಿಪಕ್ಷ ಸದಸ್ಯ ಮುಹಮ್ಮದ್ ಶರೀಫ್ ತಲೆಗೆ ಕಪ್ಪುಬಟ್ಟೆ ಸುತ್ತಿ ಸದನದ ಬಾವಿಯ ಮಧ್ಯದಲ್ಲಿ ಕೂತು ಧರಣಿ ನಡೆಸಿದರು. ಅರ್ಧ ಗಂಟೆಯೊಳಗೆ ಸಭೆ ಮುಗಿಸಿ ಜಿಲ್ಲಾಧಿಕಾರಿ ಬಳಿ ತೆರಳಿ ಎರಡೂ ಬಸ್ ನಿಲ್ದಾಣಗಳನ್ನು ಸಮಾನವಾಗಿ ಬಳಕೆ ಮಾಡುವ ಕುರಿತು ಮಾತುಕತೆ ನಡೆಸಬೇಕು ಎಂದು ಆಗ್ರಹಿಸಿದರು. ಈ ಹಿನ್ನೆಲೆಯಲ್ಲಿ ಮುಖ್ಯಾಧಿಕಾರಿ ತರಾತುರಿಯಲ್ಲಿ ಸಭೆ ನಡೆಸಿ ಸದಸ್ಯರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದರು.

ಇದೇ ಸಂದರ್ಭ ಸದಸ್ಯ ಪ್ರಕಾಶ್ ರಾವ್ ಮಾತನಾಡಿ, ಬಸ್ ನಿಲ್ದಾಣ ಸಮಾನ ಬಳಕೆ ಕುರಿತು ತಹಶೀಲ್ದಾರ್, ಪೊಲೀಸ್ ಇಲಾಖೆಯಿಂದ ಗುಪ್ತವಾಗಿ ಸಭೆಗಳು ನಡೆಯುತ್ತಿದ್ದು, ಜನಪ್ರತಿನಿಧಿಗಳಾದ ನಮ್ಮನ್ನು ಆಹ್ವಾನಿಸುತ್ತಿಲ್ಲ ಎಂದು ದೂರಿದರು. ಸ್ಥಾಯಿ ಸಮಿತಿಯಲ್ಲಿ ಕೆಲಸಗಳಾಗುತ್ತಿಲ್ಲ. ತಾನು ನೀಡಿದ ಮನವಿಗೆ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಅಶ್ಫಾಕ್ ಅಹ್ಮದ್ ಆರೋಪಿಸಿದರು. ಅಲ್ಲದೆ ತನ್ನ ವಾರ್ಡ್‌ನಲ್ಲಿ ಪಾರ್ಕ್ ಅಭಿವೃದ್ಧಿಗೆ ಏಳು ಲಕ್ಷ ರೂ. ಕಾದಿರಿಸಿದ್ದು, ಈವರೆಗೆ ಟೆಂಡರ್ ಪ್ರಕ್ರಿಯೆ ನಡೆದಿಲ್ಲ ಎಂದ ಅವರು, ಸದನವನ್ನು ಬಹಿಷ್ಕರಿಸುವುದಾಗಿ ಹೇಳಿ ನಿರ್ಗಮಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ನವೀನ್ ದೇವಾಡಿಗ ಮಾತನಾಡಿ, ಗುತ್ತಿಗೆದಾರರು ಸ್ಥಾಯಿ ಸಮಿತಿಯಲ್ಲಿಟ್ಟ ಕಾಮಗಾರಿಯನ್ನು ನಡೆಸಲು ಮುಂದಾಗುತ್ತಿಲ್ಲ. ಈಗಾಗಲೇ ಗುತ್ತಿಗೆದಾರರನ್ನು ಕರೆಸಿ ಸಭೆ ನಡೆಸಿದ್ದು, ಈ ಹಿಂದಿನ ಬಿಲ್ ಬಾಕಿಯಿರುವ ಬಗ್ಗೆ ತಿಳಿಸುತ್ತಾರೆ. ಹಾಗಾದರೆ ಅದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು. ಅನಂತಶಯನದ ಬಳಿಯಿರುವ ಅಪಾರ್ಟ್‌ಮೆಂಟ್‌ವೊಂದರಿಂದ ಕೊಳಚೆ ನೀರು ರಾಮಸಮುದ್ರ ಸೇರುತ್ತಿರುವುದರಿಂದ ನೀರು ಕಲುಷಿತಗೊಳ್ಳುತ್ತಿದೆ. ತಕ್ಷಣ ಈ ಅಪಾರ್ಟ್‌ಮೆಂಟ್‌ನ ಮಾಲಕರ ಮೇಲೆ ಕ್ರಮಕೈಗೊಳ್ಳಬೇಕು ಎಂದು ಪುರಸಭೆ ಸದಸ್ಯ ಶುಭದ ರಾವ್ ಆಗ್ರಹಿಸಿದ್ದಾರೆ.

ಸದಸ್ಯ ಸುಭಿತ್ ಎನ್.ಆರ್. ಮಾತನಾಡಿ, ಪೌರಕಾರ್ಮಿಕರ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸಿ. ಪುರಸಭೆ ವ್ಯಾಪ್ತಿಯಲ್ಲಿ ಯಾವುದೇ ಕೆಲಸಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಆಡಳಿತ ವೈಫಲ್ಯಗಳು ಎದ್ದು ಕಾಣುತ್ತಿದೆ ಎಂದು ದೂರಿದರು. ನಳಿನಿ ಆಚಾರ್ಯ, ಶಾಂತಿ ಶೆಟ್ಟಿ, ವಿವೇಕಾನಂದ ಶೆಣೈ, ಪ್ರತಿಮಾ ಮೋಹನ್ ಈ ಸಂದರ್ಭ ಮಾತನಾಡಿದರು.

ಪುರಸಭೆ ಅಧ್ಯಕ್ಷೆ ಅನಿತಾ ಅಂಚನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಗಿರಿಧರ್ ನಾಯಕ್, ಸ್ಥಾಯಿ ಸಮಿತಿ ಅಧ್ಯಕ್ಷ ನವೀನ್ ದೇವಾಡಿಗ, ಮುಖ್ಯಾಧಿಕಾರಿ ರಾಯಪ್ಪಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News