ಸ್ಯಾಕ್ಸೋಫೋನ್ ನಲ್ಲಿ ಸಹೋದರಿಯರ ಅಪೂರ್ವ ಸಾಧನೆ!
ಐದಾರು ತಿಂಗಳ ಮೊದಲೇ ಕಾರ್ಯಕ್ರಮಗಳು ಬುಕ್ಕಿಂಗ್!
ಮಂಗಳೂರು, ಆ.31: ಉಸಿರು ಮತ್ತು ಕೈ ಬೆರಳು ಗಳ ಚಾಕಚಕ್ಯತೆಯೊಂದಿಗೆ ನುಡಿಸುವ ವಾದ್ಯ ಸ್ಯಾಕ್ಸೋಫೋನ್. ಬಹುವಾಗಿ ಪುರುಷರೇ ಈ ವಾದ್ಯ ವನ್ನು ನುಡಿಸುವುದಾದರೂ ಇತ್ತೀಚೆಗೆ ಹಲವಾರು ಮಹಿಳೆಯರು ಕೂಡಾ ಸ್ಯಾಕ್ಸೋಫೋನ್ ವಾದನ ದಲ್ಲಿ ತಮ್ಮ ಗರಿಮೆಯನ್ನು ಪ್ರದರ್ಶಿಸಿದ್ದಾರೆ. ಆದರೆ ಬೆಳ್ತಂಗಡಿಯ ಕುಟುಂಬವೊಂದರ ಮೂರು ಹೆಣ್ಣು ಮಕ್ಕಳು ಕೂಡಾ ಸ್ಯಾಕ್ಸೋಫೋನ್ ನುಡಿಸುವ ಮೂಲಕ ಜನಪ್ರಿಯರಾಗುತ್ತಿದ್ದಾರೆ.
ಒಂದೇ ವೇದಿಕೆ ಯಲ್ಲಿ ಜೊತೆಯಾಗಿ ಸ್ಯಾಕ್ಸೋಫೋನ್ ನುಡಿಸುತ್ತಾ ಸಂಗೀತ ಪ್ರಿಯರನ್ನು ಮಂತ್ರಮುಗ್ಧಗೊಳಿಸುವ ನೈಪುಣ್ಯವನ್ನು ಈ ಸಹೋದರಿಯರು ಪಡೆದುಕೊಂಡಿ ದ್ದಾರೆ.
ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಶ್ರೀಧರ ಪೂಜಾರಿ ಹಾಗೂ ರಜನಿ ದಂಪತಿಯ ಪುತ್ರಿ ಯರಾದ ಶ್ರೀಜಾ, ತುಳಸಿ ಮತ್ತು ಜ್ಯೋತಿಯವರೇ ಸ್ಯಾಕ್ಸೋಫೋನ್ ಪ್ರವೀಣೆಯರು. ಸ್ಯಾಕ್ಸೋಫೋನ್ ವಾದನದಲ್ಲಿ ಪ್ರಾವೀಣ್ಯವನ್ನು ಗಳಿಸುತ್ತಿರುವ ಈ ಹೆಣ್ಣು ಮಕ್ಕಳ ವಾದನಕ್ಕೆ ಬೇಡಿಕೆಗಳ ಮಹಾಪೂರವೇ ಹರಿದು ಬರುತ್ತಿದೆ. ಐದಾರು ತಿಂಗಳಿಗೆ ಮುಂಚಿತ ವಾಗಿಯೇ ಈ ಹೆಣ್ಣು ಮಕ್ಕಳಿಂದಲೇ ಕಾರ್ಯಕ್ರಮ ಕೊಡಿಸಲು ಬುಕ್ಕಿಂಗ್ ಮಾಡುವವಷ್ಟರ ಮಟ್ಟಿಗೆ ಈ ತರುಣಿಯರು ಸ್ಯಾಕ್ಸೋಫೋನ್ ಮೂಲಕ ಸಂಗೀತ ಪ್ರಿಯರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಪ್ರಾವೀಣ್ಯ ಗಳಿಸುವಲ್ಲಿ ಈ ಸಹೋದರಿಯರಿಗೆ ಅವರ ತಂದೆಯೇ ಗುರು. ಶ್ರೀಧರ್ ಪೂಜಾರಿಯವರ ತಂದೆ ಸ್ಯಾಕ್ಸೋಫೋನ್ ನುಡಿಸುತ್ತಿದ್ದವರು. ಬಾಲ್ಯದಲ್ಲಿ ತಂದೆಯೊಂದಿಗೆ ಶ್ರೀಧರ ಪೂಜಾರಿಯವರೂ ಅಲ್ಪ ಸ್ವಲ್ಪ ನುಡಿಸಲು ಕಲಿತುಕೊಂಡಿದ್ದರು. ಆದರೆ ಶಾಸ್ತ್ರೀಯ ವಾಗಿ ಸ್ಯಾಕ್ಸೋಫೋನ್ ನುಡಿಸಲು ಶ್ರೀಧರ ಪೂಜಾರಿ ಆರಂಭಿಸಿದ್ದು 24ರ ಹರೆಯದಲ್ಲಿ. ತಮ್ಮ ವಿವಾಹದ ಬಳಿಕ. ಅಷ್ಟವರೆಗೆ ಬ್ಯಾಂಡ್‌ಸೆಟ್‌ಗಳಲ್ಲಿ ಇತರ ವಾದ್ಯ ಪರಿಕರಗಳನ್ನು ನುಡಿಸುತ್ತಿದ್ದ ಶ್ರೀಧರ ಪೂಜಾರಿಗೆ ತಮ್ಮ ತಂದೆಯ ಕುಲಕಸುಬನ್ನು ಬೆಳೆಸುವ ಮನಸ್ಸಾಗಿ, ವೃತ್ತಿಯಾಗಿ ಇದನ್ನು ಸ್ವೀಕರಿಸಲು ನಿರ್ಧರಿಸಿದರು. ಅದಕ್ಕಾಗಿ ಹರಿದಾಸ್ ದೋಗ್ರರಿಂದ ಶಾಸ್ತ್ರೀಯವಾಗಿ ಸ್ಯಾಕ್ಸೋಫೋನ್ ನುಡಿಸಲು ಕಲಿತರು. ಬಳಿಕ ಈ ವಾದ್ಯದಲ್ಲಿ ಪ್ರಾವೀಣ್ಯತೆ ಪಡೆದ ಶ್ರೀಧರ್, ಸಭೆ ಸಮಾರಂಭಗಳಲ್ಲಿ ಇತರ ವಾದ್ಯ ಪರಿಕರಗಳಿಗೆ ಸ್ಯಾಕ್ಸೋಫೋನ್ ಸಾಥ್ ನೀಡಲಾರಂಭಿಸಿದರು. ಶ್ರೀಧರ್ ಅವರ ಪಾಲಿಗೆ ತಮ್ಮದೇ ಸಣ್ಣ ಪುಟ್ಟ ಕೃಷಿ ಕಾಯಕದ ಜತೆ ಸ್ಯಾಕ್ಸೋಫೋನ್ ಜೀವನೋಪಾಯ ಕ್ಕೊಂದು ದಾರಿಯಾಯಿತು. ಈ ನಡುವೆ, ತಮ್ಮ ಮೂವರು ಹೆಣ್ಣು ಮಕ್ಕಳು ಕೂಡಾ ಸ್ಯಾಕ್ಸೋಫೋನ್ ಬಗ್ಗೆ ಆಸಕ್ತಿ ಹೊಂದಿರು ವುದನ್ನು ಗಮನಿಸಿದ ಶ್ರೀಧರ್, ಮಕ್ಕಳಿಗೂ ಇದನ್ನು ಕಲಿಸಲು ಮುಂದಾದರು. ಕಿರಿಯವಳಾದ ಜ್ಯೋತಿ 5ನೆ ತರಗತಿಯಲ್ಲಿರುವಾಗ ಮೂವರಿಗೂ ಸ್ಯಾಕ್ಸೋಫೋನ್ ನುಡಿಸಲು ಕಲಿಸುವುದನ್ನು ಆರಂಭಿಸಿದರು. ವಿದ್ಯೆಯಲ್ಲೂ ಮುಂದಿರುವ ಶ್ರೀಜಾ, ತುಳಸಿ ಹಾಗೂ ಜ್ಯೋತಿ ಪ್ರತಿನಿತ್ಯದ ಅಭ್ಯಾಸದೊಂದಿಗೆ, ಪಠ್ಯದ ಜೊತೆ ಕನಿಷ್ಠ ಒಂದು ಗಂಟೆ ಸ್ಯಾಕ್ಸೋಫೋನ್ ಅಭ್ಯಾಸಕ್ಕಾಗಿ ಮೀಸಲಿಡುತ್ತಾರೆ. ಪ್ರಸ್ತುತ ಬಿಕಾಂ ಮುಗಿಸಿ ವಿವಾಹವಾಗಿರುವ ಶ್ರೀಜಾ, ಅಂತಿಮ ವರ್ಷ ಬಿಕಾಂ ಓದುತ್ತಿರುವ ತುಳಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿರುವ ಜ್ಯೋತಿ ರವಿವಾರ ಹಾಗೂ ರಜಾ ದಿನಗಳಲ್ಲಿ ಕಾರ್ಯಕ್ರಮಗಳಲ್ಲಿ ಸ್ಯಾಕ್ಸೋಫೋನ್ ನುಡಿಸುತ್ತಾರೆ. ಮನೆಯಿಂದ ಸುಮಾರು 2 ಕಿ.ಮೀ. ದೂರ ನಡೆದುಕೊಂಡು ಕಾಲೇಜು ಶಿಕ್ಷಣ (ಜ್ಯೋತಿ ಉಜಿರೆ ಎಸ್‌ಡಿಎಂ ಕಾಲೇಜು ಹಾಗೂ ತುಳಸಿ ಬೆಳ್ತಂಗಡಿ ಗುರುದೇವ ಪದವಿಪೂರ್ವ ಕಾಲೇಜಿನಲ್ಲಿ) ಪಡೆಯುತ್ತಿದ್ದಾರೆ. ‘‘ಬಿಕಾಂ ಪದವಿ ಮುಗಿಸಿರುವ ಶ್ರೀಜಾಳಿಗೆ ವಿವಾಹ ವಾಗಿದೆ. ಇನ್ನಿಬ್ಬರು ಕಾಲೇಜಿಗೆ ಹೋಗುತ್ತಿದ್ದಾರೆ. ಅದರ ಜತೆಯಲ್ಲೇ ಮೂವರೂ ಸೇರಿ ಅಲ್ಲಲ್ಲಿ ಕಾರ್ಯಕ್ರಮ ನೀಡುತ್ತಾರೆ. ವಿವಾಹದ ಬಳಿಕವೂ ಶ್ರೀಜಾಳಿಗೆ ಅವಳ ಪತಿ ಹಾಗೂ ಮನೆಯವರು ಸ್ಯಾಕ್ಸೋಫೋನ್ ನುಡಿಸಲು ಪ್ರೋತ್ಸಾಹ ನೀಡುತ್ತಿದ್ದಾರೆ. ಹಾಗಾಗಿ ಜತೆಯಾಗಿ ಅಥವಾ ಪ್ರತ್ಯೇಕವಾಗಿಯೂ ಮೂವರೂ ಸ್ಯಾಕ್ಸೋಫೋನ್ ನುಡಿಸುತ್ತಾರೆ. ಇವರ ಪ್ರತಿಭೆಯನ್ನು ಗುರುತಿಸಿ ಅವರೇ ನುಡಿಸಬೇಕೆಂಬ ಬೇಡಿಕೆಯೂ ಹೆಚ್ಚುತ್ತಿದೆ. ಮಕ್ಕಳ ಈ ಸಾಧನೆಯ ಬಗ್ಗೆ ನನಗೂ ಹೆಮ್ಮೆಯಿದೆ’’ ಎಂದು ಶ್ರೀಧರ ಪೂಜಾರಿ ‘ವಾರ್ತಾಭಾರತಿ’ಗೆ ಪ್ರತಿಕ್ರಿಯಿಸಿದ್ದಾರೆ. ‘‘ವರ್ಷದಲ್ಲಿ ನೂರಾರು ಕಾರ್ಯಕ್ರಮಗಳಿಗೆ ಬೇಡಿಕೆ ಬರುತ್ತದೆ. ಮದುವೆ, ವಿಶೇಷ ಸಾಂಸ್ಕೃತಿಕ, ಧಾರ್ಮಿಕ ಸಮಾರಂಭಗಳಲ್ಲಿ ಕಾರ್ಯಕ್ರಮ ನೀಡುತ್ತೇವೆ. ಉಸಿರು ಮತ್ತು ಕೈಬೆರಳುಗಳ ಚಾಕಚಕ್ಯತೆಯಿಂದ ನುಡಿಸುವ ವಾ್ಯ ಸಂಗೀತವಿದು. ನುಡಿಸುವುದನ್ನು ಅಭ್ಯಾಸ ಮಾಡಿಕೊಂಡಂತೆ ಇದು ಕರಗತವಾಗಿಬಿಡುತ್ತದೆ. ಹೆಣ್ಣು ಮಕ್ಕಳಾದರೇನಂತೆ. ಆಸಕ್ತಿ, ಕಲಿಯುವ ಮನಸ್ಸಿದ್ದರೆ ಯಾವುದೂ ಅಸಾಧ್ಯವಲ್ಲ. ಅದರಲ್ಲೂ ಸ್ಯಾಕ್ಸೋಫೋನ್ ವಾದನದಲ್ಲಿ ಈಗಾಗಲೇ ಹಲವಾರು ಮಹಿಳೆಯರು ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಇದೊಂದು ಅದ್ಭುತ ಸಂಗೀತ ಕಲೆ. ಮಕ್ಕಳದನ್ನು ತಮ್ಮದಾಗಿಸಿಕೊಂಡಿದ್ದಾರೆ’’ ಎಂದು ಶ್ರೀಧರ ಪೂಜಾರಿ ತಮ್ಮ ಮಕ್ಕಳ ಸಾಧನೆಯ ಬಗ್ಗೆ ಅಭಿಮಾನದಿಂದ ಹೇಳಿಕೊಳ್ಳುತ್ತಾರೆ.
ನಾವು ಹೆಚ್ಚಾಗಿ ಕಾರ್ಯಕ್ರಮಗಳಲ್ಲಿ ಶಾಸ್ತ್ರೀಯ ಸಂಗೀತಕ್ಕೆ ಈ ವಾದ್ಯದ ಮೂಲಕ ಹೆಚ್ಚಿನ ಒತ್ತು ನೀಡುತ್ತೇವೆ. ಅದರ ಜೊತೆಗೆ ಕಾರ್ಯಕ್ರಮ ನೀಡುವವರ ಬೇಡಿಕೆಯ ಮೇರೆಗೆ ಜನಪದ, ಸುಗಮ ಸಂಗೀತ, ಭಾವಗೀತೆ, ದೇಶಭಕ್ತಿಗೀತೆ, ಹಳೆಯ ಕನ್ನಡ ಚಲನಚಿತ್ರಗೀತೆಗಳನ್ನು ನುಡಿಸುತ್ತೇವೆ. ತಂದೆಯ ಕಲಾಪ್ರೀತಿಯನ್ನು ನಾವೂ ಮುಂದು ವರಿಸಬೇಕೆಂಬ ನೆಲೆಯಲ್ಲಿ ಸ್ಯಾಕ್ಸೋಫೋನ್ ನುಡಿಸುವುದನ್ನು ಆಸಕ್ತಿಯಿಂದಲೇ ಕಲಿತೆವು. ಅದು ನಮಗೆ ತುಂಬಾ ಖುಷಿ ನೀಡಿದೆ
-ಜ್ಯೋತಿ.