ಶೀಘ್ರವೇ ಕರಾವಳಿಗೆ ಪ್ರತ್ಯೇಕ ಮರಳು ನೀತಿ: ಪ್ರಮೋದ್

Update: 2016-09-02 17:59 GMT

ಕಂಡ್ಲೂರು, ಸೆ.2: ಉಡುಪಿ ಜಿಲ್ಲೆಯಲ್ಲಿ ಮರಳುಗಾರಿಕೆಗೆ ಚೆನ್ನೈನ ಹಸಿರು ಪೀಠದಿಂದ ಇರುವ ತಡೆಯಾಜ್ಞೆಯನ್ನು ತೆರವುಗೊಳಿಸಲು ಸರಕಾರದ ವತಿಯಿಂದ ಮೇಲ್ಮನವಿ ಸಲ್ಲಿಸಿ, ಸರಕಾರ ಪರ ವಾದಕ್ಕೆ ಅಭಿಯೋಜಕರನ್ನು ನೇಮಿಸಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಕಂಡ್ಲೂರಿನಲ್ಲಿ ಇಂದು ಸಂಜೆ ನಡೆದ ಅಂಪಾರು-ಕ್ರಾಡಿ ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳ ಸವಲತ್ತು ವಿತರಣೆ, ಬಾಪೂಜಿ ಸೇವಾ ಕೇಂದ್ರಗಳ ಲೋಕಾರ್ಪಣೆ ಹಾಗೂ ಪಶು ಚಿಕಿತ್ಸಾಲಯ ಕಟ್ಟಡದ ಹಸ್ತಾಂತರ ಕಾರ್ಯಕ್ರಮ ವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡುತಿದ್ದರು.

ಕರಾವಳಿಗೆ ಅನುಕೂಲಕರವಾದ ಪ್ರತ್ಯೇಕ ಮರಳು ನೀತಿಯನ್ನು ಅತೀ ಶೀಘ್ರದಲ್ಲೇ ಜಾರಿಗೊಳಿಸಲಾಗುವುದು. ಈ ಬಗ್ಗೆ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್, ವಿಧಾನಪರಿಷತ್ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ ಹಾಗೂ ಕರಾವಳಿ ಶಾಸಕರ ನಿಯೋಗಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಆಶ್ವಾಸನೆ ನೀಡಿದ್ದಾರೆ ಎಂದರು.

94ಸಿ, ಗೋಮಾಳ ಜಮೀನು, ಕುಮ್ಕಿ ಕುರಿತ ಸಮಸ್ಯೆಯನ್ನು ಬಗೆಹರಿಸಿ ಜನರಿಗೆ ಹಕ್ಕುಪತ್ರ ವಿತರಿಸಲು ಸರಕಾರ ಬದ್ಧವಾಗಿದೆ. ದೀನದಯಾಳ್ ವಿದ್ಯುದ್ದೀಕರಣ ಯೋಜನೆಯಲ್ಲಿ ಬಿಪಿಎಲ್ ಕುಟುಂಬದ ಮನೆಗಳಿಗೆ ವಿದ್ಯುತ್ ಸಂಪರ್ಕ ಕೊಡಲು ನಿರಾಕರಿಸುವ, ತಕರಾರು ತೆಗೆಯುವ ಪಿಡಿಓ ಕುರಿತು ತನಗೆ ಮಾಹಿತಿ ನೀಡಿ ತಾನು ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇನೆ. ಜಿಲ್ಲೆಯಲ್ಲಿ ವಿದ್ಯುತ್ ಸಂಪರ್ಕ ಇಲ್ಲದ ಮನೆ ಇರಬಾರದು ಎಂದು ಸರಕಾರದ ಗುರಿಯಾಗಿದೆ ಎಂದವರು ಹೇಳಿದರು.

ಸಮಾರಂಭದಲ್ಲಿ ಎರಡು ಗ್ರಾಪಂಗಳ ವ್ಯಾಪ್ತಿಯ 500ಕ್ಕೂ ಅಧಿಕ ಮಂದಿಗೆ ವಿವಿಧ ಇಲಾಖೆಗಳ ಸವಲತ್ತುಗಳನ್ನು ವಿತರಿಸಲಾಯಿತು. ಇವರಲ್ಲಿ 160 ಮಂದಿಗೆ ನಿವೇಶನಗಳ ಹಕ್ಕುಪತ್ರಗಳನ್ನು ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News