9/11 ಗೊಂದಲ ಬಗೆಹರಿಸಲು ಆಗ್ರಹ: ಬಿಜೆಪಿಯಿಂದ ಉಪವಾಸ ಧರಣಿ

Update: 2016-09-03 08:13 GMT


ಬಂಟ್ವಾಳ, ಸೆ.3: ರಾಜ್ಯದ 6 ಜಿಲ್ಲೆಗಳಲ್ಲಿ 9/11ಗೆ ಸಂಬಂಧಿಸಿ ಸರಕಾರದ ಬೇಜವಾಬ್ದಾರಿಯಿಂದ ಲಕ್ಷಾಂತರ ಮಂದಿ ತೊಂದರೆ ಅನುವಿಸುವಂತಾಗಿದೆ. ಈ ಗೊಂದಲವನ್ನು ತಕ್ಷಣ ಪರಿಹರಿಸಬೇಕೆಂದು ಒತ್ತಾಯಿಸಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಬಿಜೆಪಿ ವತಿಯಿಂದ ಶನಿವಾರ ಬಿ.ಸಿ.ರೋಡು ಮೇಲ್ಸೇತುವೆಯ ಕೆಳಗೆ ಒಂದು ದಿನದ ಉಪವಾಸ ಧರಣಿ ನಡೆಯಿತು. 9/11ಗೆ ಸಂಬಂಧಿಸಿ ಸರಕಾರದ ಬೇಜವಾಬ್ದಾರಿಯಿಂದ ಉಂಟಾಗಿರುವ ಗೊಂದಲವನ್ನು ಸರಿಪಡಿಸಲು ರಾಜ್ಯ ಸರಕಾರದ ವಿಪಲವಾಗಿದೆ ಎಂದು ಆರೋಪಿಸಿದ ಧರಣಿನಿರತರು ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಿ.ಆನಂದ, ಗ್ರಾಮೀಣ ಪ್ರದೇಶಗಳಲ್ಲಿ ಪರಿವರ್ತಿತ ಜಮೀನು ನೋಂದಣಾಧಿಕಾರಿಯವರ ಕಚೇರಿಯಲ್ಲಿ ನೋಂದಾಯಿಸಿ ಇ-ಸ್ವತ್ತು ತಂತ್ರಂಶಾದಲ್ಲಿ ದಾಖಲಿಸಿ ಜಾರಿಯಲ್ಲಿತ್ತು. ಕಳೆದ ಮಾರ್ಚ್‌ನಲ್ಲಿ ನಡೆದ ಜಿಪಂ, ತಾಪಂ ಚುನಾವಣೆಯ ಸಂದರ್ದಲ್ಲಿ ರಾಜ್ಯ ಸರಕಾರವು ದ.ಕ., ಉ.ಕ., ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಿಗೆ 9/11ನನ್ನು ಇ-ಸ್ವತ್ತಿನಿಂದ ವಿಮುಕ್ತಗೊಳಿಸಿ ಪಿಡಿಒ ಅವರ ಕೈಬರಹದಿಂದಲೇ ಬರೆದುಕೊಟ್ಟರೂ ಅದನ್ನು ಮಾನ್ಯ ಮಾಡಬೇಕೆಂದು ಆದೇಶಿಸಿತು. ನಂತರ ಈ ಆದೇಶಕ್ಕೆ ಸ್ಪಷ್ಟನೆ ನೀಡಿದ ಆರ್.ಡಿ.ಪಿ.ಆರ್. ಸಚಿವಾಲಯ ಇ-ಸ್ವತ್ತಿನ ಮೂಲಕವೇ 9/11ನ್ನು ಕೊಡಬೇಕೆಂದು ತಿಳಿಸಿತ್ತು. ಮಾರ್ಚ್‌ನಲ್ಲಿ ಮಾಡಿರುವ ಈ ತಾತ್ಕಾಲಿಕ ವಿನಾಯಿತಿಯ ಸಂದರ್ಭದಲ್ಲಿ ಉಪ ನೋಂದಣಿ ಕಚೇರಿಯಲ್ಲಿ ಕಾವೇರಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಇ-ಸ್ವತ್ತಿನ ನಡುವೆ ಇದ್ದ ಸಂಪರ್ಕವನ್ನು ಬೆಂಗಳೂರಿನಲ್ಲೇ ತಾಂತ್ರಿಕ ವಿಭಾಗದಲ್ಲಿ ತೆಗೆದು ಹಾಕಲಾಗಿದ್ದು. ಈವರೆಗೂ ಸಂಪರ್ಕ ನೀಡಿರುವುದಿಲ್ಲ. ಇದರಿಂದಾಗಿ ಗ್ರಾಮೀಣ ಮಟ್ಟದಲ್ಲಿ ಭೂಮಿ ವಿಕ್ರಯಿಸಿದರೆ ನೋಂದಣಿ ಕಚೇರಿಯಲ್ಲಿ ನೋಂದಣಿಯಾದರೂ ಇ-ಸ್ವತ್ತಿಗೆ ಸಂಪರ್ಕವಿಲ್ಲದ ಕಾರಣ ಪಂಚಾಯತ್ ಮಟ್ಟದಲ್ಲಿ ಖಾತೆ ಬದಲಾವಣೆ ಯಾಗದಿರುವುದುರಿಂದ ಜನ ಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ ಎಂದು ಅವರು ಆರೋಪಿಸಿದರು. ಬಂಟ್ವಾಳ ತಾಲೂಕು ಒಂದರಲ್ಲೇ ಸುಮಾರು 3 ಸಾವಿರಕ್ಕೂ ಹೆಚ್ಚು ಖಾತೆ ಬದಲಾವಣೆಯಾಗದ ಕಡತಗಳು ಗ್ರಾಮ ಪಂಚಾಯತ್ ಮಟ್ಟದಲ್ಲಿವೆ. ಹಾಗೆಯೇ ಜಿಲ್ಲೆಯಲ್ಲಿ 50,000ಕ್ಕೂ ಮಿಕ್ಕಿ ಕಡತಗಳು ಖಾತೆ ಬದಲಾವಣೆಯಾಗದೆ ಉಳಿದಿವೆ. ಸರಕಾರದ ನಿರ್ಲಕ್ಷದಿಂದಾಗಿ ಗ್ರಾಮೀಣ ಪ್ರದೇಶದ ಜನರು ಸಂಕಷ್ಟಕ್ಕೊಳಗಾಗಿದ್ದು ಸರಕಾರದ ಈ ಧೋರಣೆಯನ್ನು ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಒಂದು ವಾರದೊಳಗೆ ಗೊಂದಲವನ್ನು ಬಗೆಹರಿಸಿ ಸಮಸ್ಯೆ ಪರಿಹರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು. ಉಪವಾಸ ಸತ್ಯಾಗ್ರಹದಲ್ಲಿ ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ, ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ, ಮುಂಖಡ ರಾಜೇಶ್ ನಾಯಕ್ ಉಳಿಪಾಡಿಗುತ್ತು, ಮಾಜಿ ಶಾಸಕ ರುಕ್ಮಯ ಪೂಜಾರಿ, ಪಕ್ಷದ ಪ್ರಮುಖರಾದ ರಾಮದಾಸ್ ಬಂಟ್ವಾಳ್, ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ದಿನೇಶ್ ಭಂಡಾರಿ, ವಜ್ರನಾಥ ಕಲ್ಲಡ್ಕ, ರಮಾನಾಥ ರಾಯಿ, ಸೀತಾರಾಮ ಶೆಟ್ಟಿ, ಸದಾನಂದ ಮಲ್ಲಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News