ಮೂಡುಬಿದಿರೆಯಲ್ಲಿ ಎಬಿವಿಪಿ ನಗರ ಅಭ್ಯಾಸವರ್ಗಕ್ಕೆ ಚಾಲನೆ

Update: 2016-09-03 11:56 GMT

ಮೂಡುಬಿದಿರೆ,ಸೆ.3: ಯುವಜನತೆಯಲ್ಲಿ ರಾಷ್ಟ್ರೀಯತೆಯ ಜಾಗೃತಿ ಮೂಡಿಸುವ ಕೆಲಸ ಎಬಿವಿಪಿಯಿಂದ ಆಗುತ್ತಿದೆ. ಹಿಂದುತ್ವದ ಮೌಲ್ಯಗಳೊಂದಿಗೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾಣ ತ್ಯಾಗ ಮಾಡಿದ ಹಲವಾರು ಜನರಿದ್ದಾರೆ. ಆದರೆ ಅವರ ಕುರಿತು ಯಾವುದೇ ಪಠ್ಯ ಪುಸ್ತಕಗಳಲ್ಲಿ, ಇತಿಹಾಸದಲ್ಲಿ ಉಲ್ಲೇಖವಿಲ್ಲ. ಯುವಕರು ರಾಜಕೀಯ ಪ್ರಜ್ಞೆ ಬೆಳೆಸಿ, ಸಮಾಜವನ್ನು ಸುಶಿಕ್ಷಿತಗೊಳಿಸುವ ಕೆಲಸ ಮಾಡಬೇಕು ಎಂದು ಮೂಡುವೇಣುಪುರ ಶ್ರೀ ವೆಂಕಟರಮಣ ದೇವಸ್ಥಾನದ ಕೋಶಾಧಿಕಾರಿ ಶಿವಾನಂದ ಪ್ರಭು ಹೇಳಿದರು.

  ಅವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸದಸ್ಯತ್ವ ಅಭಿಯಾನಕ್ಕೆ ಪೂರಕವಾಗಿ ನಗರ ಅಭ್ಯಾಸವರ್ಗ ಕಾರ್ಯಕ್ರಮವನ್ನು ಮೂಡುಬಿದಿರೆ ಶ್ರೀ ವೆಂಕಟರಮಣ ದೇವಸ್ಥಾನದ ಸಭಾಂಗಣದಲ್ಲಿ ಶನಿವಾರ ಉದ್ಘಾಟಿಸಿ ಮಾತನಾಡಿದರು.

ಬಜರಂಗದಳ ತಾಲೂಕು ಸಹಸಂಚಾಲಕರಾದ ಸಂತೋಷ್, ಭರತ್ ಇರುವೈಲು, ತಾಲೂಕು ಪ್ರಮುಖ್ ಸಮಿತ್ ರಾಜ್ ಧರೆಗುಡ್ಡೆ ವೇದಿಕೆಯಲ್ಲಿದ್ದರು. ಎಬಿವಿಪಿ ನಗರ ಕಾರ್ಯದರ್ಶಿ ಮಿಥನ್ ಕುಮಾರ್, ಸಹ ಕಾರ್ಯದರ್ಶಿ ಪ್ರಜ್ಞಾ ಶೆಟ್ಟಿ, ಸಹ ಕಾರ್ಯದರ್ಶಿಗಳಾದ ಗ್ಲೇಡ್ಸನ್ ಪಿಂಟೋ, ಅಭಿಷೇಕ್ ದೇವಾಡಿಗ, ವಿದ್ಯಾರ್ಥಿನಿ ಪ್ರಮುಖ್ ರಕ್ಷಿತಾ ಶೆಟ್ಟಿ, ವ್ಯವಸ್ಥಾ ಪ್ರಮುಖ ನಾಗೇಶ್ ಪ್ರಭು ಸಹಿತ ಪದಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News