ಬಡವರ ಪಾಲಿನ ‘ಸಂಜೀವಿನಿ’ಗೆ ಬಂತೇ ಕುತ್ತು?
ಉಡುಪಿ, ಸೆ.9: ಕಳೆದ ಸುಮಾರು ಎಂಟು ದಶಕಗಳಿಗೂ ಅಧಿಕ ಸಮಯ ದಿಂದ ಉಡುಪಿ ಜಿಲ್ಲೆ ಮಾತ್ರವಲ್ಲ ಆಸುಪಾಸಿನ ಜಿಲ್ಲೆಗಳ ಬಡವರ ಪಾಲಿಗೆ ‘ಸಂಜೀವಿನಿ’ಯಂತಿದ್ದ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಎಂದೇ ಕರೆಯಲಾಗುವ ‘ಹಾಜಿ ಅಬ್ದುಲ್ಲಾ ಶುಶ್ರೂಷಾಲಯ’ ಇದೀಗ ಖಾಸಗೀಕರಣದ ಕಬಂಧ ಬಾಹುವಿಗೆ ಸಿಲುಕಿಕೊಂಡಿದೆ.
ಮೂಲತ: ಉಡುಪಿಯವರೇ ಆದ ಈಗ ಎನ್‌ಆರ್‌ಐ ಉದ್ಯಮಿಯಾಗಿ ರುವ ಉಡುಪಿ ನಗರಸಭೆಯ ಮಾಜಿ ಉಪಾಧ್ಯಕ್ಷ ಬಿ.ಆರ್.ಶೆಟ್ಟಿ ಅವರ ಬಿ.ಆರ್.ಎಸ್.ವೆಂಚರ್ಸ್‌ಗೆ ಜಿಲ್ಲೆಯ ಮೂಡನಿಡಂಬೂರು ಗ್ರಾಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸೇರಿದ ಮೂರು ನಿವೇಶನ ಗಳನ್ನು (ಎಷ್ಟು ಜಾಗ ಎಂಬುದನ್ನು ನಮೂದಿಸಿಲ್ಲ) 30 ವರ್ಷ ಗುತ್ತಿಗೆ ಆಧಾರದ ಮೇಲೆ ನೀಡಲು ಕಳೆದ ಆ.24ರಂದು ನಡೆದ ಸಚಿವ ಸಂಪುಟದ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿತ್ತು.
ಇದೇ ಮಾಹಿತಿಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅಂದೇ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲೂ ಹಂಚಿಕೊಂಡಿದ್ದರು. ‘ಉಡುಪಿಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿ ಸುವ ಉದ್ದೇಶದಿಂದ ಅಬುದಾಬಿಯ ಉದ್ಯಮಿ ಬಿ.ಆರ್.ಶೆಟ್ಟಿ ಅವರಿಗೆ ಹಸ್ತಾಂತರಿಸಲು ಸರಕಾರ ತೀರ್ಮಾನಿಸಿದೆ’ ಎಂದು ಅವರ ಟ್ವಿಟ್ ಹೇಳಿತ್ತು.
ಈ ಮೂಲಕ ಸ್ವಾತಂತ್ರಪೂರ್ವದಿಂದಲೂ ಜಿಲ್ಲೆಯ ಬಡ ಮಹಿಳೆಯರ ಹಾಗೂ ಮಕ್ಕಳ ಉಚಿತ ಆರೋಗ್ಯ ಸೇವೆಯಲ್ಲಿ ನಿರತವಾಗಿದ್ದ ಆಸ್ಪತ್ರೆಯೊಂದು ತಾನಿರುವ ಬಹುಮೂಲ್ಯ (ಆ ಜಾಗದ ಇಂದಿನ ವೌಲ್ಯ ಹಲವು ನೂರು ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ) ಜಾಗದೊಂದಿಗೆ ಸದ್ದಿಲ್ಲದೇ ಶ್ರೀಮಂತ ಉದ್ಯಮಿಯೊಬ್ಬರ ಕೈವಶವಾಗಲು ಹಾದಿ ಸುಗಮಗೊಂಡಿತ್ತು. ಮುಖ್ಯಮಂತ್ರಿಗಳ ಟ್ವೀಟ್‌ಗೆ ಸಾಕಷ್ಟು ವಿರೋಧಗಳು ವ್ಯಕ್ತವಾದರೂ ಅದು ಸರಕಾರದ ನಿಲುವಿನಲ್ಲಿ ಯಾವುದೇ ಪರಿಣಾಮ ಬೀರುವಂತೆ ಕಂಡುಬಂದಿಲ್ಲ.
ಆದರೆ ಆರೋಗ್ಯ ಇಲಾಖೆಯ ಮುಖ್ಯ ಕಾರ್ಯದರ್ಶಿಗಳು ಸಚಿವ ಸಂಪುಟ ಸಭೆ ಮುಂದೆ ಮಂಡಿಸಿದ ಟಿಪ್ಪಣಿಯಲ್ಲಿರುವ ಮಾಹಿತಿಯಂತೆ ಬಿ.ಆರ್.ಶೆಟ್ಟಿ ಅವರು ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ, 400 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಸೌಲಭ್ಯಗಳನ್ನು ನೀಡುವ ಸಂಕೀರ್ಣವೊಂದನ್ನು ನಿರ್ಮಿಸಲಿದ್ದಾರೆ. ಇದು ಬಡವರಿಗೆ ಈಗ ಉಚಿತವಾಗಿ ದೊರೆಯುತ್ತಿರುವ ಆರೋಗ್ಯ ಸೇವೆಯನ್ನು ಖಾಸಗಿಯವರಿಗೆ ಒಪ್ಪಿಸುವ ಹುನ್ನಾರವಾಗಿ ಹಲವರಿಗೆ ಕಂಡುಬಂದಿದೆ.
ಸರಕಾರದ ಇಂಥ ನಡೆಯ ಬಗ್ಗೆ ಈ ಆಸ್ಪತ್ರೆಯ ಸೇವೆ ಪಡೆಯುವ ಮಂದಿಗೆ ಯಾವುದೇ ಮಾಹಿತಿ ಇಲ್ಲವಾದರೂ, ಚಿಂತಕ ಕೆ.ಫಣಿರಾಜ್ ಹಾಗೂ ಮನೋವೈದ್ಯ ಡಾ.ಪಿ.ವಿ.ಭಂಡಾರಿ ನೇತೃತ್ವದ ಉಡುಪಿಯ ಜಾಗೃತ ಗುಂಪೊಂದು ಇದರ ವಿರುದ್ಧ ಧ್ವನಿ ಎತ್ತಿ ಸರಕಾರದ ಇಡೀ ನಡೆಯನ್ನು ಪ್ರಶ್ನಿಸಲು ಮುಂದಾಗಿದೆ. ಉಡುಪಿ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಪ್ರಮೋದ್ ಮಧ್ವರಾಜ್ ಅವರು ಈ ಬಗ್ಗೆ ಜವಾಬ್ದಾರಿಯುತವಾದ ಹೇಳಿಕೆಯನ್ನು ಇದುವರೆಗೆ ನೀಡಿಲ್ಲ ಎಂಬ ಅಸಮಧಾನ ಈ ಗುಂಪಿಗಿದೆ.
ಉಡುಪಿಯ ಕೊಡುಗೈ ದಾನಿ ಹಾಗೂ ಸಮಾಜ ಸುಧಾರಕರೆಂದೇ ಖ್ಯಾತರಾಗಿದ್ದ ಅಗರ್ಭ ಶ್ರೀಮಂತ ಹಾಜಿ ಅಬ್ದುಲ್ಲಾ ಸಾಹೇಬರು ದಾನವಾಗಿತ್ತ ಜಮೀನಿನಲ್ಲಿ ಈ ಆಸ್ಪತ್ರೆಯನ್ನು ನಿರ್ಮಿಸಲಾಗಿತ್ತು. ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾಗಿದ್ದ ಪ್ರೊ.ಕು.ಶಿ.ಹರಿದಾಸ್ ಭಟ್ ತಮ್ಮ ಲೇಖನವೊಂದರಲ್ಲಿ ಬರೆದಂತೆ ಈಗಿನ ಕೆಎಸ್ಸಾರ್ಟಿಸಿ ಬಸ್‌ನಿಲ್ದಾಣದಿಂದ ಡಯಾನ ಸರ್ಕಲ್ ಪಕ್ಕದ ಖಬರ್‌ಸ್ತಾನದವರೆಗಿನ ದಾರಿಯ ಇಕ್ಕೆಲಗಳ ಹೆಚ್ಚಿನ ಜಾಗ ಹಾಜಿ ಅಬ್ದುಲ್ಲಾ ರಿಗೆ ಸೇರಿದ್ದು, ಅದರೊಳಗಿನ ಉತ್ತಮ ಸ್ಥಳವನ್ನು ಅವರು ಆಸ್ಪತ್ರೆಗಾಗಿ (ಎಷ್ಟು ಎಂಬ ಬಗ್ಗೆ ಇನ್ನೂ ಸ್ಪಷ್ಟವಾದ ಮಾಹಿತಿ ಸಿಕ್ಕಿಲ್ಲ) ದಾನವಾಗಿ ಕೊಟ್ಟಿದ್ದರು. ಅಲ್ಲದೇ, ಅವರು ತನ್ನ ತಂದೆ ಹಾಜಿ ಖಾಸಿಂ ಬುಡಾನ್ ಸಾಹೇಬ್‌ರ ಹೆಸರಿನಲ್ಲಿ -ಹಾಜಿ ಬುಡಾನ್ ಶುಶ್ರೂಷಾಲಯ- ಉತ್ತಮ ಕಟ್ಟಡವೊಂದನ್ನು 1930ರಲ್ಲಿ ನಿರ್ಮಿಸಿಕೊಟ್ಟಿದ್ದರು (ಹಾಜಿ ಅಬ್ದುಲ್ಲಾ 1935ರ ಆ.12ರಂದು ತೀರಿಕೊಂಡಿದ್ದಾರೆ.) ಎಂದು ಪ್ರೊ.ಭಟ್ ಲೇಖನದಲ್ಲಿ ವಿವರಿಸಿದ್ದರು.
ಸದ್ಯಕ್ಕೆ ದೊರೆಯುವ ಮಾಹಿತಿಯಂತೆ ಈಗ ಮೂರು ಭಾಗವಾಗಿರುವ ಒಟ್ಟು 3.60 ಎಕರೆ ಜಾಗದಲ್ಲಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಇದೆ. ಸರಕಾರದ ನಿರ್ಧಾರದಂತೆ ಸಂಪೂರ್ಣ ಜಾಗ ಬಿ.ಆರ್.ಎಸ್. ವೆಂಚರ್ಸ್ ಕೈವಶವಾಗಲಿದೆ. ಹಾಜಿ ಅಬ್ದುಲ್ಲಾ ಅವರು ತಾನು ದಾನವಾಗಿತ್ತ ಜಾಗದಲ್ಲಿ ಕೇವಲ ಸರಕಾರಿ ಆಸ್ಪತ್ರೆ ಮಾತ್ರ ಕಾರ್ಯಾಚರಿಸಬೇಕೆಂಬ ಶರತ್ತನ್ನು ದಾನಪತ್ರದಲ್ಲಿ ಉಲ್ಲೇಖಿಸಿದ್ದರು ಎಂದು ಮಾಜಿ ಸಚಿವ ದಿ.ಡಾ.ವಿ.ಎಸ್. ಆಚಾರ್ಯರು ಹಿಂದೊಮ್ಮೆ ಮಾತನಾಡುತ್ತಾ ಹೇಳಿದ್ದರು.
ಆದರೆ ಸರಕಾರಕ್ಕೆ ನೀಡಲು ಸಾಧ್ಯವಾಗದ ಸೂಪರ್ ಸ್ಪೆಷಾಲಿಟಿ ಸೌಲಭ್ಯವನ್ನು ಜನರಿಗೆ ಒದಗಿಸುವ ಅಮಿಷದೊಂದಿಗೆ ಸರಕಾರ ಇದೀಗ ಸಂಪೂರ್ಣ ಜಾಗವನ್ನು ಹರಿವಾಣದಲ್ಲಿಟ್ಟು ಉದ್ಯಮಿಗೆ ನೀಡುತ್ತಿದೆ. ಅಲ್ಲದೇ ಅಲ್ಲಿ ನೀಡುವ ಸೇವೆಗೆ ಅವರೇ ದರ ನಿಗದಿ ಮಾಡುವ ‘ಅವಕಾಶ’ವನ್ನೂ ಒದಗಿಸುತ್ತಿದೆ. ಬಿಒಒಟಿ ಆಧಾರದಲ್ಲಿ ಈ ಒಪ್ಪಂದ ನಡೆಯುವುದರಿಂದ ಅಲ್ಲಿ ಸರಕಾರದ ಹಿಡಿತ ನಾಮಕೇವಾಸ್ತೆ ಮಾತ್ರ ಎಂದು ಕೆ.ಫಣಿರಾಜ್ ಅಭಿಪ್ರಾಯ ಪಡುತ್ತಾರೆ.
ಬಡವರ ಸಂಜೀವಿನಿ
ಉಡುಪಿ ನಗರದ ಕೇಂದ್ರ ಭಾಗದಲ್ಲಿರುವ ಈ ಆಸ್ಪತ್ರೆ ನಿಜವಾದ ಅರ್ಥದಲ್ಲಿ ಮಹಿಳೆಯರು ಮತ್ತು ಮಕ್ಕಳ ಪಾಲಿಗೆ ಸಂಜೀವಿನಿಯೇ. ಜಿಲ್ಲಾ ಸರ್ಜನ್ ಡಾ.ಮಧುಸೂಧನ್ ನಾಯಕ್ ಹೇಳುವಂತೆ ಅಲ್ಲಿ ಪ್ರತಿದಿನ ಕನಿಷ್ಠ 100ರಂತೆ ತಿಂಗಳಿಗೆ ಸರಾಸರಿ 3,000 ಮಂದಿ ಹೊರರೋಗಿಗಳು ಪರೀಕ್ಷೆಗೆ ಮತ್ತು ಚಿಕಿತ್ಸೆಗೆ ಬರುತ್ತಾರೆ. ಜಿಲ್ಲೆಯಲ್ಲಿ ಎಲ್ಲಾ ಸೌಕರ್ಯಗಳಿರುವ, ಅಗತ್ಯಕ್ಕೆ ತಕ್ಕಷ್ಟು ವೈದ್ಯರು, ತಜ್ಞರು ಇರುವ ಅಪರೂಪದ ಆಸ್ಪತ್ರೆ ಇದಾಗಿರುವುದರಿಂದ ಜಿಲ್ಲೆಯಿಂದ ಮಾತ್ರವಲ್ಲ ಭಟ್ಕಳ, ಆಗುಂಬೆ, ತೀರ್ಥಹಳ್ಳಿ, ಶೃಂಗೇರಿಯಿಂದಲೂ ಮಹಿಳೆಯರು ಮತ್ತು ಮಕ್ಕಳು ಪರೀಕ್ಷೆ ಹಾಗೂ ಚಿಕಿತ್ಸೆಗಾಗಿ ಇಲ್ಲಿಗೆ ಬರುತ್ತಾರೆ.
ಹೆರಿಗೆಯ ವಿಷಯದಲ್ಲಿ ಈ ಆಸ್ಪತ್ರೆ ಮಣಿಪಾಲದ ಕೆಎಂಸಿ ಬಳಿಕ ಸ್ಥಾನದಲ್ಲಿದೆ ಎಂದು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಯಾಗಿರುವ ಡಾ.ಕಿಶೋರಿ ಹೇಳುತ್ತಾರೆ. 2013-14ನೆ ಸಾಲಿನಲ್ಲಿ ಇಲ್ಲಿ 2,057 ಹೆರಿಗೆಗಳಾದರೆ, 14-15ರಲ್ಲಿ 2,238, 15-16ರಲ್ಲಿ 2,257 ಹೆರಿಗೆಗಳಾಗಿವೆ. ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಿಸೇರಿಯನ್ ಸಹ ಇಲ್ಲಿ ನಡೆಯುತ್ತಿದೆ. ಹೆರಿಗೆ ಕಷ್ಟವಾದ ಎಲ್ಲಾ ಕೇಸುಗಳನ್ನು ತಕ್ಷಣ ಇಲ್ಲಿಗೆ ಕಳುಹಿಸಿಕೊಡುವುದರಿಂದ ಇಲ್ಲಿ ಈ ಸಂಖ್ಯೆ ಹೆಚ್ಚಿದೆ. ಹೀಗಾಗಿ 2012-13ನೆ ಸಾಲಿನಲ್ಲಿ 703, 13-14ನೆ ಸಾಲಿನಲ್ಲಿ 739, 14-15ನೆ ಸಾಲಿನಲ್ಲಿ 945 ಹಾಗೂ 15-16ನೆ ಸಾಲಿನಲ್ಲಿ 1124 ಸಿಸೇರಿಯನ್ ಇಲ್ಲಿ ದಾಖಲಾಗಿದೆ ಎಂದು ಡಾ.ಕಿಶೋರಿ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಮಹಿಳೆಯರಿಗೆ 50 ಬೆಡ್ ಹಾಗೂ ಮಕ್ಕಳಿಗೆ 20 ಬೆಡ್ ಸೇರಿದಂತೆ 70 ಬೆಡ್‌ಗಳ ಆಸ್ಪತ್ರೆ ಇದಾಗಿದೆ. ಆದರೆ ಇಲ್ಲಿ ಎಲ್ಲಾ ಬೆಡ್‌ಗಳು ಸದಾ ತುಂಬಿರುತ್ತವೆ. ಕೆಲವೊಮ್ಮೆ ವಾರ್ಡ್ ಹೊರಗಿನ ಕಾರಿಡಾರ್‌ಗಳಲ್ಲೂ ಬೆಡ್ ಹಾಕಬೇಕಾದ ಪರಿಸ್ಥಿತಿ ಇಲ್ಲಿದೆ. ಇಲ್ಲಿಗೆ ಬರುವ ರೋಗಿಗಳ ಸಂಖ್ಯೆಯಲ್ಲಿ ಪ್ರತಿ ತಿಂಗಳು ಹೆಚ್ಚಳವಾಗುತ್ತಿದೆ. ಹೀಗಾಗಿ ಈಗ ಇರುವ ಮೂವರು ಹೆರಿಗೆ ತಜ್ಞರೊಂದಿಗೆ ಬ್ರಹ್ಮಾವರದಿಂದ ಡಾ.ದಮಯಂತಿ ಅವರೂ ವಾರದಲ್ಲಿ ಐದು ದಿನ ಬಂದು ಇಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ ಎಂದವರು ನುಡಿದರು.
ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮೂವರು ಸ್ತ್ರೀರೋಗ ತಜ್ಞರಿದ್ದಾರೆ. ಇಬ್ಬರು ಮಕ್ಕಳ ತಜ್ಞರಿದ್ದು, ಒಬ್ಬರು ಎನ್‌ಆರ್‌ಎಚ್‌ನಲ್ಲಿ ನೇಮಕ ಗೊಂಡಿದ್ದಾರೆ. ಒಬ್ಬ ಅರವಳಿಕೆ ತಜ್ಞರೂ, ಎಂಟು ಮಂದಿ ನರ್ಸ್‌ಗಳು ಖಾಯಂ ಆಗಿ ಇದ್ದಾರೆ. ತಂತ್ರಜ್ಞರು ಮತ್ತು ಸಹಾಯಕರ ಕೆಲವು ಸ್ಥಾನಗಳು ಮಾತ್ರ ಇಲ್ಲಿ ಖಾಲಿ ಇವೆ. ಸರಕಾರಿ ಆಸ್ಪತ್ರೆಯಲ್ಲಿ ನಿಗದಿತ ವೈದ್ಯರೊಂದಿಗೆ ಕಾರ್ಯನಿರ್ವಹಿಸುತ್ತಿರುವ ಅಪರೂಪದ ಆಸ್ಪತ್ರೆ ಇದು ಎಂದು ಹೆಮ್ಮೆಯಿಂದ ಹೇಳುತ್ತಾರೆ ಡಾ.ಮಧುಸೂಧನ್ ನಾಯಕ್.
ಬೇಕಿದೆ ಸುಸಜ್ಜಿತ ಕಟ್ಟಡ
ಹಾಜಿ ಅಬ್ದುಲ್ಲ ಅವರು 1930 ದಶಕದಲ್ಲಿ ನಿರ್ಮಿಸಿದ ಆಸ್ಪತ್ರೆ, 1962ರಲ್ಲಿ ಅಜ್ಜರಕಾಡಿನಲ್ಲಿ ಪ್ರಾರಂಭಗೊಂಡ ಜಿಲ್ಲಾಸ್ಪತ್ರೆಯ ಅಡಿಯಲ್ಲಿ ಕಾರ್ಯನಿರ್ವ ಹಿಸುತ್ತಿದೆ. ಕೆಲಕಾಲ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯನ್ನು ಜಿಲ್ಲಾಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಇಲ್ಲಿ ಕೆಲವು ಕಟ್ಟಡಗಳನ್ನು ನಿರ್ಮಿಸಲಾಯಿತು. ಜಿಲ್ಲಾಸ್ಪತ್ರೆಯಿಂದ ಮತ್ತೆ ಮಹಿಳಾ ಮತ್ತು ಮಕ್ಕಳ ವಿಭಾಗವನ್ನು 60ರ ದಶಕದಲ್ಲಿ ಇಲ್ಲಿಗೆ ವರ್ಗಾಯಿಸಲಾಯಿತು ಎಂದು ಡಾ.ಕಿಶೋರಿ ತಿಳಿಸಿದರು.
ನಮ್ಮ ಆಸ್ಪತ್ರೆಗೆ ಹೆಚ್ಚಿನ ಸೌಲಭ್ಯಗಳನ್ನು ನೀಡಿದ್ದರೂ, ಕಟ್ಟಡಗಳು ಸಾಕಷ್ಟು ಶಿಥಿಲಗೊಂಡಿರುವುದು ಸಮಸ್ಯೆಯಾಗಿದೆ. ಆಸ್ಪತ್ರೆಗೆ ಸುಸಜ್ಜಿತ ಕಟ್ಟಡ ನಿರ್ಮಿಸಿಕೊಟ್ಟರೆ ಖಂಡಿತ ಇಲ್ಲಿ ರೋಗಿಗಳು ಇನ್ನು ಹಲವು ಪಟ್ಟು ಹೆಚ್ಚುವುದು ಖಂಡಿತ. ಮಳೆಗಾಲದಲ್ಲಿ ಕಟ್ಟಡದ ಅಲ್ಲಲ್ಲಿ ಸೋರುತ್ತದೆ. ಕೆಲವು ಕಡೆಗಳಲ್ಲಿ ಗೋಡೆ ಮುಟ್ಟಿದರೆ ಶಾಕ್ ಹೊಡೆಯುತ್ತದೆ. ಹೀಗಾಗಿ ಒಂದು ವಾರ್ಡ್‌ನ್ನು ನಾವು ತಾತ್ಕಾಲಿಕವಾಗಿ ಮುಚ್ಚಿ ಬಿಟ್ಟಿದ್ದೇವೆ ಎಂದವರು ನುಡಿದರು.
ಸುಸಜ್ಜಿತ ಕಟ್ಟಡದೊಂದಿಗೆ, ಅವಧಿ ಪೂರ್ವ ಜನಿಸುವ ಮಗುವಿನ ಆರೈಕೆಗೆ ಇನ್ನಷ್ಟು ಆಧುನಿಕ ತಂತ್ರಜ್ಞಾನವನ್ನು ಒದಗಿಸಿದರೆ ಖಂಡಿತ ಈ ಆಸ್ಪತ್ರೆ ಯಾವುದೇ ಖಾಸಗಿ ಆಸ್ಪತ್ರೆಗೆ ಕಡಿಮೆ ಇಲ್ಲದಂತೆ ಬಡಜನರ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ. ಇಲ್ಲಿ ಕೇವಲ ಬಿಪಿಎಲ್ ಕಾರ್ಡುದಾರರು ಮಾತ್ರವಲ್ಲ, ಎಪಿಎಲ್ ಕಾರ್ಡುದಾರರು ಉಚಿತ ಹೆರಿಗೆಯ ಸೌಲಭ್ಯವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ವೈದ್ಯೆ ತಿಳಿಸಿದರು.
ಗರ್ಭಿಣಿಯರನ್ನು 108 ಅಂಬುಲೆನ್ಸ್‌ನಲ್ಲಿ ಕರೆದುಕೊಂಡು ಬಂದು, ನಗು-ಮಗುವಿನಲ್ಲಿ ಮನೆಗೆ ಕರೆದುಕೊಂಡು ಹೋಗಿ ಬಿಡುತ್ತಿದ್ದೇವೆ. ಇದರೊಂದಿಗೆ ಬಿಪಿಎಲ್‌ನವರಿಗೆ ಮಡಿಲು ಕಿಟ್ ಉಚಿತವಾಗಿ ದೊರೆಯುತ್ತಿದೆ. ಖಾಸಗಿಯಾಗಿ ಕನಿಷ್ಠ 30,000 ರೂ. ಖರ್ಚಾಗುವ ಸಿಸೇರಿಯನ್ ಸಹ ಇಲ್ಲಿ ಉಚಿತ ಎಂದರು.
ನನ್ನ ಕುಟುಂಬದ ಮೂರು ತಲೆಮಾರಿನ ಹೆರಿಗೆ ಇದೇ ಅಬ್ದುಲ್ಲಾ ಆಸ್ಪತ್ರೆಯಲ್ಲಾಗಿದೆ. ನನ್ನ, ಮಗಳ ಹಾಗೂ ಈಗ ಮೊಮ್ಮಗಳ ಹೆರಿಗೆಗೆ ಇಲ್ಲಿಗೆ ಬಂದಿದ್ದು. ಎಲ್ಲವೂ ಉಚಿತವಾಗಿರುವುದರ ಜೊತೆಗೆ ವೈದ್ಯರು ಹಾಗೂ ದಾದಿಯರ ನಗು ಮೊಗದ ಸೇವೆ ನಮಗೆ ತೃಪ್ತಿ ನೀಡುತ್ತದೆ.
-ಕಮಲಮ್ಮ, ಬಡಾನಿಡಿಯೂರು