ಕೋಟ ಕಾರಂತ ಥೀಂ ಪಾರ್ಕ್‌ನಲ್ಲಿ ಶಿಲ್ಪ ಕಲಾಕೃತಿಗಳ ಮೆರುಗು
ಕೋಟ, ಸೆ.22: ಕೋಟತಟ್ಟುವಿನಲ್ಲಿರುವ ಡಾ.ಶಿವರಾಮ ಕಾರಂತ ಥೀಂ ಪಾರ್ಕ್‌ಗೆ ಇನ್ನಷ್ಟು ಮೆರುಗು ನೀಡುವ ನಿಟ್ಟಿನಲ್ಲಿ ಕಾರಂತರ ಸಾಹಿತ್ಯ, ಯಕ್ಷಗಾನಕ್ಕೆ ಸಂಬಂಧಿಸಿದ 19 ಶಿಲ್ಪ ಕಲಾಕೃತಿಗಳನ್ನು ರಚಿಸುವ ಪ್ರಕ್ರಿಯೆ ನಡೆಯುತ್ತಿದೆ. ಇದಕ್ಕಾಗಿ 15 ದಿನಗಳಿಂದ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ ಸುಮಾರು 22 ಮಂದಿ ಕಲಾವಿದರು ಶ್ರಮಿಸುತ್ತಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಶಿಲ್ಪಕಲಾ ಅಕಾಡಮಿ, ಕೋಟತಟ್ಟು ಗ್ರಾಪಂ, ಡಾ.ಶಿವರಾಮ ಕಾರಂತ ಪ್ರತಿಷ್ಠಾನದ ಸಹಯೋಗದಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಹಾಗೂ ಬಹುಮುಖ ಪ್ರತಿಭೆಯ ಡಾ.ಶಿವರಾಮ ಕಾರಂತ ವಿಷಯಾಧಾರಿತ ರಾಜ್ಯಮಟ್ಟದ ಸಿಮೆಂಟ್ ಶಿಲ್ಪಕಲಾ ಶಿಬಿರವನ್ನು ಕಾರಂತರ ಥೀಂ ಪಾರ್ಕ್‌ನಲ್ಲಿ ಹಮ್ಮಿ ಕೊಳ್ಳಲಾಗಿದ್ದು, ಇದರಲ್ಲಿ 10 ಹಿರಿಯ ಹಾಗೂ 12 ಕಿರಿಯ ಕಲಾವಿದರು ಪಾಲ್ಗೊಂಡಿದ್ದಾರೆ. ಇಲ್ಲಿ ಫೈಬರ್ ಹಾಗೂ ಸಿಮೆಂಟ್ ಕಲಾಕೃತಿಗಳನ್ನು ರಚಿಸಲಾಗುತ್ತಿದೆ.
ಕಲಾಕೃತಿಗಳ ರಚನೆಯ ವಿಧಾನ: ಮೊದಲು ಕಬ್ಬಿಣದ ರಾಡನ್ನು ಜೋಡಿಸಿ ಕಲಾಕೃತಿಯ ಮೂಲವನ್ನು ರಚಿಸಿ ನಂತರ ಅದರ ಮೇಲೆ ಆವೆಮಣ್ಣಿನಿಂದ ಕಲಾಕೃತಿಯನ್ನು ರಚಿಸಲಾಗುತ್ತದೆ. ಬಳಿಕ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ಅಚ್ಚು ತೆಗೆಯಲಾಗುತ್ತದೆ. ಅದರ ಒಟ್ಟಿಗೆ ಫೈಬರ್ ಗ್ಲಾಸನ್ನು ಇಡಲಾಗುವುದು. ನಂತರ ಆವೆ ಮಣ್ಣಿನ ಕಲಾಕೃತಿಯನ್ನು ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ಮುಚ್ಚಲಾಗುತ್ತದೆ. ಇದಕ್ಕೆ ವಿವಿಧ ಬಗೆಯ ರಾಸಾಯನಿಕಗಳನ್ನು ಬಳಸಲಾಗುತ್ತದೆ. ನಂತರ ಪ್ಲಾಸ್ಟರ್ ಆಫ್ ಪ್ಯಾರಿಸ್‌ನ್ನು ಒಡೆದು ತೆಗೆದಾಗ ಫೈಬರ್ ಕಲಾಕೃತಿಯು ಮೂಡಿಬರುತ್ತದೆ. ಈ ಎಲ್ಲಾ ಪ್ರಕ್ರಿಯೆಗಳ ನಂತರ ಎರಡರಿಂದ ಮೂರು ದಿನಗಳಲ್ಲಿ ತಯಾರಾಗುವ ಈ ಕಲಾಕೃತಿಗಳ ಆಯಸ್ಸು ಸುಮಾರು 50 ವರ್ಷಗಳು.
ಸಿಮೆಂಟ್ ಕಲಾಕೃತಿಯನ್ನು ರಚಿಸುವ ಮೊದಲು ಕಂಬಿಗಳಿಂದ ಸ್ಟ್ರಕ್ಚರ್ ತಯಾರಿಸಿ ಕೆಂಪುಇಟ್ಟಿಗೆಯಿಂದ ಅದನ್ನು ತುಂಬಿಸಲಾಗು ವುದು. ನಂತರ ಅದಕ್ಕೆ ಸಿಮೆಂಟ್ ಮತ್ತು ಮರಳು ಮಿಶ್ರ ಮಾಡಿ ಗಾರೆಯ ಮೂಲಕ ರೂಪ ನೀಡಿ ಶಿಲ್ಪ ಕಲಾಕೃತಿಯನ್ನು ರಚಿಸಲಾಗುತ್ತದೆ. ಈ ಕಲಾಕೃತಿಗಳನ್ನು ಕಟ್ಟಡಗಳ ಮಾದರಿಯಲ್ಲಿ ನಿರ್ಮಿಸಲಾಗುತ್ತಿದೆ. ಕೆಲವರು ಫೈಬರ್ ಕಲಾಕೃತಿ ರಚನೆಯಲ್ಲಿ ತೊಡಗಿದರೆ ಕೆಲವರು ಸಿಮೆಂಟ್ ಕಲಾಕೃತಿಯನ್ನು ನಿರ್ಮಿಸುತ್ತಿದ್ದಾರೆ. ಇವರಿಗೆ ಸಹಾಯಕರಾಗಿ ಹಲವು ಶಿಲ್ಪಿಗಳು ಕೈಜೋಡಿಸಿದ್ದಾರೆ.
‘ಕಾರಂತರು ಓಡಾಡಿದ ನೆಲದಲ್ಲಿ ನಿಂತು ಈ ಕಾರ್ಯ ಮಾಡುತ್ತಿ ರುವುದು ನಮಗೆ ಒಳ್ಳೆಯ ಅನುಭವ. ಈವರೆಗೆ ಅವರನ್ನು ನಾವು ಸಾಹಿತಿ ಎಂದು ಮಾತ್ರ ಅರಿತಿದ್ದೆವು. ಇಲ್ಲಿಗೆ ಬಂದ ಮೇಲೆ ಅವರು ಕೈಯಾಡಿಸದ ಕ್ಷೇತ್ರವೇ ಇಲ್ಲ ಎಂದು ತಿಳಿಯಿತು. ಇಂತಹ ಅದ್ಭುತ ವ್ಯಕ್ತಿಗಾಗಿ ಕೆಲಸ ಮಾಡುತ್ತಿರುವುದು ನಮ್ಮ ಪುಣ್ಯ’ ಎಂದು ಕಲಾವಿದ ಪ್ರವೀಣ್ ಹೇಳಿದರು.
ಅದ್ಭುತ ಶಿಲ್ಪಕಲಾಕೃತಿಗಳು:
ಥೀಂ ಪಾರ್ಕಿನ ದ್ವಾರದ ಎರಡು ಬದಿಗಳಲ್ಲಿ ತೆಂಕುತಿಟ್ಟು ಹಾಗೂ ಬಡಗುತಿಟ್ಟು ಯಕ್ಷಗಾನ ಕಲಾವಿದರ 7.5 ಅಡಿ ಎತ್ತರದ ಪ್ರತಿಮೆಗಳನ್ನು ನಿರ್ಮಿಸಲಾಗುತ್ತಿದೆ. ಕಾರಂತರ ಕಾದಂಬರಿ ‘ಚೋಮನ ದುಡಿ’ಯ ನಾಯಕ ದಲಿತ ಚೋಮ, ದುಡಿ ಬಾರಿಸುವ ಸಿಮೆಂಟ್ ಕಲಾಕೃತಿಯನ್ನು ರಚಿಸಲಾಗಿದೆ. ಕಾರಂತರಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ‘ಮೂಕಜ್ಜಿಯ ಕನಸುಗಳು’ ಕಾದಂಬರಿಯ ಪುಸ್ತಕ ಕಲಾಕೃತಿಯನ್ನು ಕೂಡ ಸಿಮೆಂಟ್‌ನಲ್ಲಿ ಅದ್ಭುತವಾಗಿ ರಚಿಸಲಾಗಿದೆ. ಇದು ಆರು ಅಡಿ ಎತ್ತರ, ನಾಲ್ಕು ಅಡಿ ಅಗಲ ಇದೆ. ಇದರಲ್ಲಿ ನೀರು ಹರಿದು ಬಂದು ಕಾರಂಜಿಯಾಗಿ ಚಿಮ್ಮುವಂತೆ ಮಾಡಲಾಗಿದೆ. ಇದಕ್ಕೆ ಬಣ್ಣದ ಬೆಳಕಿನ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಶಿವರಾಮ ಕಾರಂತರ ವಿವಿಧ ಮುಖಗಳನ್ನು ಅನಾವರಣಗೊಳಿಸುವ, ಅವರು ಕ್ಯಾಮರಾ ಹಿಡಿದು ಕುಳಿತಿರುವ, ಮಕ್ಕಳಿಗೆ ಕಥೆ ಹೇಳುವ, ಭಾಷಣ ಮಾಡುವ ವಿವಿಧ ಭಂಗಿಗಳ ಮೂರು ಕಲಾಕೃತಿಗಳನ್ನು ರಚಿಸಲಾಗಿದೆ. ಥೀಂ ಪಾರ್ಕ್ ನ ಆವರಣದಲ್ಲಿರುವ ಕಟ್ಟಡದ ಮೇಲೆ ಕಾರಂತರ ಬ್ಯಾಲೆಯಲ್ಲಿ ಬರುವ ಜಟಾಯುವಿನ 8.5 ಅಡಿ ಎತ್ತರದ ಸಿಮೆಂಟ್ ಕಲಾಕೃತಿಯನ್ನು ನಿರ್ಮಿಸಲಾಗಿದೆ. ಅದೇ ರೀತಿ ಶಿವರಾಮ ಕಾರಂತರು ಸೇರಿದಂತೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಎಂಟು ಸಾಹಿತಿಗಳ ಪ್ರತಿಮೆಗಳನ್ನು ಸಹ ಇಲ್ಲಿ ರಚಿಸಲಾಗುತ್ತಿದೆ. ಅಲ್ಲದೆ ಕಾರಂತರ ಹಿರಿಯ ಸಹೋದರ ಸಸ್ಯಶಾಸ್ತ್ರಜ್ಞ, ಶಿಕ್ಷಣತಜ್ಞ ಕೆ.ಎಲ್.ಕಾರಂತರ ಪ್ರತಿಮೆಯನ್ನು ಸಹ ಇಲ್ಲಿ ಸ್ಥಾಪಿಸಲಾಗುತ್ತಿದೆ.
ಶಿಬಿರದಲ್ಲಿ ಭಾಗವಹಿಸುತ್ತಿರುವ ಶಿಲ್ಪಿಗಳು
ಶಿಬಿರದ ನಿರ್ದೇಶಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವೆಂಕಟೇಶ್ ಎಂ. ನೇತೃತ್ವದಲ್ಲಿ ಹಿರಿಯ ಶಿಲ್ಪಿಗಳಾದ ಮುರಳೀಧರ ಆಚಾರ್ ಚಿತ್ರದುರ್ಗ, ಧನವೇಶ್ ಎಂ.ಎಸ್.ಬೆಂಗಳೂರು, ಕುಮಾರ ಬಾಬು ಘಸ್ತಿ ಬೆಳಗಾವಿ, ಕೆ.ವಿಶಾಲ್ ಬೆಂಗಳೂರು, ಅನಿಲ್ ಜಿ.ಬಿ.ದಾವಣಗೆರೆ, ನಾಗರಾಜ್ ಎಸ್.ಶಿವಮೊಗ್ಗ, ಮೋಹನ್ ದಾವಣಗೆರೆ, ನಿತ್ಯಾನಂದ ಜೆ.ಕೆ. ಬೆಂಗಳೂರು, ಸುನೀಲ್ ಪೂಜಾರಿ ಬೀದರ್, ಓಂಕಾರಮೂರ್ತಿ ಜಿ.ಬಿ. ದಾವಣಗೆರೆ, ಸಹಾಯಕ ಶಿಲ್ಪಿಗಳಾದ ಸಚಿನ್ ಶಿವಮೊಗ್ಗ, ವೆಂಕಟೇಶ್ ಪಿ.ಎಸ್.ಚಿಕ್ಕಬಳ್ಳಾಪುರ, ಗಣಪತಿ ನಾಯ್ಕ ಉಡುಪಿ, ರವಿ ಡಿ. ಕೊಂಗಣ್ಣನವರ ಹಾವೇರಿ, ಪ್ರವೀಣ್ ಕೆ.ಒ. ದಾವಣಗೆರೆ, ಹನುಮಂತ ವೈ.ಎಸ್. ದಾವಣಗೆರೆ, ಕಾರ್ತಿಕ್ ದಾವಣಗೆರೆ, ಸಂತೋಷ್ ನಾಯಕ ಧಾರವಾಡ, ಸುನೀಲ್ ಬಿ.ಎಸ್., ಸಂತೋಷ್ ಎಚ್. ದಾವಣಗೆರೆ ಪಾಲ್ಗೊಂಡಿದ್ದಾರೆ.
‘ಬಡಗುತಿಟ್ಟು ಯಕ್ಷಗಾನ ಕಲಾವಿದನ ಸಿಮೆಂಟ್ ಶಿಲ್ಪ ಕಲಾಕೃತಿಯನ್ನು ರಚಿಸುತ್ತಿದ್ದೇನೆ. ಯಕ್ಷಗಾನದ ಅಷ್ಟೊಂದು ಅರಿವು ಇಲ್ಲದ ನನಗೆ ಆರಂಭದಲ್ಲಿ ಕಷ್ಟವಾಯಿತು. ನಂತರ ಯಕ್ಷಗಾನದ ವೀಡಿಯೊ ನೋಡಿ ಕಲೆಯನ್ನು ತಿಳಿದುಕೊಂಡ ಬಳಿಕ ನನ್ನ ಕೆಲಸದಲ್ಲಿ ಸಾಕಷ್ಟು ಪ್ರಗತಿಯಾಗಿದೆ. ನಮಗೆ ಇದೊಂದು ಹೊಸ ಅನುಭವ’
-ಸುನೀಲ್ ಪೂಜಾರಿ ಬೀದರ್, ಶಿಲ್ಪಿ
ಕೋಟತಟ್ಟು ಗ್ರಾಪಂ ಶಿವರಾಮ ಕಾರಂತರಿಗೆ ಸಲ್ಲಿಸುವ ಬಹುದೊಡ್ಡ ಕೊಡುಗೆ ಇದಾಗಿದೆ. ಮುಂದೆ ಥೀಂ ಪಾರ್ಕ್‌ನ್ನು ಪ್ರವಾಸೋದ್ಯಮ ಸ್ಥಳವಾಗಿ ಅಭಿವೃದ್ಧಿಪಡಿಸುವ ಯೋಜನೆಯಿಂದ ಈ ಕಾರ್ಯ ಹಮ್ಮಿಕೊಳ್ಳಲಾಗಿದೆ. ಸದ್ಯಕ್ಕೆ ಗ್ರಾಪಂಗೆ 2 ಲಕ್ಷ ರೂ. ಖರ್ಚಾಗುತ್ತಿದೆ. ಉಳಿದ ವೆಚ್ಚವನ್ನು ಅಕಾಡಮಿ ಭರಿಸುತ್ತದೆ. ಇಲ್ಲಿನ ಎರಡು ಕಲಾಕೃತಿಗಳನ್ನು ಅಕಾಡಮಿಯವರು ಪಡೆದು ಕೊಳ್ಳಲಿದ್ದಾರೆ. ಇದರ ಲೋಕಾಪರ್ಣೆಯು ಸೆ.24ರಂದು ನಡೆಯಲಿದೆ.
-ಕೋಟ ಶ್ರೀನಿವಾಸ ಪೂಜಾರಿ, ವಿಧಾನಪರಿಷತ್ ಸದಸ್ಯ,