ಛಲದ ಬದುಕಿಗೆ ಈ ಎರ್ರಿ ಸ್ವಾಮಿಗೆ ಸಾಟಿಯಾಗಬಲ್ಲಿರಾ?
ಮಂಗಳೂರು, ಸೆ.24: ಪಾಳು ಬಿದ್ದಂತಿರುವ ಸುಮಾರು ಐದಡಿ ಎತ್ತರ, ಮೂರಡಿ ಅಗಲದ ಮರದ ಗೂಡು. ಅಲ್ಲಿ ಒಂದಿಷ್ಟು ಚಪ್ಪಲಿ, ಕೊಡೆ, ಬ್ಯಾಗ್ ರಿಪೇರಿಯ ಸಾಮಗ್ರಿಗಳು. ಮೂಲೆಯಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲಿಗಳು, ಈ ಸಾಮಗ್ರಿ ಗಳ ನಡುವೆ ಒಂದು ಹಳೆಯ ರೇಡಿಯೊ. ಈ ಮರುಕುಲು ಗೂಡಿನ ಹೊರಗೊಂದು ಸಂಪೂರ್ಣ ಜೀವ ಕಳೆದುಕೊಂಡಂತಿರುವ ಗಾಲಿ ಕುರ್ಚಿ. ಇದು ನಗರದ ಮಿನಿ ವಿಧಾನ ಸೌಧದ ಪಕ್ಕದ ಪೊಲೀಸ್ ಲೇನ್‌ಗೆ ಹೋಗುವ ದಾರಿಯಲ್ಲಿ, ಸಿಟಿ ಬಸ್‌ಗಳ ತಂಗುದಾಣದ ಪಾದಚಾರಿ ರಸ್ತೆಯಲ್ಲಿ ಕಂಡು ಬರುವ ದೃಶ್ಯ. ಸುಮಾರು ಐದು ವರ್ಷಗಳಿಂದೀಚೆಗೆ ಬಳ್ಳಾರಿ ಮೂಲದ ಎಚ್. ಮೂರ್ತಿ ಯಾನೆ ಎರ್ರಿ ಸ್ವಾಮಿ ಎಂಬವರ ಬದುಕಿನಾಸರೆಯಾಗಿರುವ ಗೂಡಿದು.
ಬದುಕುವ ಛಲವಿದ್ದರೆ ದುಡಿಯಲು ಹಲವು ಮಾರ್ಗವಿದೆ ಎಂಬುದಕ್ಕೆ ಮೂರ್ತಿ ಅವರ ಬದುಕು ಒಂದು ಸ್ಫೂರ್ತಿ ಎನ್ನಬಹುದು. ಕಾರಣ, ಪೋಲಿಯೊ ಪೀಡಿತರಾಗಿ ತನ್ನ 10 ಹರೆಯದಲ್ಲೇ ಮನೆಯವರಿಂದ ಹೊರದಬ್ಬಲ್ಪಟ್ಟು ಪ್ರಸ್ತುತ 38ರ ಹರೆಯದ ಮೂರ್ತಿಯ ಬದುಕು ಸಂಘರ್ಷಗಳ ಜತೆಗಿನ ಹೋರಾಟ. ಆದರೆ ತನ್ನ ಬದುಕಿನ ಈ ಪರಿಸ್ಥಿತಿ ಬಗ್ಗೆ ಅವರು ಕಂಗಾಲಾಗಿಲ್ಲ, ಎದೆಗುಂದಿಲ್ಲ. ತನ್ನ ದಯನೀಯ ಪರಿಸ್ಥಿತಿ ಬಗ್ಗೆ ಮನದ ಮೂಲೆಯಲ್ಲೊಂದಿಷ್ಟು ನೋವಿದ್ದರೂ, ಒಬ್ಬಂಟಿಯಾಗಿಯೇ ಬದುಕುವ ಛಲವನ್ನು ಇವರು ಸವಾಲಾಗಿಯೇ ಸ್ವೀಕರಿಸಿದ್ದಾರೆ. ಪೋಲಿಯೊ ಪೀಡಿತನಾಗಿ ಕಾಲುಗಳ ಸ್ವಾಧೀನವನ್ನು ಕಳೆದುಕೊಂಡ ಮಗನ ಬಗ್ಗೆ ಆಸಕ್ತಿ ತೋರದ ಪೋಷಕರು ಕೊನೆಗೊಂದು ದಿನ ಮನೆಯಿಂದ ಹೊರಹಾಕಿದ್ದರು. ಹೆತ್ತವರಿಂದಲೇ ಪರಿತ್ಯಕ್ತಗಾದ ಮೂರ್ತಿ ಅಲ್ಲಿಂದ ಊರೂರು ಸುತ್ತುತ್ತಾ, ಬದುಕಿಗಾಗಿ ಭಿಕ್ಷಾಟನೆಯನ್ನೇ ನೆಚ್ಚಿಕೊ ಂಡರು. ಹೀಗೆ ಭಿಕ್ಷೆ ಬೇಡುತ್ತಾ, ದಾರಿಹೋಕರು ನೀಡಿದ್ದನ್ನು ಕೈಚಾಚಿ ಪಡೆಯುತ್ತಾ, ರಾತ್ರಿ ಹಗಲು, ಬಿಸಿಲು, ಗಾಳಿ, ಮಳೆಯನ್ನೂ ಲೆಕ್ಕಿಸದೆ ತೆವಳಿಕೊಂಡೇ ಸಾಗುತ್ತಾ ಹಳ್ಳಿ, ನಗರ, ಗ್ರಾಮಗಳ ರಸ್ತೆ ಬದಿಯಲ್ಲೇ ದಿನಗಳೆದರು. ಹೀಗೆ ಹುಬ್ಬಳ್ಳಿ, ಧಾರವಾಡ, ಚಿಕ್ಕಮಗಳೂರು, ಬೆಂಗಳೂರು ಮೊದಲಾದೆಡೆಗೆ ಬದುಕಿನ ತುತ್ತು ಅರಸುತ್ತಾ ಸುತ್ತಾಡಿದರು. ಭಿಕ್ಷೆ ಬೇಡುವ ಕಾಯಕ ಇವರನ್ನು ದೇಶದ ರಾಜಧಾನಿ ಹೊಸದಿಲ್ಲಿಯತ್ತಲೂ ಕೊಂಡೊಯ್ದಿತ್ತು. ಚಿಕ್ಕಮಗಳೂರಿನಲ್ಲಿ ಅದೊಂದು ದಿನ ಭಿಕ್ಷೆ ಬೇಡುತ್ತಿದ್ದ ವೇಳೆ (ಅವರೇ ಹೇಳುವಂತೆ) ಸುಮಾರು 18 ವರ್ಷ ವಯಸ್ಸಾಗಿರಬಹುದು. ವೃದ್ಧರೊಬ್ಬರು ನಾಲ್ಕಾಣೆ ನೀಡಿ, ‘ಈ ರೀತಿ ಭಿಕ್ಷೆ ಬೇಡುವ ಬದಲು ದುಡಿದು ತಿನ್ನಲಾಗುವುದಿಲ್ಲವೇ?’ ಎಂದು ಮೂರ್ತಿಯನ್ನು ಪ್ರಶ್ನಿಸಿದರು. ಅವರ ಮಾತು ಯುವಕನಾಗಿದ್ದ ಮೂರ್ತಿಯವರ ಎದೆಗೆ ನಾಟಿತ್ತು. ನಿಜ, ಕಾಲುಗಳಿಲ್ಲದಿದ್ದರೇನು? ಕೈಗಳಿವೆಯಲ್ಲಾ ಎಂದು ಆಲೋಚಿಸಿ ಏನಾದರೂ ದುಡಿಯಬೇಕೆಂದು ನಿರ್ಧರಿಸಿದರು. ಆದರೆ ನಿರ್ಧಾರ ಮಾಡಿಕೊಂಡಷ್ಟು ಆ ಕಾಯಕ ಆರಂಭಿಸುವುದು ಸುಲಭವಾಗಿರಲಿಲ್ಲ. ನೆಲೆಯೇ ಇಲ್ಲದ ತನಗೆ ಸೂಕ್ತವಾದ ಕೆಲಸ ಚಪ್ಪಲಿ ಹೊಲಿಯುವುದು ಮಾತ್ರ. ಅದಕ್ಕಾಗಿ ಒಂದಿಷ್ಟು ಬಂಡವಾಳ ಬೇಕು. ಭಿಕ್ಷೆ ಬೇಡಿದ ಹಣ ಆ ದಿನದ ಊಟ ತಿಂಡಿಗೇ ಸಾಕಾಗುತ್ತಿರಲಿಲ್ಲ.ಅದಕ್ಕಾಗಿ ಭಿಕ್ಷಾಟನೆ ಮುಂದುವರಿಸಿ ಒಂದಿಷ್ಟು ಹಣ ಸೇರಿಸಿ ಪಾದರಕ್ಷೆ, ಬ್ಯಾಗ್, ಕೊಡೆ ರಿಪೇರಿ ಮಾಡುವ ಒಂದಷ್ಟು ಸಾಮಗ್ರಿಗಳನ್ನು ಖರೀದಿಸಿ ತಾವು ಸಾಗಿದ್ದಲ್ಲೆಲ್ಲಾ ಫುಟ್‌ಪಾತ್‌ನಲ್ಲೇ ದುಡಿಮೆ ಆರಂಭಿಸಿದರು. ಚಪ್ಪಲಿ ಹೊಲಿಯುವ ಬಗ್ಗೆ ಏನೂ ಅರಿವಿಲ್ಲದ ಮೂರ್ತಿಯವರು ಫುಟ್‌ಪಾತ್‌ನಲ್ಲಿ ಈ ಕಾಯಕ ಮಾಡುತ್ತಿದ್ದವರಿಂದಲೇ ಒಂದಿಷ್ಟು ಕಲಿತುಕೊಂಡರು. ಆದರೆ, ಸೊಂಟದ ಕೆಳಭಾಗದಲ್ಲಿ ಸ್ವಾಧೀನ ಇಲ್ಲದಿರುವ ಮೂರ್ತಿಗೆ ಹೆಚ್ಚು ಹೊತ್ತು ತೆವಳುವುದು, ಕುಳಿತುಕೊಳ್ಳುವುದು ಸಾಧ್ಯವಾಗುತ್ತಿರಲಿಲ್ಲ. ಅದಕ್ಕಾಗಿ ಗಾಲಿ ಕುರ್ಚಿಯೊಂದನ್ನೂ ಖರೀದಿಸಿದರು. ಸುಮಾರು 18 ವರ್ಷಗಳಿಂದ ಈ ಗಾಲಿಕುರ್ಚಿಯೇ ಇವರ ಒಡನಾಡಿಯಾಗಿದೆ.(ಪ್ರಸ್ತುತ ಈ ಗಾಲಿಕುರ್ಚಿ ಎಲ್ಲೆಂದರಲ್ಲಿ ಸಾಗಲು ಯೋಗ್ಯವಾಗಿಲ್ಲ. ಹೊಸತನ್ನು ಖರೀದಿಸಲು ಸಾಧ್ಯವಾಗದೇ ಅದನ್ನೇ ಉಪಯೋಗಿಸುತ್ತಿದ್ದಾರೆ).
ದುಡಿಯಲು ಮುಂದೆ ಬಂದರೂ ಕೆಲಸ ಸಿಗಬೇಕಲ್ಲ. ಹರಿದ ಚಪ್ಪಲಿಗಳನ್ನು ಹೊಲಿಸಿಕೊಳ್ಳುವವರೂ ಬೇಕಲ್ಲ. ಹೀಗೆ ಮನಸ್ಸಿಲ್ಲದಿದ್ದರೂ ಮತ್ತೆ ಮತ್ತೆ ಭಿಕ್ಷಾಟನೆಯೇ ಮೂರ್ತಿ ಪಾಲಿಗೆ ಅನಿರ್ವಾಯವಾಗುತ್ತಿತ್ತು. ಹೀಗೆ ಚಪ್ಪಲಿ ರಿಪೇರಿಯ ಜತೆಗೆ ಭಿಕ್ಷಾಟನೆಯನ್ನು ಮುಂದುವರಿಸುತ್ತಾ, ಗೆಳೆಯನೊಬ್ಬನ ಕರೆಯಂತೆ ಐದು ವರ್ಷಗಳ ಹಿಂದೆ ಮೂರ್ತಿ ಅವರು ಚಿಕ್ಕಮಗಳೂರಿನಿಂದ ಮಂಗಳೂರಿಗೆ ಬಂದರು. ಇಲ್ಲಿಯೂ ಆರಂಭದಲ್ಲಿ ಭಿಕ್ಷಾಟನೆಯೇ ಅನಿವಾರ್ಯವಾಯಿತು. ಅದೊಂದು ದಿನ ನಗರದ ಸ್ಟೇಟ್ ಬ್ಯಾಂಕ್ ಬಳಿಯ ಪೆಟ್ರೋಲ್ ಬಂಕ್ ಬಳಿ ಭಿಕ್ಷಾಟನೆಯಲ್ಲಿ ತೊಡಗಿದ್ದ ವೇಳೆ ವ್ಯಕ್ತಿಯೊಬ್ಬರು, ‘ಈ ರೀತಿ ತೆವಳಿಕೊಂಡು ಯಾಕೆ ಭಿಕ್ಷೆ ಬೇಡುತ್ತೀಯಾ, ನಿನ್ನ ದೇಹಕ್ಕೂ ದಣಿವಾಗುತ್ತದೆ. ಏನಾದರೂ ಕುಳಿತು ಕೆಲಸ ಮಾಡಬಾರದೇ?’ ಎಂದು ಹೇಳಿದಾಗ ಮಾತ್ರ ಮೂರ್ತಿಗೆ ನಿಜಕ್ಕೂ ತನ್ನ ಭಿಕ್ಷಾಟನೆಯ ಬಗ್ಗೆ ಜಿಗುಪ್ಸೆ ಹುಟ್ಟಿಕೊಂಡಿತು. ಏನಾದರೂ ಸರಿ ಇನ್ನು ದುಡಿದೇ ತಿನ್ನುತ್ತೇನೆಂದು ನಿರ್ಧರಿಸಿದ ಅವರು, ಅವರಿವರಲ್ಲಿ ಬೇಡಿ ಸಣ್ಣ ಮರದ ಅಂಗಡಿ ರೀತಿಯ ಗೂಡೊಂದನ್ನು ತನ್ನಲ್ಲಿದ್ದ ಹಣದಿಂದ ಖರೀದಿಸಿದರು.
ಹೀಗೆ ಐದು ವರ್ಷಗಳಿಂದ ಈ ಗೂಡನ್ನೇ ತನ್ನ ಆಶ್ರಯ ತಾಣವಾಗಿಸಿಕೊಂಡು ಅಲ್ಲೇ ತನ್ನ ಕಾಯಕ ಮಾಡಿಕೊಂಡು ಸ್ವಾಭಿಮಾನದ ಜೀವನ ಸಾಗಿಸುತ್ತಿದ್ದಾರೆ. ನೆಹರೂ ಮೈದಾನದ ಫುಟ್‌ಬಾಲ್ ಗ್ರೌಂಡ್ ಬಳಿಯ ಸ್ನಾನಗೃಹ ಅಥವಾ ರೈಲ್ವೆ ನಿಲ್ದಾಣದ ವಿಕಲಚೇತನರಿಗಾಗಿನ ಸ್ನಾನಗೃಹದಲ್ಲಿದಲ್ಲಿ ಸ್ನಾನ, ಶೌಚ ಮಾಡುತ್ತಾರೆ.
ಮಂಗಳೂರು ತಾಪಂ ಬಳಿಯ ರಸ್ತೆಯಿಂದ ಕೇಂದ್ರ ರೈಲ್ವೆ ನಿಲ್ದಾಣಕ್ಕೆ ಸಾಗುವ ರಸ್ತೆ ನಾದುರಸ್ತಿಯಲ್ಲಿರುವ ಕಾರಣ ಇವರಿಗೆ ತಮ್ಮ ತೀರಾ ದುಸ್ಥಿತಿಯಲ್ಲಿರುವ ಗಾಲಿಕುರ್ಚಿಯಲ್ಲಿ ತೆರಳಲು ಸಾಧ್ಯವಾಗುತ್ತಿಲ್ಲ. ಕೆಲವೊಮ್ಮೆ ಬೇಸರವಾದಾಗ ಸಮೀಪದ ಸಿನೆಮಾ ಮಂದಿರದಲ್ಲಿ ಚಲನಚಿತ್ರ ವೀಕ್ಷಿಸುತ್ತಾರೆ. ಉಳಿದಂತೆ ಇವರಿಗೆ ಹಬ್ಬ ಹರಿದಿನ, ಸಂಭ್ರಮ, ನೋವು ಎಲ್ಲವೂ ಇವರ ಮುರುಕಲು ಗೂಡಿನಲ್ಲಿಯೇ ಸಾಗಿದೆ.
ಸ್ವಾಭಿಮಾನದ ಬದುಕಿಗೊಂದು ನೆಲೆ ಸಿಕ್ಕಿದೆ!
‘‘ದಿನವೊಂದಕ್ಕೆ 300 ರೂ.ನಿಂದ 400 ರೂ.ವರೆಗೆ ಸದ್ಯ ದುಡಿಯುತ್ತೇನೆ. ಜೀವನದಲ್ಲಿ ತೃಪ್ತಿ ಇದೆ. ನನ್ನ ಜತೆಗೆ ಈ ಗೂಡು, ಗಾಲಿ ಕುರ್ಚಿ ಇದೆ. ಜತೆಗೆ ರೇಡಿಯೊ ಕೇಳುತ್ತೇನೆ. ಈ ಗೂಡಿನಲ್ಲೇ ಮಲಗುವುದು, ಇಲ್ಲೇ ಕೆಲಸ ಮಾಡುವುದು. ಮನೆಯವರ ನೆನಪಾಗುತ್ತದೆ. ಆದರೆ ಅವರು ನನ್ನಲ್ಲಿರುವ ಹಣವನ್ನು ಬಯಸುತ್ತಾರೆಯೇ ಹೊರತು ನನ್ನ ಮೇಲೆ ಪ್ರೀತಿ ಇಲ್ಲ. ಹಾಗಾಗಿ ಆ ಸಂಬಂಧಗಳ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಯಾವಾಗಲೊಮ್ಮೆ ಊರಿಗೆ ಹೋಗಿ ಬರುತ್ತೇನೆ. ಕೆಲ ಸಮಯದ ಹಿಂದೆ ನನ್ನ ತಮ್ಮ ಅಪಘಾತದಲ್ಲಿ ತೀರಿಕೊಂಡ. ಇದೀಗ ಅವನ ಮೂವರು ಪುಟ್ಟ ಮಕ್ಕಳಿಗೆ ನನ್ನ ದುಡಿಮೆಯ ಹಣವನ್ನು ಕಳುಹಿಸುತ್ತಿದ್ದೇನೆ. ಇತ್ತೀಚೆಗೆ ಜಾತ್ರೆಯ ವೇಳೆ ಊರಿಗೆ ಹೋದಾಗ ಆ ಮಕ್ಕಳು ನನ್ನ ಗಾಲಿಕುರ್ಚಿಯ ಅಂಟಿಕೊಂಡು ನನ್ನನ್ನು ಅಪ್ಪಿಕೊಂಡಿದ್ದು ಅದುವೇ ನನ್ನ ಜೀವನದ ಮರೆಯಲಾಗದ ಕ್ಷಣ’’ ಎಂದು ಹೇಳುವಾಗ ಮೂರ್ತಿ ಅವರ ಕಣ್ಣುಗಳು ತೇವಗೊಳ್ಳುತ್ತವೆ.
ಮಂಗಳೂರಿಗರು ಆತ್ಮೀಯರು
‘‘ನಾನು ರಾಜ್ಯ ಮಾತ್ರವಲ್ಲದೆ ದೇಶದ ಹಲವಾರು ನಗರಗಳನ್ನು ಸುತ್ತಿ ಭಿಕ್ಷಾಟನೆ ಮಾಡಿದ್ದೇನೆ. ಆದರೆ ಸ್ವಾಭಿಮಾನದ ಬದುಕಿಗೆ ಮಂಗಳೂರು ನನಗೆ ನೆರವು ನೀಡಿದೆ. ಇಲ್ಲಿನ ಜನರೂ ಅಷ್ಟೆ, ಆತ್ಮೀಯರು. ಕೆಲವರು ಊಟ ಕೊಡುತ್ತಾರೆ. ಕೆಲವರು ನನ್ನ ಪರಿಸ್ಥಿತಿ ನೋಡಿ ಹಣ ಕೊಡುತ್ತಾರೆ. ಕೆಲವರು ಬಟ್ಟೆಯನ್ನೂ ಕೊಡುತ್ತಾರೆ. ನಾನು ಯಾವುದನ್ನೂ ಬೇಡವೆನ್ನುವುದಿಲ್ಲ. ನನಗೆ ಅಗತ್ಯವಿಲ್ಲದಿದ್ದಾಗ ನನಗೆ ಬೇರೆಯವರು ಕೊಟ್ಟ ವಸ್ತುಗಳನ್ನು ನನ್ನಂತೆ ಅಗತ್ಯ ಇರುವವರಿಗೆ ನೀಡುತ್ತೇನೆ’’ ಎಂದು ಸ್ವಾಭಿಮಾನದ ನಗೆ ಬೀರುತ್ತಾರೆ ಮೂರ್ತಿ.