ಪೊಲೀಸರ ಬಲೆಗೆ ಬಿದ್ದ ಅಂತಾರಾಜ್ಯ ಕಳ್ಳರು: 12.5 ಲಕ್ಷ ರೂ. ಮೌಲ್ಯದ ಸೊತ್ತು ವಶ
ಮಂಗಳೂರು, ಸೆ.26: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 6 ತಿಂಗಳಿನಲ್ಲಿ 10 ದೇವಸ್ಥಾನಗಳಲ್ಲಿ ನಡೆದಿರುವ ದರೋಡೆ ಪ್ರಕರಣವನ್ನು ಜಿಲ್ಲೆಯ ಡಿಸಿಐಬಿ ನೇತೃತ್ವದ ಪೊಲೀಸ್ ತಂಡ ಬೇಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಐದು ಮಂದಿ ಅಂತಾರಾಜ್ಯ ಚೋರರನ್ನು ಮುಂಬೈನ ಥಾಣಾ ಎಂಬಲ್ಲಿ ಬಂಧಿಸಿರುವ ಪೊಲೀಸರು ಆರೋಪಿಗಳಿಂದ 22 ಕೆಜಿ ಬೆಳ್ಳಿ ಹಾಗೂ 75 ಗ್ರಾಂ ಚಿನ್ನ ಸೇರಿದಂತೆ ಒಟ್ಟು 12.5 ಲಕ್ಷ ರೂ. ವೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ಕುರಿತಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಎಸ್ಪಿ ಭೂಷಣ್ ಜಿ. ಬೊರಸೆ ವಿವರ ನೀಡಿದರು.
ಬಂಧಿತ ಆರೋಪಿಗಳನ್ನು ಹೊನ್ನಾವರ ತಾಲೂಕಿನ ಚಂದ್ರಕಾಂತ ಪೂಜಾರಿ (36), ಬೆಂಗಳೂರಿನ ನರಸಿಂಹ ರಾಜು (38), ಮಹಾರಾಷ್ಟ್ರದವರಾದ ನವೀನ್ ಚಂದ್ರ(21), ವಿಜಯ್ ಸುರೇಶ್ ಬೋನ್ಸ್ಲೆ (35), ವಿಶಾಲ್ ಪೋನ್ಕೆ (21) ಎಂದು ಗುರುತಿಸಲಾಗಿದೆ ಎಂದು ಅವರು ಹೇಳಿದರು.
ಈ ಐದು ಮಂದಿ ಆರೋಪಿಗಳು ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಅನೇಕ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಜೈಲು ಶಿಕ್ಷೆ ಅನುಭವಿಸಿದವರಾಗಿದ್ದಾರೆ. ಆರೋಪಿಗಳ ಪೈಕಿ ಚಂದ್ರಕಾಂತ ಪೂಜಾರಿ ವಿರುದ್ಧ ಮುಂಬೈ, ಉಡುಪಿ, ಕುಂದಾಪುರ, ಚಿತ್ರದುರ್ಗ ಮೊದಲಾದ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ನರಸಿಂಹ ರಾಜು ಯಾನೆ ಬಸವರಾಜು ಪದವೀಧರನಾಗಿದ್ದು, ಬೆಂಗಳೂರಿನ ರಾಜಾನುಕುಂಟೆ, ಚಿಕ್ಕಪೇಟೆ, ಉಡುಪಿಯ ಪೆರ್ಡೂರು, ಕಾರ್ಕಳ ಮೊದಲಾದ ಕಡೆಗಳಲ್ಲಿ ಕಳ್ಳತನ ಮಾಡಿ ಜೈಲು ಶಿಕ್ಷೆ ಅನುಭವಿಸಿದ್ದಾನೆ.
10 ದೇವಸ್ಥಾನಗಳ ನಡೆದ ಕಳ್ಳತನ ಬಯಲು!
ಈ ಅಂತಾರಾಜ್ಯ ಚೋರರ ಬಂಧನದ ಮೂಲಕ ದ.ಕ. ಜಿಲ್ಲೆಯಲ್ಲಿ ಆರು ತಿಂಗಳಿನಿಂದೀಚೆಗೆ 10 ದೇವಸ್ಥಾನಗಳಲ್ಲಿ ನಡೆದ ದರೋಡೆ ಪ್ರಕರಣಗಳನ್ನು ಬೇಧಿಸಲಾಗಿದೆ.
ಈಶ್ವರ ಮಂಗಲ ಪಂಚಲಿಂಗೇಶ್ವರ ದೇವಸ್ಥಾನ
ಬೆಳ್ತಂಗಡಿ ಉರುವಾಲು ಗ್ರಾಮದ ಪುತ್ತೂರು ಪಂಚಲಿಂಗೇಶ್ವರ ದೇವಸ್ಥಾನ
ಬೆಳ್ತಂಗಡಿ ಪಟ್ರಮೆ ಗ್ರಾಮ, ಅನಾರು ಬಳಿಯ ದುರ್ಗಾ ಪರಮೇಶ್ವರಿ ದೇವಸ್ಥಾನ
ಪುತ್ತೂರು ಸವಣೂರಿನ ವಿಷ್ಣುಮೂರ್ತಿ ದೇವಸ್ಥಾನ
ಪುತ್ತೂರು ಬಲ್ಯ ಗ್ರಾಮದ ಉಮಾಮಹೇಶ್ವರಿ ದೇವಸ್ಥಾನ
ಪುತ್ತೂರು ರಾಮಕುಂಜದ ಅನಂತ ಪದ್ಮನಾಭ ದೇವಸ್ಥಾನ
ಪುತ್ತೂರು ನೂಜಿಯ ಉಳ್ಳಾಲ್ತಿ ಅಮ್ಮನವರ ದೇವಸ್ಥಾನ
ಬಂಟ್ವಾಳ ರಾಯಿ ಗ್ರಾಮದ ಮಹಾಲಿಂಗೇಶ್ವರ ದೇವಸ್ಥಾನ
ಮಂಗಳೂರು ಅದ್ಯಪಾಡಿ ಗ್ರಾಮದ ದುರ್ಗಾಪರಮೇಶ್ವರಿ ದೇವಸ್ಥಾನ
ತೋಕೂರು ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ನಡೆದ ಕಳ್ಳತನ ಪ್ರಕರಣಗಳನ್ನು ಬೇಧಿಸಲಾಗಿದೆ. ಆರೋಪಿಗಳಿಂದ ವಶಪಡಿಸಿಕೊಳ್ಳಲಾದ ದೇವಸ್ಥಾನಕ್ಕೆ ಸೇರಿದ ಚಿನ್ನಾಭರಣಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಒಪ್ಪಿಗೆ ಪಡೆದು ಆಯಾಯ ದೇವಸ್ಥಾನಗಳಿಗೆ ಬಿಡುಗಡೆ ಮಾಡಲಾಗುವುದು ಎಂದು ಎಸ್ಪಿ ಭೂಷಣ್ ಜಿ. ಬೊರಸೆ ತಿಳಿಸಿದರು.
ಆರೋಪಿಗಳು ಕಳವು ಮಾಡಿದ ಸೊತ್ತುಗಳನ್ನು ಬೆಳ್ಳಿ ವ್ಯಾಪಾರದಲ್ಲಿ ತೊಡಗಿರುವ ವಿಶಾಲ್ ಮುಂಬೈನಿಗೆ ಮಾರಾಟ ಮಾಡುತ್ತಿದ್ದರು. ಆತ ದೇವಸ್ಥಾನದ ಹಳೆಯ ಸೊತ್ತುಗಳೆಂದು ನಂಬಿಸಿ ಬೇರೆಯವರಿಗೆ ಮಾರಾಟ ಮಾಡಿ ಹಣ ಗಳಿಸಿ ಸಮಾನವಾಗಿ ಹಂಚಿಕೊಳ್ಳುತ್ತಿದ್ದರು ಎಂದು ಅವರು ಹೇಳಿದರು. ಪ್ರಕರಣವನ್ನು ಬೇಧಿಸುವಲ್ಲಿ ಶ್ರಮಿಸಿದ ಅಧಿಕಾರಿ, ಸಿಬ್ಬಂದಿಗಳು ಹಾಗೂ ಹಿರಿಯ ಅಧಿಕಾರಿಗಳನ್ನು ಪ್ರಶಂಸಿಸಿದ ಎಸ್ಪಿ, ಸೂಕ್ತ ನಗದು ಬಹುಮಾನ ನೀಡಿ ಗೌರವಿಸಲಾಗುತ್ತಿದೆ ಎಂದರು.
ಚೋರರಲ್ಲಿ ಒಬ್ಬಾತ ಅಪಘಾತದಲ್ಲಿ ಮೃತ್ಯು!
ಈ ಅಂತಾರಾಜ್ಯ ಚೋರರ ತಂಡದಲ್ಲಿದ್ದ ಇನ್ನೋರ್ವ ಆರೋಪಿ ಪ್ರಕಾಶ್ ಮಂಡ್ಯ ಎಂಬಾತ ಕೆಲ ಸಮಯದ ಹಿಂದೆ ಪುತ್ತೂರು ತಾಲೂಕಿನ ರೆಂಜಿಲಾಡಿ ಗ್ರಾಮದ ನೂಜಿಯ ಉಳ್ಳಾಲ್ತಿ ಅಮ್ಮನವರ ದೇವಸ್ಥಾನದಲ್ಲಿ ಕಳ್ಳತನ ಮಾಡಿ ಹೋಗುತ್ತಿದ್ದಾಗ ಬೆಂಗಳೂರಿನ ನೆಲಮಂಗಲದಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎಂದು ಎಸ್ಪಿ ತಿಳಿಸಿದರು.
ಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ. ವೇದಮೂರ್ತಿ, ಡಿಸಿಐಬಿ ಇನ್ಸ್‌ಪೆಕ್ಟರ್ ಅಮಾನುಲ್ಲಾ ಹಾಗೂ ಇತರ ಹಿರಿಯ ಅಧಿಕಾರಿಗಳು, ಪ್ರಕರಣವನ್ನು ಬೇಧಿಸುವಲ್ಲಿ ಸಹಕರಿಸಿದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಡಿಸಿಐಬಿ ನೇತೃತ್ವದ ವಿಶೇಷ ತಂಡದ ಕಾರ್ಯಾಚರಣೆ
ದೇವಸ್ಥಾನಗಳಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ಗಂಭೀರವಾಗಿ ಪರಿಗಣಿಸಿದ್ದ ದ.ಕ. ಪೊಲೀಸ್ ಇಲಾಖೆ ಡಿಸಿಐಬಿ ಇನ್ಸ್‌ಪೆಕ್ಟರ್ ಅಮಾನುಲ್ಲಾ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿ ಮುಂಬೈ ಪೊಲೀಸರ ಸಹಕಾರದಲ್ಲಿ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಎಸ್ಪಿ ಭೂಷಣ್ ಜಿ. ಬೊರಸೆ ತಿಳಿಸಿದರು.
ಹೈ ಫೈ ಚೋರರು! ಭದ್ರತೆ ಇಲ್ಲದ ದೇವಸ್ಥಾನಗಳೇ ಟಾರ್ಗೆಟ್!
ಜಿಲ್ಲೆಯಲ್ಲಿ ದೇವಸ್ಥಾನ ಕಳ್ಳತನಕ್ಕೆ ಸಂಬಂಧಿಸಿ ಬಂಧಿತ ಚೋರರು ತಾವು ಕಳ್ಳತನ ನಡೆಸುವ ಮೊದಲು ಗೂಗಲ್‌ನಲ್ಲಿ ದೇವಸ್ಥಾನಗಳ ಮಾಹಿತಿಯನ್ನು ಕಲೆ ಹಾಕುತ್ತಿದ್ದರು. ಬಳಿಕ ಆ ದೇವಸ್ಥಾನದ ಭದ್ರತೆಯನ್ನು ಅರಿತುಕೊಂಡು ಕಳ್ಳತನಕ್ಕೆ ಮುಂದಾಗುತ್ತಿದ್ದರು. ಭದ್ರತಾ ಸಿಬ್ಬಂದಿ, ಸಿಸಿ ಕ್ಯಾಮರಾ, ಬರ್ಗ್ಲರ್ ಅಲರಾಂಗಳಿಲ್ಲದ ದೇವಸ್ಥಾನಗಳನ್ನೇ ಟಾರ್ಗೆಟ್ ಮಾಡಿ ಹೊಂಚು ಹಾಕಿ ರಾತ್ರಿ ಹೊತ್ತು ಕನ್ನ ಹಾಕುತ್ತಿದ್ದರು. ಪ್ರಕರಣದ ಪ್ರಮುಖ ಆರೋಪಿ ಚಂದ್ರಕಾಂತ ಪೂಜಾರಿ ಹೊನ್ನಾವರ ತಾಲೂಕಿನ ಮಂಕಿ ನಿವಾಸಿಯಾಗಿದ್ದು, ಈತ ಮುಂಬೈನ ಥಾಣೆಯಲ್ಲಿ ಟೀ ಅಂಗಡಿಯೊಂದನ್ನು ನಡೆಸುತ್ತಿದ್ದ ಎಂದು ಎಸ್ಪಿ ಭೂಷಣ್ ಬೊರಸೆ ತಿಳಿಸಿದರು.
ಮುಂಬೈ ತುಳು ಸಂಘದ ಸಹಕಾರ
ಪ್ರಕರಣವನ್ನು ಬೇಧಿಸುವಲ್ಲಿ ಜಿಲ್ಲೆಯ ಪೊಲೀಸ್ ತಂಡಕ್ಕೆ ಮುಂಬೈನ ತುಳು ಸಂಘದ ಸದಸ್ಯರಾದ ಸುರೇಶ್ ಶೆಟ್ಟಿ, ಗುರುವಾಯನಕೆರೆ, ಶೇಖರ ಶೆಟ್ಟಿ ಪಡಂಗಡಿ, ರಾಜೇಶ್ ಶೆಟ್ಟಿ ಮಣಿಪಾಲ ಮತ್ತು ಕಾರ್ತಿಕ್ ರೈ ಗೋಳಿತೊಟ್ಟು ಸಹಕರಿಸಿದ್ದಾರೆ ಎಂದು ಎಸ್ಪಿ ಭೂಷಣ್ ಜಿ. ಬೊರಸೆ ತಿಳಿಸಿದರು.