ನಡುಪದವು: ಸಚಿವ ಯು.ಟಿ.ಖಾದರ್ ಹುಟ್ಟುಹಬ್ಬ ಪ್ರಯುಕ್ತ ಉಚಿತ ಕನ್ನಡಕ ವಿತರಣೆ

Update: 2016-10-12 15:35 GMT

ಕೊಣಾಜೆ, ಅ.12: ಪ್ರಸಾದ್ ನೇತ್ರಾಲಯ ಉಡುಪಿ ಹಾಗೂ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ನಡುಪದವು ಪಟ್ಟೋರಿ ಇದರ ಆಶ್ರಯದಲ್ಲಿ ಸಚಿವ ಯು.ಟಿ.ಖಾದರ್‌ರ ಹುಟ್ಟು ಹಬ್ಬದ ಪ್ರಯುಕ್ತ ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮ ಬುಧವಾರ ನಡುಪದವಿನ ಪಿ.ಎ.ಕಾಲೇಜು ಸಭಾಂಗಣದಲ್ಲಿ ನಡೆಯಿತು.

ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಮುಡಿಪು ಸೈಂಟ್ ಜೋಸೆಪ್ ಚರ್ಚ್‌ನ ಬೆಂಜಮಿನ್ ಪಿಂಟೊ, ನಾವು ಸಮಾಜಸೇವೆಯೊಂದಿಗೆ ಸಮಾಜದ ಎಲ್ಲಾ ಜನರೊಂದಿಗೆ ಸಹೋದರತೆ ಭಾವನೆಯನ್ನು ಬೆಳೆಸಿಕೊಂಡು ಮುನ್ನಡೆಯಬೇಕು. ಇದರಿಂದ ಸಮಾಜದಲ್ಲಿ ಸಾಮರಸ್ಯದೊಂದಿಗೆ ಎಲ್ಲರೂ ಸೌಹಾರ್ದತೆಯ ಜೀವನವನ್ನು ಸಾಗಿಸಲು ಅನುಕೂಲವಾಗುತ್ತದೆ. ಸಚಿವ ಯು.ಟಿ. ಖಾದರ್ ತಮ್ಮ ಹುಟ್ಟು ಹಬ್ಬವನ್ನು ವಿಜೃಂಭಣೆಯಿಂದ ಆಚರಿಸದೆ ಬಡವರಿಗೆ ಉಚಿತ ಕನ್ನಡಕ ವಿತರಣೆ ಮೂಲಕ ಸರಳವಾಗಿ ಆಚರಿಸಿರುವುದು ಶ್ಲಾಘನೀಯವಾಗಿದ್ದು ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಇಬ್ರಾಹೀಂ ಕೋಡಿಜಾಲ್ ಮಾತನಾಡಿ, ಎಲ್ಲಾ ಧರ್ಮದಲ್ಲಿಯೂ ನಾವೆಲ್ಲಾ ಒಂದಾಗಿ ಬಾಳಬೇಕೆಂಬ ಸಂದೇಶ ಇದೆ. ಅದರಂತೆ ನಾವೆಲ್ಲ ದ್ವೇಷ ಅಸೂಯೆಯನ್ನು ದೂರ ಮಾಡಿ ಸೌಹಾರ್ದತೆಯೊಂದಿಗೆ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಯು.ಟಿ.ಖಾದರ್ ತನ್ನ ಕಿರಿಯ ವಯಸ್ಸಿನಲ್ಲಿಯೇ ಒಳ್ಳೆಯ ಜನಪ್ರತಿನಿಧಿಯಾಗಿ ಸಮಾಜದ ಅಭಿವೃದ್ಧಿಗಾಗಿ ಪಣತೊಟ್ಟಿದ್ದಾರೆ. ಮಾತ್ರವಲ್ಲದೆ ಎಲ್ಲಾ ವರ್ಗದ ಜನರ ಪ್ರೀತಿ ವಿಶ್ವಾಸ ಮಾತ್ರವಲ್ಲದೆ ಎಲ್ಲರ ವಿಶ್ವಾಸವನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಸೇವೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸಚಿವ ಯು.ಟಿ.ಖಾದರ್, ನಾವೆಲ್ಲರೂ ಸಾಮಾಜಿಕ ಬದ್ಧತೆಯೊಂದಿಗೆ ಪರಸ್ಪರ ಪ್ರೀತಿ, ವಿಶ್ವಾಸದೊಂದಿಗೆ ಸಮಾಜದಲ್ಲಿ ಬಡವರ ಕಣ್ಣೀರೊರೆಸುವ ಕೆಲಸದಲ್ಲೂ ತೊಡಗಿಸಿಕೊಂಡರೆ ನಮ್ಮ ಜೀವನದಲ್ಲಿ ಸಾರ್ಥಕತೆಯನ್ನು ಕಾಣಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬರ ಜೀವನದಲ್ಲಿಯೂ ಸಮಸ್ಯೆ ಸಾಮಾನ್ಯವಾಗಿರುತ್ತದೆ ಅದನ್ನು ನಿಭಾಯಿಸಿಕೊಂಡೇ ನಾವು ಸಾಧನೆಯನ್ನು ಮಾಡಬೇಕು ಎಂದು ಹೇಳಿದರು.

ಪಡಿತರ ವಿತರಣೆಗೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರ ಮನೆಗೇ ಪಡಿತರ ವ್ಯವಸ್ಥೆಯನ್ನು ತಲುಪಿಸುವ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಲಾಗುತ್ತಿದೆ. ಜನಸಾಮಾನ್ಯರಿಗೆ ಅನುಕೂಲಕರವಾಗುವ ನಿಟ್ಟಿನಲ್ಲಿ ರೇಷನ್ ಕಾರ್ಡ್ ಹಾಗೂ ಪಡಿತರ ವ್ಯವಸ್ಥೆಯನ್ನು ರೂಪಿಸಲಾಗುವುದು ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ಇಬ್ರಾಹಿಂ ನಡುಪದವು ವಹಿಸಿದ್ದರು. ಕಾರ್ಯಕ್ರಮದಲ್ಲಿ ವೌಲನಾ ಅಬ್ದುಲ್ ಅಝೀಝ್ ಪೈಝಿ ಪಟ್ಟೋರಿ ಪ್ರಾರ್ಥನೆಯನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಗಟ್ಟಿ, ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ್ ಕರ್ಕೇರ, ಉಳ್ಳಾಲ ಸಯ್ಯದ್ ಮದನಿ ಟ್ರಸ್ಟ್ ಅಧ್ಯಕ್ಷ ರಶೀದ್ ಹಾಜಿ, ಇನ್ಫೋಸಿಸ್‌ನ ಧೀರಜ್, ಬಂಟ್ವಾಳ ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಅಲಿ, ಕಾಂಗ್ರೆಸ್ ಮುಖಂಡರಾದ ಪದ್ಮನಾಭ ನರಿಂಗಾನ, ಪ್ರಶಾಂತ್ ಕಾಜವ, ದೇವದಾಸ ಭಂಡಾರಿ, ಉಮರ್ ಪಜೀರ್, ಅಮೀರ್ ಅಹ್ಮದ್ ತುಂಬೆ, ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಶೌಕತ್ ಅಲಿ, ನರಿಂಗಾನ ಪಂಚಾಯತ್ ಅಧ್ಯಕ್ಷ ಇಸ್ಮಾಯೀಲ್ ಮೀನಂಕೋಡಿ, ಪಜೀರು ಪಂಚಾಯತ್ ಅಧ್ಯಕ್ಷ ಸೀತಾರಾಂ ಶೆಟ್ಟಿ, ನಡುಪದವು ಜಮಾಅತ್ ಅಧ್ಯಕ್ಷ ಪಿ.ಎಂ.ಕುಂಞಿ, ಖಾದಿ ಬೋರ್ಡ್ ಅಧ್ಯಕ್ಷ ಅಬ್ಬಾಸ್ ಹಾಜಿ ಸಜಿಪ, ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷ ಅಬೂಬಕರ್ ಸಜಿಪ, ಸಿದ್ದೀಕ್ ಪಾರೆ, ತಾ.ಪಂ.ಸದಸ್ಯ ಹೈದರ್ ಕೈರಂಗಳ, ಜಬ್ಬಾರ್ ಬೋಳಿಯಾರ್, ಪಂಚಾಯತ್ ಸದಸ್ಯರಾದ ನಂದರಾಜ್ ಶೆಟ್ಟಿ, ಲಿಡಿಯಾ ಡಿಸೋಲ, ಅನಿತಾ ಡಿಸೋಜ, ಚಂದ್ರ, ಮುರಳೀಧರ ಶೆಟ್ಟಿ, ಹಾಜಿ.ಕೆ.ಕೆ.ನಾಸೀರ್, ಹಾಜಿ ಎ.ಎಚ್.ಖಾದರ್, ಸುಲೈಮಾನ್ ಹಾಜಿ, ಇಸ್ಮಾಯೀಲ್ ಹಾಜಿ ಮೂಲೆ ಮುಂತಾದವರು ಭಾಗವಹಿಸಿದ್ದರು.

ಪಂಚಾಯತ್ ಸದಸ್ಯ ಎನ್.ಎಸ್.ನಾಸೀರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಬ್ದುಲ್ ಜಲೀಲ್ ಮೋಂಟುಗೋಳಿ ಕಾರ್ಯಕ್ರಮ ನಿರೂಪಿಸಿದರು. ಸಿ.ಎಂ.ಶರೀಫ್ ಪಟ್ಟೋರಿ ಸ್ವಾಗತಿಸಿ, ನಝರ್ ಷಾ ಪಟ್ಟೋರಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News