ವಾರ್ಡನ್ ಇಲ್ಲ-ಭದ್ರತೆಯಂತೂ ಇಲ್ಲವೇ ಇಲ್ಲ!
ಮಂಗಳೂರು, ಅ.13: ಮುರಿದ ಬಾಗಿಲುಗಳು, ತೆರೆದ ಕಿಟಕಿಗಳು, ಸುಮಾರು 150ರಷ್ಟು ಹೆಣ್ಣುಮಕ್ಕಳು ತಂಗುವ ನಾಲ್ಕು ಅಂತಸ್ತಿನ ಈ ಹಾಸ್ಟೆಲ್ ಕಟ್ಟಡದಲ್ಲಿ ಭದ್ರತಾ ಸಿಬ್ಬಂದಿ ಬಿಡಿ, ಕನಿಷ್ಠ ಮಹಿಳಾ ವಾರ್ಡನ್ ವ್ಯವಸ್ಥೆಯೂ ಇಲ್ಲ್ಲ. ಇದು ದ.ಕ. ಜಿಲ್ಲಾಸ್ಪತ್ರೆಯಾಗಿರುವ, ರಾಜ್ಯದ ವಿವಿಧ ಜಿಲ್ಲೆಗಳ ಬಡರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೆನ್ಲಾಕ್ ಆಸ್ಪತ್ರೆಯ ಅಧೀನದ ಸರಕಾರಿ ಶುಶ್ರೂಷಾ ಶಾಲೆ (ನರ್ಸಿಂಗ್ ಸ್ಕೂಲ್)ಯ ವಿದ್ಯಾರ್ಥಿನಿಯರ ವಸತಿ ನಿಲಯದ ದುಃಸ್ಥಿತಿ.
ನಾಲ್ಕು ವರ್ಷಗಳ ನರ್ಸಿಂಗ್ ತರಬೇತಿಗಾಗಿ ರಾಜ್ಯದ ವಿವಿಧ ಜಿಲ್ಲೆಗಳ ಬಡ ವಿದ್ಯಾರ್ಥಿನಿಯರು ಈ ಹಾಸ್ಟೆಲ್‌ನಲ್ಲಿ ವಾಸ್ತವ್ಯವಿದ್ದಾರೆ. ಆಸ್ಪತ್ರೆಯ ವೈದ್ಯಾಧಿಕಾರಿ ಕಚೇರಿ ಕಟ್ಟಡದ ಎಡಪಾರ್ಶ್ವದಲ್ಲಿ ರುವ ಹಳೆಯ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಹಾಸ್ಟೆಲ್‌ನ ಹಿಂಬಾಗಿಲುಗಳು ಮುರಿದು ಶಿಥಿಲಾವಸ್ಥೆಯಲ್ಲಿದೆ.
ಅಲ್ಲಲ್ಲಿ ಮುರಿದು ತೂತುಬಿದ್ದಿರುವ ಹಿಂಬಾಗಿಲುಗಳಿಗೆ ವಿದ್ಯಾರ್ಥಿನಿಯರ ಹಿತದೃಷ್ಟಿ ಯಿಂದ ಬೀಗವೇನೋ ಹಾಕಲಾಗಿದೆ. ಆದರೆ ಆ ಬೀಗ ಮಾತ್ರ ನಾಮಕಾವಸ್ತೆ. ಮೂರು ಮಹಡಿಗಳಲ್ಲಿನ ಆವರಣದ ಕಿಟಕಿಗಳ ಕಬ್ಬಿಣದ ಸರಳುಗಳು ಮುರಿದು ಹೋಗಿರುವುದರಿಂದ ಇಲ್ಲಿರುವ ವಿದ್ಯಾರ್ಥಿನಿಯರ ಸುರಕ್ಷತೆ ಪ್ರಶ್ನಾರ್ಹವಾಗಿದೆ. ವೆನ್ಲಾಕ್ ಆಸ್ಪತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ರಾಜ್ಯದ ವಿವಿಧೆಡೆಗಳಿಂದ ರೋಗಿಗಳು ಚಿಕಿತ್ಸೆ ಪಡೆಯುತ್ತಾರೆ. ರೋಗಿಗಳ ಜತೆ ಇರುವವರು, ಅವರನ್ನು ನೋಡಲು ಬರುವವರು, ಹೊರರೋಗಿಗಳಾಗಿ ಆಸ್ಪತ್ರೆಗೆ ಆಗಮಿಸುವವರು ರಾತ್ರಿ-ಹಗಲೆನ್ನದೆ ಈ ಹಾಸ್ಟೆಲ್‌ನ ಸುತ್ತಮುತ್ತ ಓಡಾಡುತ್ತಿರುತ್ತಾರೆ.
ಅದಲ್ಲದೆ, ವೆನ್ಲಾಕ್ ಆಸ್ಪತ್ರೆಯ ಆವರಣ ಭಿಕ್ಷುಕರು, ಅಲೆಮಾರಿಗಳ ತಾಣವಾಗಿರುವುದು ವಾಸ್ತವ. ಹಗಲು ಹೊತ್ತಿನಲ್ಲೇ ಹಾಸ್ಟೆಲ್‌ನ ಶಿಥಿಲಾವಸ್ಥೆಯಲ್ಲಿರುವ ಬಾಗಿಲಿನ ಬಳಿ ಅಪರಿಚಿತರು ಮಲಗಿರುವುದನ್ನು ಕಾಣಬಹುದು. ಇಂತಹ ಅವ್ಯವಸ್ಥೆಯ ಆಗರವಾಗಿರುವ ಹಾಸ್ಟೆಲ್‌ನಲ್ಲಿ ರಾತ್ರಿ ವಾರ್ಡನ್ ಇಲ್ಲದೆ, ಭದ್ರತಾ ಸಿಬ್ಬಂದಿಯೂ ಇಲ್ಲದೆ ಇಲ್ಲಿನ ವಿದ್ಯಾರ್ಥಿನಿಯರ ಭದ್ರತೆಯನ್ನುಊಹಿಸಬಹುದಾಗಿದೆ. ಕಲಿಯಲು ಬಂದವರು ಅಡುಗೆ ಮಾಡಬೇಕಾದ ಪರಿಸ್ಥಿತಿ!
ಈ ಹಾಸ್ಟೆಲ್‌ನಲ್ಲಿ ಭದ್ರತಾ ವ್ಯವಸ್ಥೆ ಇಲ್ಲದಿರುವುದು ಒಂದೆಡೆ ಯಾದರೆ, ಇಲ್ಲಿ 134 ವಿದ್ಯಾರ್ಥಿಗಳ ಜತೆ ವೆನ್ಲಾಕ್ ಆಸ್ಪತ್ರೆಯ ಸುಮಾರು 50ರಷ್ಟು ಎಎನ್‌ಎಂಗಳಿಗೂ ಊಟದ ವ್ಯವಸ್ಥೆ ಈ ಹಾಸ್ಟೆಲ್‌ನಿಂದಲೇ. ವಿಪರ್ಯಾಸವೆಂದರೆ, ಇಷ್ಟು ಮಂದಿಗೆ ಅಡುಗೆ ಮಾಡಲು ಇಲ್ಲಿ ಹಗಲು ಹೊತ್ತಿಗೆ ಒಬ್ಬರು, ರಾತ್ರಿಗೆ ಒಬ್ಬರು ಮಾತ್ರ ಇದ್ದಾರೆ. ಇಲ್ಲಿ ಶುಕ್ರವಾರ ಮತ್ತು ಬುಧವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಮಧ್ಯಾಹ್ನದ ಊಟಕ್ಕೆ ಮೀನುಸಾರು ಮಾಡಲಾಗುತ್ತದೆ. ಶುಕ್ರವಾರ ಬೇಯಿಸಿದ ಮೊಟ್ಟೆ ನೀಡಿದರೆ, ಬುಧವಾರ ಕೋಳಿ ಸಾರು ಮಾಡಲಾಗುತ್ತದೆ. ಒಬ್ಬ ಅಡುಗೆಯ ಮಹಿಳೆಯಿಂದ ಇದನ್ನೆಲ್ಲಾ ಮಾಡಲು ಸಾಧ್ಯವೇ ಇಲ್ಲ. ಅಡುಗೆ ಮಹಿಳೆಯ ಈ ಕಷ್ಟ ನೋಡಿ, ನರ್ಸಿಂಗ್ ಸ್ಕೂಲ್‌ನ ಕೆಲವು ವಿದ್ಯಾರ್ಥಿನಿಯರೇ ಅಡುಗೆ ಮಾಡುವಂತಹ ಪರಿಸ್ಥಿತಿ ಇಲ್ಲಿನದು. ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಬಳಿಕದ 3 ವರ್ಷಗಳ ವಿದ್ಯಾರ್ಥಿನಿಯರು ನರ್ಸಿಂಗ್ ಸ್ಕೂಲ್‌ನಲ್ಲಿ ಅಧ್ಯಯನದ ಜತೆ ಆಸ್ಪತ್ರೆಯಲ್ಲಿ ಪ್ರಾಯೋಗಿಕ ತರಬೇತಿಯ ಹಿನ್ನೆಲೆಯಲ್ಲಿ ರೋಗಿಗಳ ಶುಶ್ರೂಷೆಯನ್ನೂ ನಿರ್ವಹಿಸಬೇಕಾಗುತ್ತದೆ. ಅದರ ಜತೆ ಅಡುಗೆ ಕೆಲಸದಲ್ಲೂ ಕೈ ಜೋಡಿಸಬೇಕಾದ ಅಸಹಾಯಕ ಪರಿಸ್ಥಿತಿಯಿದೆ.
134 ವಿದ್ಯಾರ್ಥಿಗಳಿಗೆ 5 ಮಂದಿ ಬೋಧಕರು!
ಬೋಧನಾ ಕೊಠಡಿಗಳು ಸೇರಿದಂತೆ ನರ್ಸಿಂಗ್ ಸ್ಕೂಲ್‌ನ ನವೀಕೃತ ಕಟ್ಟಡದ ವ್ಯವಸ್ಥೆಯೇನೋ ಉತ್ತಮವಾಗಿದೆ. ನರ್ಸಿಂಗ್ ಕಾಲೇಜಿಗೆ ಅಗತ್ಯವಾದ ಪ್ರಯೋಗಾಲಯಗಳ ವ್ಯವಸ್ಥೆಯೂ ಇದೆ. ಆದರೆ ನಾಲ್ಕು ವರ್ಷಗಳ ನರ್ಸಿಂಗ್ ವಿದ್ಯಾಭ್ಯಾಸ ಪಡೆಯುವ 134 ವಿದ್ಯಾರ್ಥಿನಿಯರಿಗೆ ಇಲ್ಲಿರುವ ಬೋಧಕರ ಸಂಖ್ಯೆ 5 (ಪ್ರಾಂಶುಪಾಲರು ಸೇರಿ). ಕಿರಿಯ ಹಿರಿಯ ಸೇರಿದಂತೆ ನಾಲ್ಕು ವರ್ಷದ ನರ್ಸಿಂಗ್ ವಿದ್ಯಾರ್ಥಿನಿಯರಿಗೆ 17 ವಿಷಯಗಳ ಬೋಧನೆಯನ್ನು ಈ ಐದು ಮಂದಿಯೇ ನಿರ್ವಹಿಸುತ್ತಾರೆ. ಅದರಲ್ಲೂ ಈ ಐದು ಮಂದಿಯಲ್ಲಿ ಪ್ರಾಂಶುಪಾಲರು ಮಾತ್ರವೇ ಅಧಿಕೃತ ನರ್ಸಿಂಗ್ ಬೋಧಕಿ. ಉಳಿದಂತೆ ನಾಲ್ವರು ಬೋಧಕರು ಕೂಡಾ ನರ್ಸಿಂಗ್ ಸೇವೆಯಲ್ಲಿದ್ದು ಭಡ್ತಿಯ ಆಧಾರದಲ್ಲಿ ಬೋಧಕರಾಗಿ ನಿಯೋಜಿಸಲ್ಪಟ್ಟವರು. ಭಾರತೀಯ ನರ್ಸಿಂಗ್ ಕೌನ್ಸಿಲ್ (ಐಎನ್‌ಸಿಒ)ನ ನಿಯಮದ ಪ್ರಕಾರ 10 ವಿದ್ಯಾರ್ಥಿಗಳಿಗೆ ಒಬ್ಬರಂತೆ ಬೋಧಕರಿರಬೇಕು. ಅದರ ಪ್ರಕಾರ ಈ ನರ್ಸಿಂಗ್ ಸ್ಕೂಲ್‌ನಲ್ಲಿ ಕನಿಷ್ಠ 15 ಮಂದಿಯಾದರೂ ಬೋಧಕರ ಅಗತ್ಯವಿದೆ. ಆದರೆ, ಇರುವುದು ಮಾತ್ರ ಐದು ಮಂದಿ. ತುರ್ತು ಕಾರಣಗಳಿಂದ ಒಂದಿಬ್ಬರು ರಜೆಯಲ್ಲಿದ್ದರೆ ಬೋಧ ನೆಯ ಅವ್ಯವಸ್ಥೆಯ ಕುರಿತು ವಿವರಿಸ ಬೇಕಾಗಿಲ್ಲ. ಹಲವು ವರ್ಷಗಳಷ್ಟು ಹಳೆಯದಾದ ಈ ನರ್ಸಿಂಗ್ ಸ್ಕೂಲ್ (ಹಿಂದೆ ವೆನ್ಲಾಕ್ ಆಸ್ಪತ್ರೆಯ ಒಪಿಡಿಯ ಎರಡು ಕೊಠಡಿಗಳಲ್ಲಿ ನಡೆಸಲ್ಪಡುತ್ತಿತ್ತು.) ಇದೀಗ ಫೆಬ್ರವರಿಯಿಂದ ಹಾಸ್ಟೆಲ್ ಪಕ್ಕದ, ಆಸ್ಪತ್ರೆ ಆವರಣದ ನವೀಕೃತ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ.
ಹಗಲು ಹೊತ್ತಿನಲ್ಲಿ ನಾವು ಬೋಧನೆಯ ಜತೆಗೆ ವಿದ್ಯಾರ್ಥಿನಿಯರ ಸುರಕ್ಷತೆಯ ಕುರಿತಂತೆಯೂ ಗಮನ ಹರಿಸುತ್ತೇವೆ. ಆದರೆ ನಾವೂ ಕುಟುಂಬಸ್ಥರಾಗಿದ್ದು, ನಮ್ಮ ಮನೆಗಳು ಕೂಡಾ ನಗರದ ವಿವಿಧ ಕಡೆಗಳಲ್ಲಿ ಇರುವುದರಿಂದ ರಾತ್ರಿ ಹೊತ್ತು ಇಲ್ಲೇ ವಾಸ್ತವ್ಯವಿರುತ್ತೇವೆ. ಬೋಧನೆಯ ಜತೆ ಹೆಚ್ಚುವರಿಯಾಗಿ ವಿದ್ಯಾರ್ಥಿನಿಯರ ಸುರಕ್ಷತೆ ಯನ್ನೂ ನೋಡಿಕೊಳ್ಳುವುದು ಅಸಾಧ್ಯ ಎಂದು ಹೆಸರು ಹೇಳಲಿಚ್ಚಿಸದ ನರ್ಸಿಂಗ್ ಸ್ಕೂಲ್ ಬೋಧಕರೊಬ್ಬರು ಅಭಿಪ್ರಾಯಿಸಿದ್ದಾರೆ.
ಹಾಸ್ಟೆಲ್, ನರ್ಸಿಂಗ್ ಸ್ಕೂಲ್ ಸ್ವಚ್ಛತೆಗೆ ಇಬ್ಬರು ಸಿಬ್ಬಂದಿ!
ನಾಲ್ಕು ಮಹಡಿಗಳ ಹಾಸ್ಟೆಲ್ ಹಾಗೂ ನರ್ಸಿಂಗ್ ಸ್ಕೂಲ್‌ನ್ನು ಗುಡಿಸುವುದು, ಒರೆಸುವುದಕ್ಕಾಗಿ ಇರುವುದು ತಲಾ ಒಬ್ಬರಂತೆ ಇಬ್ಬರು ಮಹಿಳಾ ಸ್ವಚ್ಛತಾ ಸಿಬ್ಬಂದಿ. ಅವರು ಕೂಡಾ ಗುತ್ತಿಗೆಯಾಧಾರದಲ್ಲಿ ನಿಯೋಜಿಸಲ್ಪಟ್ಟವರಾಗಿದ್ದು, ಅವರಿಗೆ ಸಿಗುವ ವೇತನ ತಿಂಗಳಿಗೆ 5,700 ರೂ. ನಗರದ ಹೊರವಲಯದಿಂದ ಕೆಲಸಕ್ಕೆ ಬರುವ ಅವರು ಬಸ್‌ನ ವೆಚ್ಚವನ್ನೂ ತಮ್ಮ ವೇತನದಲ್ಲೇ ಭರಿಸಬೇಕಾಗಿದೆ.
9 ತಿಂಗಳಿನಿಂದ ಸಿಕ್ಕಿಲ್ಲ ಶಿಷ್ಯವೇತನ!
ವೆನ್ಲಾಕ್‌ನ ನರ್ಸಿಂಗ್ ಸ್ಕೂಲ್‌ನಲ್ಲಿ ಶಿವಮೊಗ್ಗ, ದಾವಣಗೆರೆ, ಕಲಬುರಗಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ವಿದ್ಯಾರ್ಥಿನಿಯರು ಕಲಿಯುತ್ತಿದ್ದಾರೆ. ವಿದ್ಯಾರ್ಥಿನಿಯರಿಗೆ ಮಾಸಿಕ 1,000 ರೂ. ಶಿಷ್ಯವೇತನ ನೀಡಲಾಗುತ್ತಿದ್ದು, ಅಕ್ಟೋಬರ್‌ನಿಂದ ಈ ಮೊತ್ತವನ್ನು ಸರಕಾರ 1,500 ರೂ.ಗೆ ಏರಿಕೆ ಮಾಡಿದೆ. ಆದರೆ, ಇಲ್ಲಿನ ವಿದ್ಯಾರ್ಥಿಗಳಿಗೆ ಒಂಬತ್ತು ತಿಂಗಳಿನಿಂದ ಶಿಷ್ಯವೇತನ ಬಿಡುಗಡೆಯಾಗಿಲ್ಲ. ಹಾಗಾಗಿ ವಿದ್ಯಾರ್ಥಿಗಳು ತಮ್ಮ ಊಟ, ಇತರ ಖರ್ಚು ವೆಚ್ಚವನ್ನು ಮನೆಯವರಿಂದಲೇ ತರಿಸಿ ಭರಿಸಬೇಕಾಗಿದೆ. ತೀರಾ ಬಡಕುಟುಂಬದ ವಿದ್ಯಾರ್ಥಿನಿಯರಿಗೆ ಈ ಹಣವನ್ನು ಹೊಂದಿಸಿಕೊಡುವುದು ಅಸಾಧ್ಯವಾದ ಮಾತಾಗಿದೆ. ಹುಲ್ಲು ತೆಗೆಯಲು, ಶೌಚಾಲಯ ಬ್ಲಾಕ್ ಆದಲ್ಲಿ, ಸೋರಿಕೆಯಾದಲ್ಲಿ, ನೀರಿನ ಅಕ್ವಾ ಗಾರ್ಡ್ ಹಾಳಾದಲ್ಲಿ ವಿದ್ಯಾರ್ಥಿನಿಯರೇ ಹಣ ಸಂಗ್ರಹಿಸಿ ದುರಸ್ತಿ ಮಾಡಬೇಕಾದ ದುಃಸ್ಥಿತಿ ಈ ಹಾಸ್ಟೆಲ್‌ನದ್ದು.
ಪಾಳುಬಿದ್ದ ಕೊಠಡಿಗಳಲ್ಲಿ ದಾಖಲೆ ಪತ್ರಗಳು!
ಹಾಸ್ಟೆಲ್‌ನ ತಳಮಹಡಿಯ ಅಡುಗೆ ಕೋಣೆ ಸಮೀಪದ ಕೆಲ ಕೊಠಡಿಗಳು ಪಾಳುಬಿದ್ದಿವೆ. ಆ ಕೊಠಡಿಗಳಲ್ಲಿ ಆಸ್ಪತ್ರೆಯ ದಾಖಲೆ ಪತ್ರಗಳನ್ನು ಗೋಣಿಗಳಲ್ಲಿ ತುಂಬಿಸಿಡಲಾಗಿದೆ. ಆ ಪಾಳುಬಿದ್ದ ಕೊಠಡಿಗಳ ಹೊರಗಡೆ ತುಕ್ಕು ಹಿಡಿದ ಕಪಾಟು ಗಳಿದ್ದು ಅದರಲ್ಲಿಯೂ ದಾಖಲೆ ಪತ್ರಗಳನ್ನು ಇರಿಸಲಾಗಿದೆ.