ಅಂಧತ್ವ ರಹಿತ ಜಿಲ್ಲೆಯನ್ನು ಸೃಷ್ಟಿಸಿ: ಡಾ.ಭಟ್

Update: 2016-10-14 13:53 GMT

ಮಣಿಪಾಲ, ಅ.14: ಮಣಿಪಾಲ ವಿವಿಯ ಕಣ್ಣಿನ ತಜ್ಞ ವೈದ್ಯರುಗಳು ತಮ್ಮ ಸತತ ಪ್ರಯತ್ನಗಳಿಂದ ಉಡುಪಿ ಜಿಲ್ಲೆಯನ್ನು ಅಂಧತ್ವ ರಹಿತರ ಜಿಲ್ಲೆಯನ್ನಾಗಿ ಮಾಡಬೇಕೆಂದು ಮಣಿಪಾಲ ವಿವಿಯ ಕುಲಪತಿ ಡಾ.ವಿನೋದ್ ಭಟ್ ಕರೆ ನೀಡಿದ್ದಾರೆ.

ಮಣಿಪಾಲ ಸ್ಕೂಲ್ ಆಫ್ ಅಲೈಡ್ ಹೆಲ್ತ್ ಸಾಯನ್ಸ್‌ನ ದೃಷ್ಟಿ ಮಾಪಕ ಶಾಸ್ತ್ರ ವಿಭಾಗ ಗುರುವಾರ ವಿಶ್ವ ದೃಷ್ಠಿ ದಿನದ ಅಂಗವಾಗಿ ಇಲ್ಲಿ ಮಣಿಪಾಲ ಭಾರತೀಯ ಸ್ಟೇಟ್ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ಅಳವಡಿಸಿದ ಸೆಲ್ಫ್ ವಿಶನ್ ಸ್ಕೃಿನೀಂಗ್ ಚಾರ್ಟ್‌ನ್ನು ಅನಾವರಣಗೊಳಿಸಿ ಅವರು ಮಾತನಾಡುತಿದ್ದರು.
ಇದಕ್ಕಾಗಿ ತಜ್ಞರು ಸುಸ್ಥಿರವಾದ ಮಾದರಿಯೊಂದನ್ನು ಸಿದ್ಧಪಡಿಸಬೇಕೆಂದು ಹೇಳಿದ ಡಾ.ವಿನೋದ್ ಭಟ್, ಉಡುಪಿ ಜಿಲ್ಲೆಯನ್ನು ಅಂಧರಿಲ್ಲದ ಜಿಲ್ಲೆಯನ್ನಾಗಿ ಮಾಡಬೇಕಾಗಿದೆ ಎಂದರು.

ವಿಶ್ವ ದೃಷ್ಟಿ ದಿನಾಚರಣೆಯ ಪ್ರಯುಕ್ತ 1000 ಮಂದಿ ಭಾಗವಹಿಸಿದ್ದ ನೇತ್ರ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಕಣ್ಣಿನ ಜಾಗೃತಿ ಕುರಿತಂತೆ ಭಿತ್ತಿಚಿತ್ರಗಳನ್ನು ಪ್ರದರ್ಶಿಸಲಾಯಿತು. ಅಂಧರಿಗೆ ಅವರ ಚಟುವಟಿಕೆಗಳನ್ನು ಮಾಡಿಕೊಳ್ಳಲು ತರಬೇತಿಯನ್ನು ಸಹ ನೀಡಲಾಯಿತು.

ಕಾರ್ಯಕ್ರಮದಲ್ಲಿ ಕೆಎಂಸಿಯ ಡೀನ್ ಡಾ.ಪೂರ್ಣಿಮಾ ಬಾಳಿಗಾ, ನೇತ್ರ ವಿಭಾಗದ ಮುಖ್ಯಸ್ಥ ಡಾ.ಕೃಷ್ಣ ರಾವ್, ಸ್ಕೂಲ್ ಆಫ್ ಅಲೈಡ್ ಹೆಲ್ತ್ ಸಾಯನ್ಸ್‌ನ ಡೀನ್ ಡಾ.ರಾಜಶೇಖರ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News