ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

Update: 2016-10-17 15:47 GMT

ಉಡುಪಿ, ಅ.17: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ರಾಜೇಶ್ವರಿ ಶೆಟ್ಟಿ, ನವನೀತ್ ಶೆಟ್ಟಿ, ನಿರಂಜನ್ ಭಟ್ ನ್ಯಾಯಾಂಗ ಬಂಧನ ಅವಧಿಯನ್ನು ಮತ್ತೆ 14 ದಿನಗಳ ಕಾಲ ವಿಸ್ತರಿಸಿ ಉಡುಪಿ ನ್ಯಾಯಾಲಯ ಇಂದು ಆದೇಶ ನೀಡಿದೆ.

ಮಂಗಳೂರು ಜೈಲಿನಲ್ಲಿದ್ದ ಮೂವರು ಆರೋಪಿಗಳನ್ನು ಬೆಳಗ್ಗೆ ಉಡುಪಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಮತ್ತು ಹೆಚ್ಚುವರಿ ಮುಖ್ಯನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಧೀಶ ರಾಜೇಶ್ ಕರ್ಣಂ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಧೀಶರು ಎಲ್ಲ ಆರೋಪಿಗಳ ನ್ಯಾಯಾಂಗ ಬಂಧನ ಅವಧಿಯನ್ನು ನ.2ರವರೆಗೆ ವಿಸ್ತರಿಸಿ ಆದೇಶಿಸಿದರು.

ಈ ಸಂದರ್ಭದಲ್ಲಿ ಹಿರಿಯ ಸಹಾಯಕ ಸರಕಾರಿ ಅಭಿಯೋಜಕ ಪ್ರವೀಣ್ ಕುಮಾರ್ ಹಾಜರಿದ್ದರು. ಬಳಿಕ ಆರೋಪಿಗಳನ್ನು ಬಿಗಿ ಭದ್ರತೆಯಲ್ಲಿ ಜೈಲಿಗೆ ಕರೆದೊಯ್ಯಲಾಯಿತು. ಈ ಪ್ರಕರಣದ ಸಾಕ್ಷನಾಶ ಆರೋಪಿಗಳಾದ ಶ್ರೀನಿವಾಸ ಭಟ್ ಹಾಗೂ ರಾಘವೇಂದ್ರ ಅವರಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಈಗಾಗಲೇ ಜಾಮೀನು ಮಂಜೂರು ಮಾಡಿದೆ.

ಇಂಟರ್‌ನೆಟ್ ಪ್ರತಿ ಸಲ್ಲಿಕೆ: ಪ್ರಕರಣದ ಪ್ರಮುಖ ಆರೋಪಿ ರಾಜೇಶ್ವರಿ ಶೆಟ್ಟಿಯನ್ನು ಸಿಐಡಿಗೆ ಕಸ್ಟಡಿಗೆ ಒಪ್ಪಿಸಬಾರದೆಂಬ ಹೈಕೋರ್ಟ್ ಆದೇಶದ ಇಂಟರ್‌ನೆಟ್ ಪ್ರತಿಯನ್ನು ಆರೋಪಿ ಪರ ವಕೀಲರು ಇಂದು ಕೂಡ ಉಡುಪಿ ನ್ಯಾಯಾಲಯಕ್ಕೆ ಸಲ್ಲಿಸಿದರು. ಆದೇಶದ ಧೃಡೀಕೃತ ಪ್ರತಿ ಇನ್ನೂ ಕೈಸೇರದ ಹಿನ್ನೆಲೆಯಲ್ಲಿ ಮುಂದೆ ಸಲ್ಲಿಸ ಲಾಗುವುದು ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು. ಆದುದರಿಂದ ಈ ಸಂಬಂಧ ನಡೆಯುತ್ತಿರುವ ವಿಚಾರಣೆಯನ್ನು ನ್ಯಾಯಾಧೀಶರು ನ.2ಕ್ಕೆ ಮುಂದೂಡಿದರು.

ಪ್ರಕರಣದ ಆರೋಪಿಗಳನ್ನು ಆ.7ರಂದು ಬಂಧಿಸಿರುವುದರಿಂದ ನ.7 (90ದಿನಗಳು)ರ ಒಳಗೆ ಸಿಐಡಿ ಪೊಲೀಸರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಬೇಕಾಗಿದೆ. ಆದರೆ ಪ್ರಕರಣದ ಪ್ರಮುಖ ಸಾಕ್ಷ ಎನಿಸಿರುವ ಡಿಎನ್‌ಎ ವರದಿ ಇನ್ನೂ ಕೂಡ ಸಿಐಡಿ ಪೊಲೀಸರಿಗೆ ದೊರೆತಿಲ್ಲ. ಇದರಿಂದ ಆರೋಪ ಪಟ್ಟಿ ಸಲ್ಲಿಸಲು ಕೂಡ ತೊಡಕು ಆಗಿದೆ.

ರಾಜೇಶ್ವರಿ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ ಪ್ರಕರಣದ ಪ್ರಮುಖ ಆರೋಪಿ ರಾಜೇಶ್ವರಿ ಶೆಟ್ಟಿಗೆ ಜಾಮೀನು ವಿಚಾರಣೆ ಯನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಅ.26ಕ್ಕೆ ಮುಂದೂಡಿ ಆದೇಶ ನೀಡಿದೆ. ಆರೋಪಿ ಪರ ವಕೀಲ ಅರುಣ್ ಬಂಗೇರ ಜಾಮೀನು ಅರ್ಜಿಯನ್ನು ಅ.4ರಂದು ಸಲ್ಲಿಸಿದ್ದು, ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಸರಕಾರಿ ಅಭಿಯೋಜಕಿ ಶಾಂತಿ ಬಾಯಿ ಅವಕಾಶ ಕೋರಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಅ.17ಕ್ಕೆ ಮುಂದೂಡಲಾಗಿತ್ತು. ಸಿಐಡಿ ವರದಿ ಕೈಸೇರದ ಹಿನ್ನೆಲೆಯಲ್ಲಿ ಆಕ್ಷೇಪಣೆ ಸಲ್ಲಿಸಲು ಮತ್ತೆ 10 ದಿನಗಳ ಕಾಲಾವಕಾಶ ನೀಡುವಂತೆ ಶಾಂತಿಬಾಯಿ ಇಂದು ನಡೆದ ವಿಚಾರಣೆ ಸಂದರ್ಭ ನ್ಯಾಯಾಧೀಶರಲ್ಲಿ ಮನವಿ ಮಾಡಿದರು. ಅದರಂತೆ ವಿಚಾರಣೆಯನ್ನು ಮುಂದೂಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News