ಅ.28ರಂದು ಆಳ್ವಾಸ್‌ನಲ್ಲಿ ಅಖಿಲ ಭಾರತ ವಿ.ವಿ. ಕ್ರಾಸ್‌ಕಂಟ್ರಿ ರೇಸ್

Update: 2016-10-18 12:01 GMT

ಮೂಡುಬಿದಿರೆ, ಅ.18: ರಾಜೀವ್‌ಗಾಂಧಿ ಆರೋಗ್ಯ ವಿ.ವಿ.ಬೆಂಗಳೂರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಇವುಗಳ ಸಂಯುಕ್ತ ಆಶ್ರಯದಲ್ಲಿ ಅ.28ರಂದು ಮೂಡುಬಿದಿರೆಯಲ್ಲಿ ಅಖಿಲ ಭಾರತ ಅಂತರ್ ವಿ.ವಿ. ಪುರುಷರ ಹಾಗೂ ಮಹಿಳೆಯರ ವಿಭಾಗದ ಕಾಸ್‌ಕಂಟ್ರಿ ರೇಸ್ ಚಾಂಪಿಯನ್‌ಶಿಪ್ ನಡೆಯಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ.

ಮಂಗಳವಾರ ತನ್ನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ಭಾರತೀಯ ವಿ.ವಿ.ಗಳ ನಿರ್ದೇಶನದಲ್ಲಿ ನಡೆಯಲಿರುವ ಈ ಚಾಂಪಿಯನ್‌ಶಿಪ್‌ನಲ್ಲಿ ರಾಷ್ಟ್ರದ ಸುಮಾರು 180 ವಿ.ವಿಗಳಿಂದ ಒಟ್ಟು 3,000 ಮಂದಿ ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆಯಿದ್ದು, ಈಗಾಗಲೇ ಈ ಎಲ್ಲಾ ವಿ.ವಿ. ಗಳು ತಮ್ಮ ಅಧಿಕೃತ ಪ್ರವೇಶವನ್ನು ಖಾತರಿಪಡಿಸಿರುತ್ತಾರೆ ಎಂದು ಹೇಳಿದರು.

ಪುರುಷರ ವಿಭಾಗದಲ್ಲಿ 12 ಕಿ.ಮೀ ಹಾಗೂ ಮಹಿಳೆಯರ ವಿಭಾಗದಲ್ಲಿ 6 ಕಿ.ಮೀ ಸ್ಪರ್ಧೆಯಿದ್ದು ಮೂಡುಬಿದಿರೆಯಲ್ಲಿ ಈಗಾಗಲೇ ಸ್ಪರ್ಧೆಯ ಪಥವನ್ನು ಅಂತಿಮಗೊಳಿಸಿದ್ದು ಪೂರ್ವಸಿದ್ಧತೆ ನಡೆಯುತ್ತಿದೆ. ಕಳೆದ ಬಾರಿ ಮಂಗಳೂರು ವಿ.ವಿ ಪುರುಷರ ವಿಭಾಗದಲ್ಲಿ ಚಾಂಪಿಯನ್‌ಶಿಪ್‌ನ್ನು ಪಡೆದಿದ್ದು, ಮಹಿಳಾ ವಿಭಾಗದಲ್ಲಿ ರನ್ನರ್‌ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿತ್ತು. ಮಹಿಳೆಯರ ವಿಭಾಗದಲ್ಲಿ ಪಟಿಯಾಲದ ಪಂಜಾಬ್ ವಿ.ವಿ. ಚಾಂಪಿಯನ್ ಆಗಿತ್ತು. ಈ ಬಾರಿ ಮಂಗಳೂರು ವಿ.ವಿ. ಮುಖಾಂತರ ತಮ್ಮ ಸಂಸ್ಥೆಯ ಕ್ರೀಡಾಪಟುಗಳು ಸಮಗ್ರ ಚಾಂಪಿಯನ್‌ಶಿಪ್ ಪಡೆದುಕೊಳ್ಳುವಲ್ಲಿ ಶ್ರಮಿಸಲಿದ್ದಾರೆ ಅಲ್ಲದೆ ವಿಜೇತ ಕ್ರೀಡಾಪಟುಗಳಿಗೆ ಸಂಸ್ಥೆಯ ವತಿಯಿಂದ ನಗದು ಪುರಸ್ಕಾರ ನೀಡುವ ಇರಾದೆ ಇದೆ ಎಂದು ಮೋಹನ್ ಆಳ್ವ ಹೇಳಿದರು.

ರಾಜ್ಯ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್, ರಾಜೀವ್‌ಗಾಂಧಿ ವಿ.ವಿ. ಉಪಕುಲಪತಿ ಡಾ.ಕೆ.ಎಸ್ ರವೀಂದ್ರನಾಥ್, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಹಾಗೂ ಅಂತಾರಾಷ್ಟ್ರೀಯ ಮಾಜಿ ಮತ್ತು ಹಾಲಿ ಕ್ರೀಡಾಪಟುಗಳು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News