ಶಾಸಕರು ಕೇಳಿದ ಈ ಪ್ರಶ್ನೆಗೆ ಅಧಿಕಾರಿಗಳ ಬಳಿ ಉತ್ತರವೇ ಇಲ್ಲ!

Update: 2016-10-18 12:27 GMT

ಪುತ್ತೂರು, ಅ.18: ಮರಳಿನ ಸಮಸ್ಯೆಗಳಿಂದಾಗಿ ಬಡವರು ಮತ್ತು ದುರ್ಬಲರಿಗೆ ಕಷ್ಟವಾಗಿದ್ದು, ಹಲವಾರು ಮನೆ ಕೆಲಸಗಳು ಮರಳು ಇಲ್ಲದ ಕಾರಣ ಅರ್ಧದಲ್ಲಿಯೇ ಬಾಕಿಯಾಗಿದೆ. ಮರಳು ಬಡವರಿಗೆ ಸಿಗುವಂತಾಗಬೇಕು. ಇದಕ್ಕೆ ದಾರಿ ಯಾವುದು ಎಂದು ತಾಲೂಕು ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕಿ ಅವರು ಕಂದಾಯ ಅಧಿಕಾರಿಗಳನ್ನು ಪ್ರಶ್ನಿಸಿದರು.

ತಾಲೂಕು ತ್ರೈಮಾಸಿಕ ಕೆಡಿಪಿ ಸಭೆ ಮಂಗಳವಾರ ಪುತ್ತೂರು ತಾ.ಪಂ. ಸಭಾಂಗಣದಲ್ಲಿ ಶಾಸಕಿ ಶಕುಂತಳಾ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕಿ ಶಕುಂತಳಾ ಶೆಟ್ಟಿ, ಹೊಳೆ ಬದಿಯಲ್ಲಿ ಮನೆ ನಿರ್ಮಿಸುತ್ತಿರುವವರೂ ಮರಳು ಪಡೆಯಲು ಸಾಧ್ಯವಾಗುತ್ತಿಲ್ಲ. ನಮ್ಮಲ್ಲಿನ ಮರಳು ಇತರ ಜಿಲ್ಲೆಗಳಿಗೆ ನಿರಾತಂಕವಾಗಿ ಸಾಗಾಟವಾಗುತ್ತಿದೆ. ಬಡವರಿಗೆ ಮರಳು ಪಡೆಂುುವ ದಾರಿ ಯಾವುದು ಎಂಬುದು ಇನ್ನೂ ಗೊತ್ತಾಗುತ್ತಿಲ್ಲ. ಕೆಲವರು ಕಂದಾಯ ಇಲಾಖೆಯನ್ನು ತೋರಿಸಿದರೆ ಇನ್ನು ಕೆಲವರು ಭೂ ಮತ್ತು ಗಣಿ ಇಲಾಖೆಯನ್ನು ತೋರಿಸುತ್ತಿದ್ದಾರೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಮರಳು ಸಮಿತಿ ಸಭೆಯಲ್ಲಿ ಶಾಸಕರಿಗೆ ಭಾಗವಹಿಸಲು ಅವಕಾಶವಿಲ್ಲ. ಮರಳು ಸಮಿತಿ ಸಭೆಯಲ್ಲಿ ಭಾಗವಹಿಸುವ ತಹಶೀಲ್ದಾರರು ಬಡ ಜನರ ಸಮಸ್ಯೆಯನ್ನು ಅಲ್ಲಿ ಸಮರ್ಪಕವಾಗಿ ಮಂಡಿಸಿ ಬಡವರಿಗೆ ಮನೆ ನಿರ್ಮಾಣಕ್ಕೆ ಮರಳು ಸಿಗುವಂತಹ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.

ಇದಕ್ಕೆ ಉತ್ತರಿಸಿದ ಕಂದಾಯ ಅಧಿಕಾರಿಗಳು ಮರಳು ಸಂಗ್ರಹದ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅನುಮತಿ ಕಡ್ಡಾಯವಾಗಿದೆ. ನಮಗೇನು ಮಾಡಲು ಸಾಧ್ಯವಿಲ್ಲ ಎಂದು ಕೈಚೆಲ್ಲಿದರು.

ಬಹುಗ್ರಾಮ ಯೋಜನೆ ದೊಡ್ಡ ಯೋಜನೆ ರೂಪಿಸಿ

ಬಹುಗ್ರಾಮ ಯೋಜನೆಯ ಬಗ್ಗೆ ಮಾಹಿತಿ ನೀಡಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಅಧಿಕಾರಿಗಳು ಕುಡಿಯುವ ನೀರು ಯೋಜನೆಗೆ ಮಂಜೂರಾಗಿರುವ 35 ಲಕ್ಷ ರೂ. ಅನುದಾನದಲ್ಲಿ 40 ಕಾಮಗಾರಿಗಳು ಪೂರ್ಣಗೊಂಡಿದೆ. 4 ಕಾಮಗಾರಿಗಳು ಅನುಷ್ಠಾನಗೊಳಿಸಲು ಸಾಧ್ಯವಾಗದ ಕಾರಣ ಬದಲಿ ಕಾಮಗಾರಿಗಳಿಗೆ ಪ್ರಸ್ತಾವನೆ ಸಲ್ಲಿಸಬೇಕಾಗಿದೆ ಎಂದರು.

ಬಹುಗ್ರಾಮ ಕುಡಿಯುವ ನೀರು ಯೋಜನೆಯಲ್ಲಿ ಸಣ್ಣ ಪುಟ್ಟ ಯೋಜನೆಯನ್ನು ರೂಪಿಸುವ ಬದಲು ತಾಲೂಕಿನ ಬಹುತೇಕ ಗ್ರಾಮಗಳಿಗೆ ಅನುಕೂಲವಾಗುವ ದೊಡ್ಡ ಪ್ರಮಾಣದ ಯೋಜನೆ ರೂಪಿಸುವಂತೆ ಶಾಸಕಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿನ ಡಯಾಲಿಸಿಸ್ ಕೇಂದ್ರಗಳಲ್ಲಿ ಮಧ್ಯವರ್ತಿಗಳಿಗೆ ಅವಕಾಶವಿಲ್ಲದೆ ರೋಗಿಗಳ ನೋಂದಣಿಯಂತೆ ದಿನವೊಂದಕ್ಕೆ 4 ಮಂದಿ ರೋಗಿಗಳಿಗೆ ಡಯಾಲಿಸಿಸ್ ನಡೆಸಿ ಎಂದು ವೈದ್ಯಾಧಿಕಾರಿಗಳಿಗೆ ಸೂಚಿಸಿದ ಶಾಸಕಿ ಯಾರದೋ ಮರ್ಜಿಗೆ ಬೀಳದೆ ಜನರಿಗೆ ಅನುಕೂಲವಾಗುವಂತೆ ನಡೆದುಕೊಳ್ಳಿ ಎಂದು ಕಿವಿಮಾತು ಹೇಳಿದರು.

ಉಪ್ಪಿನಂಗಡಿ ನೆರೆ ಮುಂಜಾಗ್ರತಾ ಸಭೆಯಲ್ಲಿ ಕೈಗೊಳ್ಳಲಾದ ಯಾವುದೇ ನಿರ್ಣಯಗಳು ಅನುಷ್ಠಾನಗೊಳ್ಳುತ್ತಿಲ್ಲ ಎಂದು ನಾಮನಿರ್ದೇಶಿತ ಸದಸ್ಯ ಅಶ್ರಫ್ ಬಸ್ತಿಕಾರ್ ಆರೋಪಿಸಿದರು. ಇದಕ್ಕೆ ಉತ್ತರಿಸಿದ ತಹಶೀಲ್ದಾರ್ ಅನಂತಶಂಕರ್, ಈ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ದಲಿತರ ಯಾವುದೇ ಸಮಸ್ಯೆಗಳು ಪರಿಹಾರವಾಗುತ್ತಿಲ್ಲ ಎಂದು ಆರೋಪಿಸಿದ ನಾಮನಿರ್ದೇಶಿತ ಸದಸ್ಯ ಸೋಮನಾಥ ಉಪ್ಪಿನಂಗಡಿ, ಉಪ್ಪಿನಂಗಡಿಯಲ್ಲಿ ಅಂಬೇಡ್ಕರ್ ಭವನಕ್ಕೆ ಅನುದಾನ ಮಂಜೂರಾಗಿದ್ದರೂ ಈ ತನಕ ಸಮರ್ಪಕ ಜಾಗ ಗುರುತಿಸುವ ಕೆಲಸವಾಗಿಲ್ಲ. ಉಪ್ಪಿನಂಗಡಿ ಪೇಟೆಯಲ್ಲಿ ಜನರಿಗೆ ಅನುಕೂಲವಾಗುವಂತೆ ವನ ನಿರ್ಮಿಸಬೇಕಾಗಿದೆ. ಅಂಬೇಡ್ಕರ್ ಭವನಕ್ಕೆ ಬಂದಿರುವ ಅನುದಾನ ಹಿಂದಕ್ಕೆ ಹೋಗದಂತೆ ನೋಡಿಕೊಳ್ಳಬೇಕು ಎಂದು ಶಾಸಕಿ ಅವರನ್ನು ಒತ್ತಾಯಿಸಿದರು.

ಪೊಲೀಸರಿಗೆ ಅಭಿನಂದನೆ

ಪುತ್ತೂರಿನಲ್ಲಿ ನಡೆದ ಶನಿವಾರ ಸರಣಿ ಕಳ್ಳತನ ಹಾಗೂ ದೇವಳದಲ್ಲಿ ನಡೆದ ಕಳ್ಳತನವನ್ನು ಪತ್ತೆಹಚ್ಚಿ ಬೇರ್ಪಡಿಸಿದ ಪೊಲೀಸರ ಕ್ರಮವನ್ನು ಶ್ಲಾಘಿಸಿದ ಶಾಸಕಿ ಪೊಲೀಸರಿಗೆ ಅಭಿನಂದನೆ ಸಲ್ಲಿಸಿದರು. ಪೊಲೀಸ್ ಶಾಂತಿ ಸಭೆಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ ಎಂದು ಆರೋಪಿಸಿದ ಅಶ್ರಫ್ ಬಸ್ತಿಕಾರ್, ಕನಿಷ್ಠ 24 ಗಂಟೆಗಳ ಮೊದಲು ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.

ವಾಹನ ಸಂಚಾರ ನಿಯಂತ್ರಣಕ್ಕೆ ಅಳವಡಿಸಲಾಗುತ್ತಿರುವ ಬ್ಯಾರಿಕೇಡ್‌ಗಳಿಂದಲೇ ತೊಂದರೆಯಾಗುತ್ತಿದೆ. ಬ್ಯಾರಿಕೇಡ್ ಅಳವಡಿಸುವ ಸಂದರ್ಭದಲ್ಲಿ ಗರಿಷ್ಠ ದೂರವನ್ನು ಕಾಯ್ದುಕೊಂಡಲ್ಲಿ ಘನ ವಾಹನಗಳ ಸಾಗಾಟಕ್ಕೆ ಆಗುತ್ತಿರುವ ತೊಂದರೆಯನ್ನು ತಡೆಯಬಹುದು ಎಂದು ಅವರು ಸಲಹೆ ನೀಡಿದರು. ಶಾಂತಿ ಸಭೆಗೆ ಕನಿಷ್ಠ ಒಂದು ದಿನಗಳ ಮೊದಲು ಮಾಹಿತಿ ನೀಡುವಂತೆ ಶಾಸಕಿ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

ತೋಟಗಾರಿಕಾ ಇಲಾಖೆಗೆ ವಾಹನವನ್ನು ಒದಗಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ನಾಮನಿರ್ದೇಶಿತ ಸದಸ್ಯ ಕೃಷ್ಣಪ್ರಸಾದ್ ಆಳ್ವ ಒತ್ತಾಯಿಸಿದರು. ಈ ಬಗ್ಗೆ ನಿರ್ಣಯ ಕೈಗೊಂಡು ಸರಕಾರಕ್ಕೆ ಪತ್ರ ಬರೆಯುವುದೆಂದು ತೀರ್ಮಾನಿಸಲಾಯಿತು.

ತಾ.ಪಂ.ಅಧ್ಯಕ್ಷೆ ಭವಾನಿ ಚಿದಾನಂದ, ಉಪಾಧ್ಯಕ್ಷೆ ರಾಜೇಶ್ವರಿ, ಸ್ಥಾಯಿ ಸಮಿತಿ ಅಧ್ಯಕ್ಷ ಮುಕುಂದ, ಪುತ್ತೂರು ತಹಶೀಲ್ದಾರ್ ಅನಂತಶಂಕರ್, ಕಡಬ ತಹಶೀಲ್ದಾರ್ ಬಿ.ಲಿಂಗಯ್ಯ, ಜಿ. ಪಂ. ಸದಸ್ಯರಾದ ಅನಿತಾ ಹೇಮನಾಥ ಶೆಟ್ಟಿ, ಶಯನಾ ಜಯಾನಂದ, ಪ್ರಮೀಳಾ ಜನಾರ್ಧನ, ನಾಮನಿರ್ದೇಶಿತ ಸದಸ್ಯರಾದ ಇಸ್ಮಾಯೀಲ್ ನೆಲ್ಯಾಡಿ, ಅಶೋಕ್ ಕುಮಾರ್ ಸಂಪ್ಯ, ವನಿತಾ, ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News