ಪುತ್ತೂರು : ಹಣಕಾಸಿನ ತಗಾದೆ-ತಂಡದಿಂದ ಹಲ್ಲೆ

Update: 2016-10-21 15:03 GMT

ಪುತ್ತೂರು,ಅ.21 : ಹಣಕಾಸಿನ ವಿಚಾರಕ್ಕೆ ಸಂಬಂಧಿಸಿ ತಂಡವೊಂದು ಕಾರನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿದ ಘಟನೆ ಪುತ್ತೂರು ನಗರ ಠಾಣಾ ವ್ಯಾಪ್ತಿಯಲ್ಲಿ ಬರುವ ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಸತ್ತಿಕಲ್ಲು ಎಂಬಲ್ಲಿ ಬಧವಾರ ನಡೆದಿದೆ.

ಕೆದಿಲ ಗ್ರಾಮದ ಸತ್ತಿಕಲ್ಲು ನಿವಾಸಿ ಆದಂ ಅವರ ಪುತ್ರ ಉಮ್ಮರ್ ಫಾರೂಕ್ ಹಲ್ಲೆಗೊಳಗಾದವರು. ಗಾಯಾಳು ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದಾರೆ ಕಾರನ್ನು ದುರಸ್ತಿಗಾಗಿ ಗ್ಯಾರೇಜಿಗೆ ಕೊಂಡು ಹೋಗಲೆಂದು ಕಳೆದ ಬುಧವಾರ ತಾನು ಕಾರಿನಲ್ಲಿ ಹೋಗುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಹೈದರ್,ಶರೀಫ್,ಸೆಂಟ್ರಲ್ ಅನೀಸ್,ನಿಸಾರ್,ರಝಾಕ್ ಹಾಗೂ ಇತರ ನಾಲ್ವರು ಸೇರಿಕೊಂಡು ತಾನು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರನ್ನು ಅಡ್ಡಗಟ್ಟಿ, ಚಾಕು,ಸೋಡಾ ಬಾಟಲಿ ಮತ್ತು ದೊಣ್ಣೆಯಿಂದ ಹೊಡೆದು ಹಲ್ಲೆ ನಡೆಸಿರುವುದಾಗಿ ಉಮ್ಮರ್ ಫಾರೂಕ್ ಅವರು ಆರೋಪಿಸಿದ್ದಾರೆ. ಕಳೆದ ಕೆಲ ಸಮಯದ ಹಿಂದೆ ತಾನು ಪೆರ್ನೆಯಲ್ಲಿ ಇಲೆಕ್ಟ್ರಿಕಲ್ ಕೆಲಸ ಮಾಡುತ್ತಿದ್ದೆ. ಈ ಕೆಲಸಕ್ಕೆ ಸಂಬಂಧಿಸಿದ ಹಣ ಕಾಸಿನ ವಿಚಾರದಲ್ಲಿ ಆರೋಪಿಗಳಾದ ಶರೀಫ್,ಹೈದರ್ ಮತ್ತು ರಜಾಕ್ ಅವರು ತನ್ನೊಂದಿಗೆ ತಗಾದೆ ಎತ್ತಿದ್ದರು. ಆ ಬಳಿಕ ಈ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ವಿವಾದ ಮಾತುಕತೆಯ ಮೂಲಕ ಇತ್ಯರ್ಥವಾಗಿತ್ತು, ಆದರೆ ಇದೇ ತಗಾದೆಯನ್ನು ಮುಂದಿಟ್ಟುಕೊಂಡು ಆರೋಪಿಗಳು ಇದೀಗ ಹಲ್ಲೆ ನಡೆಸಿದ್ದಾರೆ ಎಂದು ಅವರು ದೂರಿದ್ದಾರೆ.

ಉಮ್ಮರ್ ಫಾರೂಕ್ ಅವರು ನಿಡಿರುವ ದೂರಿನಂತೆ ಪುತ್ತೂರು ನಗರ ಪೊಲೀಸರು ಐವರು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News