ಮಣಿಪಾಲ: ಲಕ್ವಾ ಜಾಗೃತಿಗಾಗಿ ವಿದ್ಯಾರ್ಥಿಗಳಿಂದ ವಾಕಥಾನ್

Update: 2016-10-22 16:29 GMT

ಉಡುಪಿ, ಅ.22: ಅ.29ರಂದು ವಿಶ್ವ ಲಕ್ವಾ ದಿನವನ್ನು ಆಚರಿಸುವ ಹಿನ್ನೆಲೆಯಲ್ಲಿ ಮಣಿಪಾಲ ಕಸೂತಿರ್ಬಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ನ್ಯೂರಾಲಜಿ ವಿಭಾಗದ ವತಿಯಿಂದ ವಾಕಥಾನ್ ನಡಿಗೆಯನ್ನು ಇಂದು ಆಯೋಜಿಸಲಾಗಿತ್ತು.

 ಇದರಲ್ಲಿ 300ಕ್ಕೂ ಅಧಿಕ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಲಕ್ವಾದ ಕುರಿತು ಜನರಲ್ಲಿ ಜಾಗೃತಿ ಮತ್ತು ಅರಿವು ಮೂಡಿಸಲು ಈ ವಾಕಥಾನ್‌ನ್ನು ಆಯೋಜಿಸಲಾಗಿತ್ತು. ಭಾರತದಲ್ಲಿ ಅತೀ ದೊಡ್ಡ ಆರೋಗ್ಯ ಸಮಸ್ಯೆಯಾಗಿರುವ ಲಕ್ವಾದ ಕುರಿತು ಜಾಗೃತಿ ಮೂಡಿಸುವ ಅಗತ್ಯ ಕುರಿತು ಗಮನ ಸೆಳೆಯಲಾಗಿದೆ.

ವಯಸ್ಕರಲ್ಲಿ ಅತೀಹೆಚ್ಚು ಕಾಣಿಸಿಕೊಳ್ಳುವ ಈ ರೋಗ ಜಗತ್ತಿನಾದ್ಯಂತ ಅತೀ ಹೆಚ್ಚು ಜನರ ಸಾವಿಗೆ ಕಾರಣವಾಗುವ ಎರಡನೇ ರೋಗವೆನಿಸಿಕೊಂಡಿದೆ. ಆದರೆ ಕಳೆದ ಎರಡು ದಶಕಗಳಲ್ಲಿ ಹೊಸ ಚಿಕಿತ್ಸೆಗಳ ಮೂಲಕ ಲಕ್ವಾ ನಿರ್ವಹಣೆಯಲ್ಲಿ ಕಾಂತ್ರಿಕಾರಕ ಬದಲಾವಣೆಗಳಾಗಿವೆ. ಇದರಲ್ಲಿ ರೋಗಿಯನ್ನು ನಾಲ್ಕೂವರೆ ಗಂಟೆಯೊಳಗೆ ಆಸ್ಪತ್ರೆಗೆ ಕರೆದುಕೊಂಡು ಬಂದರೆ ಪರಿಣಾಮಕಾರಿ ಚಿಕಿತ್ಸೆ ಲಭ್ಯವಿದೆ ಎಂದು ಕೆಎಂಸಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
 
ಇದರಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಿಂದ ಮೆದುಳಿಗೆ ರಕ್ತ ಪೂರೈಕೆ ಸ್ಥಗಿತ ಗೊಂಡಿರುವುದನ್ನು ನಿಗದಿತ ಸಮಯಾವಧಿಯ ಒಳಗೆ ಪುನರಾರಂಭಿಸದಿದ್ದರೆ, ಮೆದುಳಿಗೆ ಸರಿಪಡಿಸಲಾಗದ ಹಾನಿಯಾಗುತ್ತದೆ. ಎಲ್ಲಾ ವಯೋಮಾನಗಳ ಆರು ಜನರಲ್ಲಿ ಒಬ್ಬ ವ್ಯಕ್ತಿ ಲಕ್ವಾದ ಆಘಾತಕ್ಕೆ ಒಳಗಾಗುತ್ತಾರೆ. ಇವರಲ್ಲಿ ಕೇವಲ ಶೇ.50 ಮಂದಿ 6 ತಿಂಗಳಿಗಿಂತ ಹೆಚ್ಚು ಸಮಯ ಬದುಕುತ್ತಾರೆ. ಇವರಲ್ಲಿ ಅರ್ಧದಷ್ಟು ಮಂದಿ ದೈನಂದಿನ ಚಟುವಟಿಕೆಗಳಲ್ಲಿ ಆಂಶಿಕ ಅಥವಾ ಸಂಪೂರ್ಣ ನೆರವು ಬೇಕಾಗುತ್ತದೆ. ಶೇ.20 ಮಂದಿ ಮಾತ್ರ ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಾರೆ. ಕ್ಲಪ್ತ ಸಮಯದಲ್ಲಿ ಪರಿಣಾಮಕಾರಿ ಚಿಕಿತ್ಸೆ ಒದಗಿಸುವ ಸಲುವಾಗಿ, ಲಕ್ವಾ ಉಂಟಾಗಿರುವ ವ್ಯಕ್ತಿಯನ್ನು ಆದಷ್ಟು ಬೇಗನೆ ಚಿಕಿತ್ಸೆಗಾಗಿ ಕರೆತರಬೇಕು ಎಂಬ ಸಂದೇಶವನ್ನು ಎಲ್ಲರಿಗೂ ತಲುಪುವುದು ಅಗತ್ಯ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News