ತಾರತಮ್ಯ ಮಾಡುವವರು ಮಾನವೀಯತೆಯ ಶತ್ರುಗಳು: ನಿತ್ಯಾನಂದ ಸ್ವಾಮಿ

Update: 2016-10-23 18:01 GMT

ಉಡುಪಿ, ಅ.23: ಬುದ್ಧಿವಂತರ ಜಿಲ್ಲೆ ಎನಿಸಿರುವ ಉಡುಪಿಯಲ್ಲಿ ಜಾತಿ ವಿಚಾರದಲ್ಲಿ ಇನ್ನೂ ಅನಿಷ್ಟ ಪದ್ಧತಿಯನ್ನು ಮುಂದುವರಿಸಿಕೊಂಡು ಹೋಗುವುದು ಸರಿಯಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಪಂಕ್ತಿ, ಪ್ರಸಾದ ವಿತರಣೆ ವಿಚಾರದಲ್ಲಿ ಜಾತಿ ತಾರತಮ್ಯ ಮಾಡಬಾರದು. ಈ ರೀತಿ ಧರ್ಮ, ಜಾತಿ ತಾರತಮ್ಯ ಮಾಡುವವರು ಮಾನವೀಯತೆಯ ಶತ್ರುಗಳು ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ನಿತ್ಯಾನಂದ ಸ್ವಾಮಿ ಆರೋಪಿಸಿದ್ದಾರೆ.
ಉಡುಪಿಯ ಸಾಯಿ ರೆಸಿಡೆನ್ಸಿ ಹೊಟೇಲ್ ಸಭಾಂಗಣದಲ್ಲಿ ರವಿವಾರ ನಡೆದ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಧರ್ಮ, ಜಾತಿ ವಿಚಾರದಲ್ಲಿ ದೇಶವು ಇಂದು ಇಡೀ ಜಗತ್ತಿನ ಎದುರು ತಲೆತಗ್ಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಾರ್ವಜನಿಕ ಸ್ಥಳ, ಮಠ ಮಂದಿರಗಳಲ್ಲಿ ಜಾತಿ ತಾರತಮ್ಯ ಮಾಡದೆ ಎಲ್ಲರಿಗೂ ಸಮಾನ ಅವಕಾಶ ನೀಡಬೇಕು. ನಮ್ಮಲ್ಲಿ ಧರ್ಮದ ವ್ಯತ್ಯಾಸಗಳಿದ್ದರೂ ಅದನ್ನು ತಮ್ಮ ತಮ್ಮ ಸ್ವಂತ ಮನೆಗಳಲ್ಲಿ ಮಾಡಿಕೊಳ್ಳಬೇಕು. ಧರ್ಮದ ವಿಚಾರದಲ್ಲಿ ಗಲಭೆ ಸೃಷ್ಟಿಸುವವರ ಬಗ್ಗೆ ಜಾಗರೂಕರಾಗಬೇಕಿದೆ ಎಂದರು.
ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ನಿರ್ನಾಮ ಮಾಡಲು ಬಿಜೆಪಿ ಹಾಗೂ ಕಾಂಗ್ರೆಸ್ ಸರಕಾರಗಳು ಯತ್ನಿಸುತ್ತಿದ್ದು, ಈ ಯೋಜನೆಗೆ ಅಗತ್ಯ ಹಣಕಾಸು ನೀಡುವ ಬದಲು ಅನುದಾನವನ್ನೇ ಕಡಿತ ಮಾಡಲಾಗುತ್ತಿದೆ. ಜನಪರ ಕಾನೂನುಗಳನ್ನು ಜಾರಿಗೊಳಿಸದೆ ಸರಕಾರಗಳೇ ಕಾನೂನು ಉಲ್ಲಂಘನೆ ಮಾಡುತ್ತಿವೆ. ಭೂಮಿ ಇಲ್ಲದವರಿಗೆ ಭೂಮಿ ಕೊಡುವ ಬದಲು ಭೂಮಿ ಇದ್ದವರಿಗೆ ಭೂಮಿ ಸಿಗುವಂತಹ ಕಾನೂನು ಬದಲಾವಣೆ ಮಾಡುತ್ತಿವೆ. ಈ ಎಲ್ಲ ಧೋರಣೆಗಳ ವಿರುದ್ಧ ಬೃಹತ್ ಆಂದೋಲನ ಕಟ್ಟುವ ಅಗತ್ಯ ಎದುರಾಗಿದೆ ಎಂದವರು ಹೇಳಿದರು.
ಪಡಿತರ ಪಡೆಯುವುದು ಪ್ರತಿಯೊಬ್ಬ ಪ್ರಜೆಯ ಹಕ್ಕು. ಹಾಗಾಗಿ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವುದು ಅಗತ್ಯವಿಲ್ಲ. ಅಧಿಕಾರಿಗಳಿಗೆ ಪಡಿತರ ಚೀಟಿ ಇಲ್ಲದವರನ್ನು ಗುರುತಿಸಿ, ಅವರ ಮನೆಗೆ ತೆರಳಿ ನೀಡುವ ಕಾರ್ಯವಾಗಬೇಕು. ಇಲ್ಲದಿದ್ದರೆ ಇದು ಪ್ರಜಾಪ್ರಭುತ್ವ ಅಲ್ಲ. ಇನ್ನು ಕೂಡ ದೇಶದಲ್ಲಿ ಪೂರ್ಣ ಸ್ವಾತಂತ್ರ ಸಿಕ್ಕಿಲ್ಲ. ಆರ್ಥಿಕ ಸ್ವಾತಂತ್ರ ನಮಗೆ ಬಂದೇ ಇಲ್ಲ ಎಂದವರು ಟೀಕಿಸಿದರು.
1990ರ ನಂತರ ಸುಧಾರಣೆ ಹೆಸರಿನಲ್ಲಿ ಸರಕಾರಗಳು ಜಾರಿಗೆ ತಂದ ಉದಾರೀಕರಣ, ಜಾಗತೀಕರಣ ಮತ್ತು ಖಾಸಗೀಕರಣ ನೀತಿಗಳಿಂದ ಕೃಷಿ ಹಾಗೂ ಕೃಷಿಕೂಲಿಕಾರರ ಬದುಕು ಜರ್ಜರಿತವಾಗಿದೆ. ಈ ಮೂಲಕ ರೈತರು ಇಂದು ಆತ್ಮಹತ್ಯೆ ಮಾಡಿಕೊಳ್ಳುವ ಹಾಗೂ ಕೃಷಿಯನ್ನು ತೊರೆದು ನಗರಕ್ಕೆ ವಲಸೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಇದರ ಪರಿಣಾಮವಾಗಿ ರೈತರ ಬದುಕಿನಲಿ ಅನಿಶ್ಚಿತತೆ ಕಾಡುತ್ತಿದೆ ಎಂದವರು ಅಸಮಾಧಾನ ವ್ಯಕ್ತಪಡಿಸಿದರು.
ಸಂಘದ ಜಿಲ್ಲಾಧ್ಯಕ್ಷ ದಾಸು ಭಂಡಾರಿ, ಕಾರ್ಯದರ್ಶಿ ವೆಂಕಟೇಶ್ ಕೋಣಿ, ಸಿಐಟಿಯು ಜಿಲ್ಲಾಧ್ಯಕ್ಷ ವಿಶ್ವನಾಥ ರೈ, ಕಾರ್ಯದರ್ಶಿ ಕೆ.ಶಂಕರ್, ಮುಖಂಡ ಬಾಲಕೃಷ್ಣ ಶೆಟ್ಟಿ, ಸಂಘದ ಉಡುಪಿ ತಾಲೂಕು ಅಧ್ಯಕ್ಷ ವಿಠಲ ಪೂಜಾರಿ, ಕಾರ್ಯದರ್ಶಿ ಕವಿರಾಜ್, ಕಾರ್ಕಳ ತಾಲೂಕು ಕಾರ್ಯದರ್ಶಿ ಪದ್ಮಾ, ಉಪಾಧ್ಯಕ್ಷ ದಾಮೋದರ್, ಕುಂದಾಪುರ ಕಾರ್ಯದರ್ಶಿ ನಾಗರತ್ನಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News