ಬದಲಿ ವ್ಯವಸ್ಥೆಗೆ ಆಗ್ರಹಿಸಿ ವ್ಯಾಪಾರಿಗಳ ಧರಣಿ: ಎಪಿಎಂಸಿ ಪ್ರಾಂಗಣದಲ್ಲಿ ವ್ಯಾಪಾರವಿಲ್ಲ

Update: 2016-10-24 18:17 GMT

ಪುತ್ತೂರು, ಅ.24: ಪುತ್ತೂರಿನ ಎಪಿಎಂಸಿ ಪ್ರಾಂಗಣದಲ್ಲಿ ವ್ಯಾಪಾರವೇ ಇಲ್ಲದ ಕಾರಣ ತಮಗೆ ನಗರದಲ್ಲಿ ಸಂತೆ ವ್ಯಾಪಾರ ನಡೆಸಲು ಬದಲಿ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿ ಎಪಿಎಂಸಿ ಪ್ರಾಂಗಣದಲ್ಲಿ ಸಂತೆ ವ್ಯಾಪಾರ ನಡೆಸುತ್ತಿರುವ ವ್ಯಾಪಾರಿಗಳು ಸೋಮವಾರ ವ್ಯಾಪಾರ ಸ್ಥಗಿತಗೊಳಿಸಿ ನಗರಸಭೆಯ ಎದುರು ದಿಢೀರ್ ಧರಣಿ ನಡೆಸಿದರು. ಮುಂದಿನ ಸೋಮವಾರದೊಳಗಾಗಿ ಪುತ್ತೂರು ನಗರದಲ್ಲಿಯೇ ವಾರದ ಸಂತೆ ವ್ಯಾಪಾರಕ್ಕೆ ಬದಲಿ ವ್ಯವಸ್ಥೆ ಕಲ್ಪಿಸದಿದ್ದಲ್ಲಿ ಸೋಮವಾರ ಕಿಲ್ಲೇ ಮೈದಾನಕ್ಕೆ ಬಂದು ಅಲ್ಲಿಯೇ ಸಂತೆ ವ್ಯಾಪಾರ ಮಾಡುತ್ತೇವೆ ಎಂದು ಸವಾಲು ಹಾಕಿದರು. ಪುತ್ತೂರು ನಗರದಲ್ಲಿನ ಸಂತೆ ಬಜಾರ್ ವಾರದ ಸಂತೆಗೆ ಪರಿಹಾರವಲ್ಲ, ವಾರದ ಸಂತೆ ನಡೆಸುತ್ತಿರುವ 500 ಮಂದಿ ವ್ಯಾಪಾರಿಗಳಿಗೆ ಇದರಿಂದಾಗಿ ಸಮಸ್ಯೆಯಾಗಿದೆ ಎಂದು ಆರೋಪಿಸಿದ ವ್ಯಾಪಾರಿಗಳು, ಪುತ್ತೂರು ನಗರದಲ್ಲಿನ ತರಕಾರಿ ಬಜಾರ್‌ಗಳನ್ನು ತೆರವುಗೊಳಿಸಬೇಕು. ವಾರದ ಸಂತೆಗೆ ನಗರದಲ್ಲಿ ಬದಲಿ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆ ಸಂದರ್ಭ ಮನವಿ ಸ್ವೀಕರಿಸಲು ಬಂದ ನಗರಸಭಾ ಅಧ್ಯಕ್ಷೆಗೆ ಮನವಿ ಸಲ್ಲಿಸಿದ ವ್ಯಾಪಾರಿಗಳು ಸಂತೆ ಸ್ಥಳಾಂತರದಿಂದಾಗಿ ತಮಗಾದ ಸಮಸ್ಯೆಯನ್ನು ವಿವರಿಸಿದರು. ಈ ಸಂದರ್ಭ ಮಾತನಾಡಿದ ನಗರಸಭಾ ಸದಸ್ಯ ಎಚ್.ಮುಹಮ್ಮದ್ ಅಲಿ, ನಗರಸಭೆಯ ಕಚೇರಿ ತಳ ಅಂತಸ್ತಿನಲ್ಲಿ ಕೇವಲ 30 ಮಂದಿಗೆ ವ್ಯಾಪಾರ ಮಾಡಲು ಅವಕಾಶವಿದ್ದು, ಅದು ಪರಿಹಾರವಲ್ಲ. ನಾವು ತರಕಾರಿ ಬಜಾರ್‌ಗೆ ಬೀಗ ಹಾಕುವ ಕೆಲಸ ಮಾಡಿದ್ದೇವೆ. ಆದರೆ ಹೈಕೋರ್ಟ್ ತಡೆಯಾಜ್ಞೆ ಕಾರಣ ಕಾನೂನು ಹೋರಾಟದ ಮೂಲಕವೇ ತಡೆಯಾಜ್ಞೆ ತೆರವುಗೊಳಿಸುವ ಪ್ರಯತ್ನ ಮಾಡುತ್ತೇವೆ ಎಂದರು.
ಸಂತೆ ವ್ಯಾಪಾರಿಗಳಾದ ಮಂಜುನಾಥ್ ಹಾಸನ, ಪುಟ್ಟುರಾಜ್ ಹಾಸನ, ನಝೀರ್ ಕೊಯಿಲ, ಅಶ್ರಫ್ ಉಪ್ಪಿನಂಗಡಿ, ವೆಂಕಟೇಶ್ ನಾಗಮಂಡಲ, ಮೋಹನ್ ಪುತ್ತೂರು, ರಾಜೇಂದ್ರ ಶಿವಮೊಗ್ಗ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News