ಹುಣ್ಸೆಮಕ್ಕಿ: ಮಕ್ಕಳ ಕ್ರಿಯಾತ್ಮಕ ರಜಾ-ಮಜಾ ಶಿಬಿರ

Update: 2016-10-25 13:20 GMT

ಕೋಟ, ಅ.25: ಮಕ್ಕಳಿಗೆ ಶಾಲಾ ಶಿಕ್ಷಣದೊಂದಿಗೆ ಸಹಪಠ್ಯೇತರ ಚಟುವಟಿಕೆಗಳು ಅತೀ ಅಗತ್ಯವಾಗಿದ್ದು, ಇದರಿಂದ ನಾಯಕತ್ವ ಗುಣ, ಹೊಂದಾಣಿಕೆ ಮನೋಭಾವ ಹಾಗೂ ಸಮಸ್ಯೆಗಳನ್ನು ಎದುರಿಸುವ ಮತ್ತು ಪರಿಹಾರ ಕಂಡುಕೊಳ್ಳುವ ಗುಣ ಅರಿಯಲು ಸಾಧ್ಯವಾಗುತ್ತದೆ ಎಂದು ಹೊಂಬಾಡಿ- ಮಂಡಾಡಿ ಗ್ರಾಪಂ ಅಧ್ಯಕ್ಷೆ ಜ್ಯೋತಿ ಹೇಳಿದ್ದಾರೆ.

ಹಂಗಾರಕಟ್ಟೆ ಬಾಳ್ಕುದ್ರು ಅಭಿವೃದ್ಧಿ ಸಂಸ್ಥೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹುಣ್ಸೆಮಕ್ಕಿ ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಹಾಗೂ ಪ್ರಗತಿ ಯುವಕ ಮಂಡಲ ಹುಣ್ಸೆಮಕ್ಕಿ ಇವುಗಳ ಸಂಯುಕ್ತ ಆಶ್ರಯ ದಲ್ಲಿ ಹುಣ್ಸೆಮಕ್ಕಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಡೆದ ಮೂರು ದಿನಗಳ ಮಕ್ಕಳ ಕ್ರಿಯಾತ್ಮಕ ದಸರಾ-ರಜಾ-ಮಜಾ ಶಿಬಿರ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ನಮ್ಮ ಜನಪದೀಯ ಸಂಸ್ಕೃತಿ ಇಂದು ಮಾಯವಾಗಿ ಎಲ್ಲೆಲ್ಲೂ ಪಾಶ್ಚಾತ್ಯ ಸಂಸ್ಕೃತಿ ಮೇಲುಗೈ ಸಾಧಿಸಿದೆ. ನಮ್ಮ ಹಿರಿಯರು ಆಚರಿಸಿಕೊಂಡು ಬಂದ ಹಬ್ಬ ಹರಿದಿನಗಳು ಕಣ್ಮರೆಯಾಗಿವೆ. ಹಾಗೂ ನಮ್ಮ ವಿದ್ಯಾರ್ಥಿಗಳು ಇಂತಹ ಸಾಂಸ್ಕೃತಿಕ ಮೌಲ್ಯಯುತ ಆಚರಣೆ ಬಗ್ಗೆ ಒಲವು ತೋರಿಸುತ್ತಿಲ್ಲ. ಹಿರಿಯರಿಗೆ ಗೌರವ ನೀಡುವ ನಮ್ಮ ಪರಂಪರೆಯೂ ಇಂದು ಆಚರಿಸಲ್ಪಡುತ್ತಿಲ್ಲ ಎಂದರು.

ಶಾಲೆಯ ಮುಖ್ಯ ಶಿಕ್ಷಕ ಸೂರಪ್ಪ ಹೆಗ್ಡೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮೂರು ದಿನಗಳ ಶಿಬಿರದಲ್ಲಿ ಹೂದಾನಿ ರಚನೆ, ಎಂಬೊಸಿಂಗ್ ಪೈಂಟ್, ಸ್ಪಂಜಿನಿಂದ ಗೊಂಬೆ ಮಾದರಿ, ಅಭಿನಯ ಗೀತೆ, ಮುಖವಾಡ, ರೈಮ್ಸ್, ಜನಪದಗೀತೆ ವಿವಿಧ ಕಲಾಕೃತಿಗಳ ರಚನೆಗಳ ಕುರಿತು ತರಬೇತಿ ನೀಡಲಾಯಿತು.

ಮುಖ್ಯ ಅತಿಥಿಗಳಾಗಿ ಜಪ್ತಿಯ ನಿವೃತ್ತ ಶಿಕ್ಷಕ ಎಚ್. ಸುಬ್ಬಣ್ಣ ಶೆಟ್ಟಿ, ಕೋಟೇಶ್ವರದ ಉದ್ಯಮಿ ಶಶಿಧರ ಶೆಟ್ಟಿ, ಎಸ್. ಮಂಜಯ್ಯ ಶೆಟ್ಟಿ, ಹುಣ್ಸೆಮಕ್ಕಿ ಪ್ರಗತಿ ಯುವಕ ಮಂಡಲದ ಅಧ್ಯಕ್ಷ ಚಂದ್ರ ಆಚಾರ್, ರಾಜೀವ ಕುಲಾಲ್, ಬಾಳ್ಕುದ್ರು ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ರಮೇಶ್ ವಕ್ವಾಡಿ, ಹಟ್ಟಿಯಂಗಡಿ ಶಾಲೆಯ ಮುಖ್ಯ ಶಿಕ್ಷಕ ಪ್ರಕಾಶ್ ಉಪಸ್ಥಿತರಿದ್ದರು.

ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ರಮೇಶ ವಕ್ವಾಡಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಪಲ್ಲವಿ ವಂದಿಸಿ ದಿವ್ಯ ನಿರೂಪಿಸಿದರು. 73 ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News