ನ.27ರಂದು ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯಮಟ್ಟದ ಸಮಾವೇಶ: ಬಿ.ಜೆ.ಪುಟ್ಟಸ್ವಾಮಿ

Update: 2016-10-25 14:51 GMT

ಮಂಗಳೂರು,ಅ.25: ರಾಜ್ಯದಲ್ಲಿ ನವೆಂಬರ್ 27ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶದ ಮೂಲಕ ಬಿಜೆಪಿಯ ಶಕ್ತಿ ಪ್ರದರ್ಶನ ನಡೆಯಲಿದೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ತಿಳಿಸಿದ್ದಾರೆ.

ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಈ ಸಮಾವೇಶವನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಉದ್ಘಾಟಿಸಲಿದ್ದಾರೆ. ಸಮಾವೇಶದಲ್ಲಿ ಬಿ.ಎಸ್.ಯಡಿಯೂರಪ್ಪ ಪ್ರಧಾನ ಭಾಷಣ ಮಾಡಲಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ವಿಭಾಗದ ವತಿಯಿಂದ ಎಲ್ಲಾ ಘಟಕಗಳನ್ನು ಪುನಶ್ಚೇತನಗೊಳಿಸಲಾಗುತ್ತಿದೆ. ಈಗಾಗಲೇ ವಾರ್ಡ್‌ಮಟ್ಟದ ಸಮಿತಿ ರಚಿಸಲು ನಿರ್ಧರಿಸಲಾಗಿದೆ. ರಾಜ್ಯದಲ್ಲಿ 6,80,273 ಸಕ್ರಿಯ ಕಾರ್ಯಕರ್ತರು ಹಿಂದುಳಿದ ಘಟಕಗಳ ವಿವಿಧ ಹಂತದಲ್ಲಿ ಪದಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದೇವರಾಜ ಅರಸು ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಜನರಿಗೆ ರಾಜಕೀಯ ಪ್ರಜ್ಞೆ ಮೂಡಿಸಿದ್ದಾರೆ. ಯಡಿಯೂರಪ್ಪನವರು ಹಿಂದುಳಿದ ವರ್ಗಗಳ ಜನಸಮುದಾಯಕ್ಕೆ ಆರ್ಥಿಕ ಶಕ್ತಿ ನೀಡಿದ್ದಾರೆ ಎಂದು ಪುಟ್ಟಸ್ವಾಮಿ ತಿಳಿಸಿದ್ದಾರೆ.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಹಿಂದುಳಿದ ವರ್ಗಗಳ ಮಠ ಮಾನ್ಯಗಳಿಗೆ 326 ಕೋಟಿ ಅನುದಾನ

ರಾಜ್ಯದಲ್ಲಿ ಯಡಿಯೂರಪ್ಪ ಮುಖ್ಯ ಮಂತ್ರಿಯಾಗಿದ್ದಾಗ ಹಿಂದುಳಿದ ವರ್ಗಗಳ ಮಠ ಮಾನ್ಯಗಳಿಗೆ 326 ಕೋಟಿ ರೂ. ಅನುದಾನ ನೀಡಿದ್ದಾರೆ. ಬಜೆಟ್‌ನಲ್ಲಿ ಘೋಷಿಸಿದ ಅನುದಾನದಲ್ಲಿ ಶೇ.98 ಭಾಗವನ್ನು ವೆಚ್ಚ ಮಾಡಲಾಗಿದೆ. 194 ಹಿಂದುಳಿದ ವರ್ಗಗಳ ಹಾಸ್ಟೆಲ್ ಕಟ್ಟಡಗಳನ್ನು ಪೂರ್ಣಗೊಳಿಸಲಾಗಿದೆ. ದೇಶದ ಪ್ರಧಾನಿ ನರೇಂದ್ರ ಮೋದಿ ದುರ್ಬಲ ವರ್ಗದವರ ಕಡೆ ತನ್ನ ಒಲವು ಇದೆ ಎಂದಿದ್ದಾರೆ. ಕೇಂದ್ರದಿಂದ ಬಿಡುಗಡೆಯಾದ ಅನುದಾನವನ್ನೂ ರಾಜ್ಯಸರಕಾರ ಸಮರ್ಪಕವಾಗಿ ಬಳಸಿಕೊಂಡಿಲ್ಲ. ರಾಜ್ಯದಲ್ಲಿ ಹಿಂದುಳಿದ ವರ್ಗದವರ ಏಳಿಗೆಗಾಗಿ ಇದ್ದ ಹಲವು ಅಭಿವೃದ್ಧಿ ಯೋಜನೆಗಳನ್ನು ಕೈಬಿಡಲಾಗಿದೆ ಎಂದು ಪುಟ್ಟ ಸ್ವಾಮಿ ಆರೋಪಿಸಿದರು.

ಕುಡಿಯುವ ನೀರಿನ ಯೋಜನೆಗೆ ಬಿಡುಗಡೆಯಾದ ಹಣ ಅಧಿಕಾರಿಗಳ ಬ್ಯಾಂಕ್ ಖಾತೆಗೆ 

ಕುಡಿಯುವ ನೀರಿನ ಯೋಜನೆಗಾಗಿ ಸರಕಾರದಿಂದ ಬಿಡುಗಡೆಯಾದ 3,400 ಕೋಟಿ ರೂ.ಗಳಲ್ಲಿ 1,500 ಕೋಟಿ ರೂ. ಮಾತ್ರ ಖರ್ಚಾಗಿದೆ. ಉಳಿದಂತೆ 1,300 ಕೋಟಿ ರೂ. ಅಧಿಕಾರಿಗಳ ಹೆಸರಿನಲ್ಲಿ ಬ್ಯಾಂಕ್ ಖಾತೆಯಲ್ಲಿ ಜಮಾ ಆಗಿದೆ. ಮುಂಗಡ ಪತ್ರದಲ್ಲಿ ನಿಗದಿ ಪಡಿಸಿದಂತೆ ಹಿಂದುಳಿದ ವರ್ಗಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಹಣ ವೆಚ್ಚವಾಗಿಲ್ಲ ಎಂದು ಪುಟ್ಟಸ್ವಾಮಿ ಆರೋಪಿಸಿದರು.

ಗಂಗಾ ಕಲ್ಯಾಣ ಯೋಜನೆಯನ್ನು ಬಜೆಟ್‌ನಲ್ಲಿಯೇ ಸಂಪೂರ್ಣವಾಗಿ ಕೈ ಬಿಡಲಾಗಿದೆ. ಹಿಂದುಳಿದ ವರ್ಗಗಳ ನರ್ಸಿಂಗ್ ವಿದ್ಯಾರ್ಥಿಗಳಿಗೆ ಶಿಷ್ಯವೇತನವನ್ನು ನೀಡಲಾಗುತ್ತಿಲ್ಲ. ಅಹಿಂದ ಹೆಸರಿನಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಹಿಂದುಳಿದ ವರ್ಗಗಳನ್ನು ಕಡೆಗಣಿಸಿದ್ದಾರೆ. ಇದರಿಂದ ಹಿಂದುಳಿದ ವರ್ಗ ಭ್ರಮ ನಿರಸನಗೊಂಡಿದೆ. ರಾಜ್ಯದಲ್ಲಿನ ಎಲ್ಲಾ ವಿಧಾನ ಸಭಾ ಕ್ಷೇತ್ರದಲ್ಲೂ ನಿರ್ಣಾಯಕ ಮತದಾರರ ಸಂಖ್ಯೆಯನ್ನು ಹೊಂದಿರುವ ಹಿಂದುಳಿದ ವರ್ಗಗಳ ಬಗ್ಗೆ ತಮ್ಮ ಯೋಜನೆಗಳ ಮೂಲಕ ತಲಪಿರುವ ಯಡಿಯೂರಪ್ಪ ಮತ್ತೆ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದಲ್ಲಿ ತರುವಲ್ಲಿ ನಿರ್ಣಾಯಕರಾಗಿದ್ದಾರೆ ಎನ್ನುವ ವಿಶ್ವಾಸವನ್ನು ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಪಕ್ಷವನ್ನು ಸಂಘಟಿಸುವ ಕೆಲಸವನ್ನು ತಾನು ನಿರ್ವಹಿಸುತ್ತಿದ್ದು ಎಲ್ಲಾ ಜಿಲ್ಲೆಗಳಿಗೂ ಪ್ರವಾಸ ಕೈಗೊಳ್ಳುತ್ತಿದ್ದೇನೆ. ನವೆಂಬರ್ 27ರಂದು ಅರಮನೆ ಮೈದಾನದಲ್ಲಿ ನಡೆಯುವ ಸಮಾವೇಶ ಹಿಂದುಳಿದ ವರ್ಗದವರ ಶಕ್ತಿ ಪ್ರದರ್ಶನವಾಗಲಿದೆ ಎಂದು ಪುಟ್ಟಸ್ವಾಮಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ರುದ್ರೇಶ್‌ಹತ್ಯೆ ಇದಕ್ಕೊಂದು ನಿದರ್ಶನ. ಸರಕಾರ ಲೋಕಾಯುಕ್ತವನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಿದೆ. ಸರಕಾರ ಜಾತಿ, ವರ್ಗಗಳ ನಡುವಿನ ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತಿದೆ. ಬೆಂಗಳೂರಿನಲ್ಲಿ ನಿರ್ಮಾಣ ಮಾಡಲು ಹೊರಟಿರುವ ಸ್ಟೀಲ್ ಬ್ರಿಡ್ಜ್ ಯೋಜನೆಯ ಬಗ್ಗೆ ತಜ್ಞರೇ ಆಕ್ಷೇಪ ವ್ಯಕ್ತಪಡಿಸುತ್ತಿದ್ದರೂ ಸರಕಾರ ಈ ಯೋಜನೆಯ ಟೆಂಡರನ್ನು 500 ಕೋಟಿ ರೂ.ಗೆ ಹೆಚ್ಚಿಸಿ ಸೇತುವೆ ನಿರ್ಮಾಣ ಮಾಡಲು ಹೊರಟಿರುವುದು ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಟ್ಟಿದೆ. ಇದು ಮುಂಬರುವ ಚುನಾವಣೆಗೆ ಸಂಪನ್ಮೂಲ ಸಂಗ್ರಹದ ಯೋಜನೆ ಎಂದು ಪುಟ್ಟಸ್ವಾಮಿ ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ಬಿಜೆಪಿ ಮುಖಂಡರಾದ ಉಮಾನಾಥ ಕೋಟ್ಯಾನ್, ಸತ್ಯಜಿತ್ ಸುರತ್ಕಲ್, ರಾಜೇಶ್ ಕೊಟ್ಟಾರಿ, ಕಿರಣ್ ಕುಮಾರ್, ಸದಾನಂದ ಸುರೇಶ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News