ಮೇಲ್ವರ್ಗದ ಧಾರ್ಮಿಕ ಕೇಂದ್ರವಾಗಿ ಪರಿವರ್ತನೆಯಾದ ಪರಿಶಿಷ್ಟ ಸಭಾಭವನ!

Update: 2016-10-29 08:44 GMT

ಮಂಗಳೂರು, ಅ.29: ಶಕ್ತಿನಗರದ ಮುಗ್ರೋಡಿಯಲ್ಲಿ 2010-11ನೆ ಸಾಲಿನಲ್ಲಿ ಪರಿಶಿಷ್ಟ ಪಂಗಡದವರಿಗಾಗಿ ನಿರ್ಮಾಣಗೊಂಡಿರುವ ಸಭಾಭವನವು ಮೇಲ್ವರ್ಗದವರು ಧಾರ್ಮಿಕ ಕೇಂದ್ರವಾಗಿ ಪರಿವರ್ತಿಸಿಕೊಂಡಿದ್ದು, ಈ ಬಗ್ಗೆ ಕ್ರಮ ಕೈಗೊಂಡು ದಲಿತರ ಸುಪರ್ದಿಗೆ ನೀಡಬೇಕೆಂದು ದಲಿತ ಹಕ್ಕುಗಳ ಸಮಿತಿಯ ಜಿಲ್ಲಾ ಸಂಚಾಲಕ ಹಾಗೂ ರಾಜ್ಯ ಸಮಿತಿಯ ಸಹ ಸಂಚಾಲಕ ಲಿಂಗಪ್ಪ ನಂತೂರು ಒತ್ತಾಯಿಸಿದ್ದಾರೆ.
ಇಂದು ನಗರದ ಕಮಿಷನರ್ ಕಚೇರಿಯಲ್ಲಿ ಉಪ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಕೆ.ಎಂ.ಶಾಂತರಾಜು ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಸಭೆಯಲ್ಲಿ ತಮ್ಮ ಅಹವಾಲು ಸಲ್ಲಿಸಿದ ಅವರು, ಮೇಲ್ವರ್ಗದವರು ಪ್ರಸ್ತುತ ದಲಿತರ ಸಭಾಭವನದಲ್ಲಿ ಪೂಜೆ, ಭಜನೆ ಇತ್ಯಾದಿಗಳನ್ನು ನಡೆಸುತ್ತಿದ್ದಾರೆ. ಅಲ್ಲದೆ, ಅಯ್ಯಪ್ಪ ಮಾಲೆ ಧಾರಣೆ ಸಂದರ್ಭದಲ್ಲಿ ಮಾಲೆ ಧರಿಸಿ ಅಲ್ಲೇ ಠಿಕಾಣಿ ಹೂಡುತ್ತಿದ್ದಾರೆ. ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಈ ಸಭಾಭವನದ ನಿರ್ವಹಣೆಯ ಜವಾಬ್ದಾರಿಯನ್ನು ದಲಿತರಿಗೆ ಬಿಟ್ಟುಕೊಡಬೇಕು. ಈ ಮೂಲಕ ಪ್ರಸ್ತುತ ಸಭಾಭವನವನ್ನು ಸಾರ್ವಜನಿಕ ಬಳಕೆಗೆ ಉಪಯೋಗವಾಗುವಂತೆ ನೋಡಿಕೊಳ್ಳಬೇಕೆಂದು ಆಗ್ರಹಿಸಿದರು.
 ಸೆಪ್ಟಂಬರ್ 2ರಂದು ಕಾರ್ಮಿಕರಿಂದ ನಡೆದ ಅಖಿಲ ಭಾರತ ಮುಷ್ಕರದ ಸಂದರ್ಭದಲ್ಲಿ ಮೂಡುಬಿದಿರೆ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳುವಾಯಿಯಲ್ಲಿ ಬಜರಂಗದಳದ ಕಾರ್ಯಕರ್ತ ಸೋಮನಾಥ ಕೋಟ್ಯಾನ್ ಎಂಬವರಲ್ಲಿ ಅಂಗಡಿಯನ್ನು ಮುಚ್ಚಿ ಬಂದ್‌ಗೆ ಸಹಕರಿಸುವಂತೆ ಕೋರಿಕೊಂಡಾಗ ಸೋಮನಾಥ ಸಹಿತ ಅವರೊಂದಿಗಿದ್ದ ಇತರ ನಾಲ್ವರು ಬಜರಂಗದಳದ ಕಾರ್ಯಕರ್ತರು ದಲಿತ ಯುವಕ ರಂಜಿತ್‌ನ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ, ದಲಿತ ಮಹಿಳೆಯರಾದ ಕಲ್ಯಾಣಿ ಮತ್ತು ಸುಲೋಚನಾ ಎಂಬವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ದೂರಿದರು. ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅವರು ಸೋಮನಾಥರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಆದರೆ ನಾಲ್ವರು ಆರೋಪಿಗಳಾದ ಪ್ರವೀಣ್, ಪ್ರಮೋದ್, ಅನ್ನಿ ಮತ್ತು ಹರಿಕೃಷ್ಣ ಎಂಬವರ ಮೇಲೆ ಪ್ರಕರಣ ದಾಖಲಿಸಿಲ್ಲ. ದಲಿತ ಯುವಕನ ಮೇಲೆ ಹಲ್ಲೆ ನಡೆಸಿದ ಮತ್ತು ಮಹಿಳೆಯರನ್ನು ಅವಾಚ್ಯವಾಗಿ ನಿಂದಿಸಿದ ಇತರ ನಾಲ್ವರ ಮೇಲೂ ಪ್ರಕರಣ ದಾಖಲಿಸುವಂತೆ ಲಿಂಗಪ್ಪ ನಂತೂರು ಸಭೆಯಲ್ಲಿ ಮನವಿ ಮಾಡಿದರು.
ಆರೋಪಿಗಳು ಹಲ್ಲೆಯ ಸಂದರ್ಭದಲ್ಲಿ ಯುವಕನಲ್ಲಿದ್ದ ಸುಮಾರು 40 ಸಾವಿರ ರೂ. ವೌಲ್ಯದ ಚಿನ್ನದ ಸರ ಮತ್ತು ಮೊಬೈಲ್ ಫೋನ್‌ನ್ನು ಕಸಿದುಕೊಂಡಿದ್ದಾರೆ. ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಅವರು ಮನವಿ ಮಾಡಿಕೊಂಡರು.
ಈ ಎಲ್ಲ ದೂರುಗಳಿಗೆ ಪ್ರತಿಕ್ರಿಯಿಸಿದ ಡಿಸಿಪಿ ಕೆ.ಎಂ.ಶಾಂತರಾಜು, ಶಕ್ತಿನಗರದ ಮುಗ್ರೋಡಿಯಲ್ಲಿನ ಸಭಾಭವನಕ್ಕೆ ಸಂಬಂಧಿಸಿ ವರದಿಯನ್ನು ಪಡೆದು ಮುಂದಿನ ಸಭೆಯಲ್ಲಿ ಈ ಬಗ್ಗೆ ತಿಳಿಸುವುದಾಗಿ ಭರವಸೆ ನೀಡಿದರು. ಅಲ್ಲದೆ, ಬೆಳುವಾಯಿ ಘಟನೆಗೆ ಸಂಬಂಧಿಸಿದ ಪೊಲೀಸ್ ಅಧಿಕಾರಿಗೆ ಸೂಚಿಸುವುದಾಗಿ ತಿಳಿಸಿದರು.

ಅಶೋಕ್ ಕೊಂಚಾರಿ ಮಾತನಾಡಿ, ಕಾವೂರಿನ ಮರಕಡ ಗ್ರಾಮದಲ್ಲಿ ಪರಿಶಿಷ್ಟ ಸಮುದಾಯಕ್ಕೆ ಮೀಸಲಾಗಿರುವ 1.20 ಎಕ್ರೆ ಭೂಮಿಯಲ್ಲಿ ಇದೀಗ ಕೆಲವರು ಗೂಡಂಗಡಿಗಳನ್ನು ನಿರ್ಮಿಸಿಕೊಂಡಿದ್ದಾರೆ. ಅಲ್ಲದೆ, ಸುಡು ಮದ್ದುಗಳನ್ನು ಮಾರಾಟ ಮಾಡುತ್ತಿದ್ದಾರೆ. ಪಟಾಕಿ ಮಾರಾಟ ಮತ್ತು ಗೂಡಂಗಡಿಗಳನ್ನು ತೆರವುಗೊಳಿಸುವಂತೆ ಮನವಿ ಮಾಡಿದರು. ಡಿಸಿಪಿ ಶಾಂತರಾಜು ಮಾತನಾಡಿ, ಮಾರಾಟಗಾರನು ತನ್ನ ಸಾಮಗ್ರಿಗಳ ಮಾರಾಟಕ್ಕೆ ಪರವಾನಿಗೆಯನ್ನು ಪಡೆದುಕೊಂಡಿದ್ದಾನೆಯೇ ಎಂಬುದನ್ನು ಪರಿಶೀಲಿಸಿ, ಪರವಾನಿಗೆ ಹೊಂದಿಲ್ಲವಾದರೆ ಸೂಕ್ತ ಕ್ರಮ ಕೈಗೊಂಡು ಈ ಬಗ್ಗೆ ದೂರುದಾರರಿಗೆ ತಿಳಿಸುವಂತೆ ಸಂಬಂಧಿಸಿದ ಪೊಲೀಸ್ ಅಧಿಕಾರಿಗೆ ಸೂಚನೆ ನೀಡಿದರು.
ಸಭೆಯಲ್ಲಿದ್ದ ಇನ್ನೋರ್ವ ಸದಸ್ಯ ಈಶ್ವರ್ ಸೂಟರ್‌ಪೇಟೆ ಮಾತನಾಡಿ, ಮನೆಯ ಕಾಂಪಾಂಡ್ ಒಳಗಿನಿಂದ ಪಟಾಕಿಯನ್ನು ಸಿಡಿಸಿ ರೆಸ್ತೆಗೆ ಬಿಸಾಡುತ್ತಿದ್ದು, ಇದು ಪ್ರಯಾಣಿಕರಿಗೆ ತೊಂದರೆಯನ್ನು ನೀಡುತ್ತಿದೆ. ಮತ್ತೆ ಕೆಲವರು ನಡು ರಸ್ತೆಯಲ್ಲೇ ಸುಡು ಮದ್ದುಗಳನ್ನು ಸುಡುತ್ತಿದ್ದು, ಇದನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ಕೋರಿಕೊಂಡರು.
ರಮೇಶ್ ಸೂಟರ್‌ಪೇಟೆ ಮಾತನಾಡಿ, ಕಂಕನಾಡಿಯ ವೆಲೆನ್ಸಿಯಾ ಸರ್ಕಲ್ ಬಳಿಯಲ್ಲಿ ಸಿಸಿ ಕ್ಯಾಮೆರಾವನ್ನು ಅಳವಡಿಸುವಂತೆ ಮನವಿ ಮಾಡಿದರು. ವೆಲೆನ್ಸಿಯಾ ಬಳಿಯಲ್ಲಿರುವ ಪಾರ್ಕ್‌ಗೆ ಬರುವವರಿಗೆ ಕೆಲವರು ಮದ್ಯ ಕುಡಿದು ಬಂದು ಕಿರಿಕಿರಿ ನೀಡುತ್ತಿದ್ದಾರೆ. ಮಾತ್ರವಲ್ಲದೆ, ವಾಕಿಂಗ್‌ಗೆ ಬಂದವರಿಗೆ ತೊಂದರೆ ನೀಡುತ್ತಿದ್ದು, ಪಾರ್ಕ್ ಬಳಿ ಮತ್ತು ಪಾರ್ಕ್ ಒಳಗೆ ಕುಳಿತಿದ್ದವರನ್ನು ಎಬ್ಬಿಸುತ್ತಿದ್ದಾರೆ ಎಂದು ಆರೋಪಿಸಿದರು. ಇಂತಹ ಪಾನಮತ್ತರಿಂದಾಗುವ ತೊಂದರೆಯನ್ನು ಪರಿಗಣಿಸಿ ಸಿಸಿ ಕ್ಯಾಮೆರಾವನ್ನು ಅಳವಡಿಸುವಂತೆ ಒತ್ತಾಯಿಸಿದರು.
ಸಭೆಯಲ್ಲಿ ಕೇಂದ್ರ ಉಪವಿಭಾಗದ ಎಸಿಪಿ ಉದಯ ಎಂ. ನಾಯಕ್, ದಕ್ಷಿಣ ಉಪವಿಭಾಗದ ಎಸಿಪಿ ಶೃತಿ ಎನ್.ಎಸ್., ಸಂಚಾರ ಉಪವಿಭಾಗದ ಎಸಿಪಿ ಕೆ.ತಿಲಕ್‌ಚಂದ್ರ, ಇತರ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News