ನ.5ರಂದು ಪುತ್ತೂರು ಆದರ್ಶ ರೈಲ್ವೆ ನಿಲ್ದಾಣ ಉದ್ಘಾಟನೆ: ಸಂಸದ ನಳಿನ್

Update: 2016-10-30 13:38 GMT

ಪುತ್ತೂರು, ಅ.30: ಪುತ್ತೂರಿನ ಆದರ್ಶ ರೈಲ್ವೆ ನಿಲ್ದಾಣವನ್ನು 2.89 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ದಿಗೊಳಿಸಿದ್ದು, ನ.5ರಂದು ಮಡಗಾಂವ್‌ನಲ್ಲಿ ಲೈವ್ ವೀಡಿಯೊ ಮೂಲಕ ರೈಲ್ವೆ ಸಚಿವ ಸುರೇಶ್ ಪ್ರಭೂ ಆದರ್ಶ ರೈಲ್ವೆ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ಆದರ್ಶ ರೈಲ್ವೆ ಉದ್ಘಾಟನೆಯ ಅಂಗವಾಗಿ ಪುತ್ತೂರು ರೈಲ್ವೆ ನಿಲ್ದಾಣದ ವಿವಿದ ಆಭಿವೃದ್ಧಿ ಕಾಮಗಾರಿ ವೀಕ್ಷಣೆ ನಡೆಸಿ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ಪುತ್ತೂರು ರೈಲ್ವೆ ನಿಲ್ದಾಣ ಅಭಿವೃದ್ದಿಗೆ ಕಳೆದ 3 ವರ್ಷಗಳಿಂದ ವಿವಿಧ ಹಂತದಲ್ಲಿ ಅನುದಾನ ಬಿಡುಗಡೆ ಮಾಡಲಾಗಿದ್ದು, ಈಗಾಗಲೇ ಶೇ.95ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಫ್ಲಾಟ್‌ಫಾರಂ ನಿರ್ಮಾಣ, ವಿಶ್ರಾಂತಿ ಗೃಹ, ಶೌಚಗೃಹ, ಕಟ್ಟಡ ದುರಸ್ತಿ,ಅಂಗವಿಕಲರ ಪಾತ್ ನಿರ್ಮಾಣ ಕಾಮಗಾರಿ ನಡೆದಿದೆ. ಮುಂದಿನ 4 ದಿನದೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಆದೇಶಿಸಲಾಗಿದೆ ಎಂದರು.

ಮಂಗಳೂರು ರೈಲ್ವೆ ನಿಲ್ದಾಣವನ್ನು ವಿಶ್ವದರ್ಜೆ ರೈಲು ನಿಲ್ದಾಣವನ್ನಾಗಿ ಮಾಡುವ ಯೋಜನೆಯ ಸರ್ವೇ ಕಾರ್ಯ ಪೂರ್ಣಗೊಂಡಿದೆ. ಪಡೀಲ್ ರೈಲ್ವೆ ಬ್ರಿಡ್ಜ್ ಕಾಮಗಾರಿ ಪೂರ್ಣಗೊಂಡಿದ್ದು, ಕೆಲವೇ ದಿನಗಳಲ್ಲಿ ಉದ್ಘಾಟನೆಯಾಗಲಿದೆ ಎಂದು ಸಂಸದರು ತಿಳಿಸಿದರು.

ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರ ಅಧ್ಯಕ್ಷ ಜೀವಂಧರ್ ಜೈನ್, ನಗರಸಭಾ ಉಪಾಧ್ಯಕ್ಷ ವಿಶ್ವನಾಥ ಗೌಡ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News