ಯುಪಿಸಿಎಲ್ ವಿಸ್ತರಣೆ ಬೇಡ: ಸಿಎಂಗೆ ಕಾಂಗ್ರೆಸ್ ಕಿಸಾನ್ ಘಟಕದ ಮನವಿ

Update: 2016-11-02 16:00 GMT

ಉಡುಪಿ, ನ.2: ಜಿಲ್ಲೆಯ ಎಲ್ಲೂರು ಗ್ರಾಮದಲ್ಲಿ ಜನವಿರೋಧಿ, ಪರಿಸರ ವಿರೋಧಿಯಾಗಿ ಕಾರ್ಯಾಚರಿಸುತ್ತಿರುವ ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರನ್ನು ಅದಾನಿ ಗ್ರೂಪ್ ಖರೀದಿಸಿ ಇದೀಗ ಅದನ್ನು ಇನ್ನಷ್ಟು ವಿಸ್ತರಿಸುವ ಸಿದ್ಧತೆಯಲ್ಲಿದ್ದು, ಯಾವುದೇ ಕಾರಣಕ್ಕೂ ಯೋಜನೆಯ ವಿಸ್ತರಣೆಗೆ ಅವಕಾಶ ನೀಡದಂತೆ ಕಾಂಗ್ರೆಸ್ ಕಿಸಾನ್ ಘಟಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಮಾಡಿದೆ.

ಉಡುಪಿ ಸರಕಾರಿ ಆಸ್ಪತ್ರೆಯ ನೂತನ ಕಟ್ಟಡದ ಶಂಕುಸ್ಥಾಪನೆಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ಜರಾಮಯ್ಯ ಅವರಿಗೆ ಈ ಸಂಬಂಧ ಮನವಿ ಅರ್ಪಿಸಿದ ಕಿಸಾನ್ ಘಟಕ, ಯಾವುದೇ ಕಾರಣಕ್ಕೂ ಯೋಜನೆಯ ವಿಸ್ತರಣೆಗೆ ಸರಕಾರದ ಪರವಾನಿಗೆಯನ್ನು ನೀಡಬಾರದೆಂದು ಒತ್ತಾಯಿಸಿದೆ.

ಈಗಾಗಲೇ ಇರುವ 1,200 ಮೆಗಾವ್ಯಾಟ್ ಸಾಮರ್ಥ್ಯದ ಸ್ಥಾವರಗಳಿಂದ ಪರಿಸರದ ರೈತರಿಗೆ ಉಂಟಾದ ತೊಂದರೆ ಹಾಗೂ ಬೆಳೆನಷ್ಟ ಮತ್ತು ಇದರ ಸುತ್ತಮುತ್ತಲಿನ 10-12 ಗ್ರಾಮಗಳ ಜನರ ಆರೋಗ್ಯದ ಮೇಲುಂಟಾಗಿರುವ ಪರಿಣಾಮ, ಗರ್ಭಿಣಿ ಸ್ತ್ರೀಯರಿಗೆ ಹಾರುಬೂದಿಯಿಂದುಂಟಾಗಿರುವ ಸಮಸ್ಯೆ, ಮಕ್ಕಳ ಆರೋಗ್ಯದ ಮೇಲಾಗಿರುವ ತೊಂದರೆ, ಅಲರ್ಜಿ, ಅಸ್ತಮಾ, ಚರ್ಮ ರೋಗಗಳಲ್ಲಾಗಿರುವ ವೃದ್ಧಿಯ ಕುರಿತು ಮನವಿಯಲ್ಲಿ ವಿವರಿಸಲಾಗಿದೆ.

ಈ ಭಾಗದ ಜನರ ಆರೋಗ್ಯದ ದೃಷ್ಟಿಯಿಂದ ಹಾಗೂ ಕರಾವಳಿ ಜಿಲ್ಲೆಗಳ ಧಾರಣಾ ಸಾಮರ್ಥ್ಯದ ಅಧ್ಯಯನ ನಡೆಸದೇ ಪರಿಸರ ನಾಶಕ ಕಂಪೆನಿಗೆ ಯೋಜನೆಯನ್ನು ಒಂದೂವರೆ ಪಟ್ಟು ಹೆಚ್ಚಿಸಲು ಅವಕಾಶ ನೀಡಬಾರದೆಂದು ಕಿಸಾನ್ ಘಟಕ ಮನವಿಯಲ್ಲಿ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದೆ. ಜಗತ್ತಿನ ಅಭಿವೃದ್ಧಿಶೀಲ ರಾಷ್ಟ್ರಗಳು ಈಗಾಗಲೇ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರವನ್ನು ನಿಷೇಧಿಸಿವೆ. ಆದ್ದರಿಂದ ಇಂಥಹ ಸ್ಥಾವರವನ್ನು ಕೃಷಿ ಪ್ರದಾನ ಕರಾವಳಿಯಲ್ಲಿ ವಿಸ್ತರಿಸಲು ಅವರಾಶ ನೀಡದೇ ಅದನ್ನು ಅನಿಲಾಧಾರಿತವಾಗಿ ಪರಿವರ್ತಿಸಲು ಒತ್ತಡ ಹೇರಬೇಕೆಂದು ಕಾಂಗ್ರೆಸ್ ಕಿಸಾನ್ ಘಟಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News