ಆಮಿಷವೊಡ್ಡಿ ಹಣ ಕಸಿಯುವ ದಂಧೆ ಬಗ್ಗೆ ಎಚ್ಚರ ವಹಿಸಿ: ಎಎಸ್ಪಿ ರಿಷ್ಯಂತ್

Update: 2016-11-03 13:02 GMT

ಪುತ್ತೂರು, ನ.3: ನೈಜೀರಿಯಾ, ಆಫ್ರಿಕಾ, ಭಾರತದ ದಿಲ್ಲಿ, ಚಂಡೀಗಢ, ಜಾರ್ಖಂಡ್ ಮೊದಲಾದ ಕಡೆಯವರಿಗೆ ಎಲ್ಲೋ ಒಂದು ಕಡೆ ಇಂಟರ್‌ನೆಟ್ ಪಾರ್ಲರ್‌ಗಳಲ್ಲಿ ಕುಳಿತುಕೊಂಡು ಹಣದ ಆಮಿಷ ತೋರಿಸಿ ಎಟಿಎಂ ಡಿಜಿಟಲ್ ನಂಬರ್ ಪಡೆದುಕೊಂಡು, ಇಲ್ಲವೇ ಆನ್‌ಲೈನ್ ವೆಬ್‌ಸೈಟ್ ಜಾಲದ ಮೂಲಕ ಅಮಾಯಕರನ್ನು ಮೋಸಗೊಳಿಸಿ ಹಣ ಸುಲಿಗೆ ಮಾಡುವುದೇ ಒಂದು ಕೆಲಸವಾಗಿದ್ದು, ಈ ಮೋಸದ ದಂಧೆಯ ಬಗ್ಗೆ ಜನತೆ ಜಾಗೃತರಾಗಬೇಕು ಎಂದು ಪುತ್ತೂರು ಎಎಸ್ಪಿರಿಷ್ಯಂತ್ ಕರೆ ನೀಡಿದ್ದಾರೆ.

ಪುತ್ತೂರಿನ ಪುರಭವನದಲ್ಲಿ ರಾಜ್ಯ ಸರಕಾರ, ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾದ ಸಂಯುಕ್ತ ಆಶ್ರಯದಲ್ಲಿ ಗುರುವಾರ ನಡೆದ ‘ಆರ್ಥಿಕ ಜನ ಜಾಗೃತಿ ಅಭಿಯಾನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸ್ತ್ರೀ ಶಕ್ತಿ ಸಂಘಟನೆಯ ಮಹಿಳೆಯರೇ ಹೆಚ್ಚಾಗಿ ವಂಚನೆಗೊಳಗಾಗುತ್ತಿದ್ದಾರೆ. ನೋಂದಣಿ ಮಾಡದೆ ಚಿಟ್‌ಫಂಡ್ ವ್ಯವಹಾರ ನಡೆಸಲಾಗುತ್ತಿದ್ದು, ಅದು ಅನಧಿಕೃತ ಎಂದು ಗೊತ್ತಿದ್ದರೂ ಜನತೆ ಹಣದ ಆಸೆಗಾಗಿ ಮೋಸ ಹೋಗುತ್ತಿದ್ದಾರೆ, ನಿಮ್ಮ ಖಾತೆಗೆ ದೊಡ್ಡ ಮೊತ್ತದ ಹಣ ಡ್ರಾ ಆಗಿದೆ ಎಂದು ನಂಬಿಸಿ, ಹಂತಹಂತವಾಗಿ ಮೋಸದ ಬಲೆಗೆ ಸಿಲುಕಿಸಿ ನಿಮ್ಮ ಎಟಿಎಂ ಪಿನ್ ನಂಬ್ರ ಪಡೆದುಕೊಂಡು ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನೇ ಕಸಿಯುವ ದಂಧೆ ನಿರಂತರವಾಗಿ ನಡೆಯುತ್ತಿದೆ. ನೈಜೀರಿಯಾ, ಆಫ್ರಿಕಾದಲ್ಲಿ ಕುಳಿತುಕೊಂಡು ನಡೆಸುವ ಈ ವಂಚನಾ ಜಾಲವನ್ನು ಪತ್ತೆ ಮಾಡುವುದು ಬಹಳ ಕಷ್ಟಕರ ಕೆಲಸ ಎಂದರು.

ಆನ್‌ಲೈನ್ ವೆಬ್‌ಸೈಟ್‌ನಲ್ಲಿ ವ್ಯವಹರಿಸಬೇಡಿ ಎಂದು ಹೇಳಲಾಗುವುದಿಲ್ಲ. ಆದರೆ ವ್ಯವಹರಿಸುವ ವೇಳೆ ವೆಬ್‌ಸೈಟ್‌ನಲ್ಲಿ ಎಚ್‌ಟಿಟಿಪಿಎಸ್ ಇದೆಯೇ ಎಂದು ಗಮನಿಸಿ. ಇಲ್ಲದಿದ್ದರೆ ಮೋಸ ಹೋಗುವುದು ಖಂಡಿತಾ ಎಂದು ಎಚ್ಚರಿಸಿದ ಅವರು 6 ತಿಂಗಳಲ್ಲಿ ಹಣ ದ್ವಿಗುಣ ಗೊಳಿಸುವ ಮನಿ ಚೈನ್‌ಲಿಂಕ್ ಬೆನಿಫಿಟ್ ಸ್ಕೀಂಗಳ ಜಗ್ಗೆಯೂ ಜಾಗೃತರಾಗಿರಿ ಎಂದು ಅವರು ಹೇಳಿದರು.

ಮನೆಗೆ ಬಂದು ವಂಚನೆ ಮಾಡುವುದಕ್ಕಿಂತ ಎಲ್ಲೋ ಒಂದು ಕಡೆ ಇಂಟರ್‌ನೆಟ್ ಪಾರ್ಲರ್‌ನಲ್ಲಿ ಕುಳಿತು ಕೊಂಡು ಆನ್‌ಲೈನ್ ಮೂಲಕ ವಂಚನೆ ಮಾಡುವುದು ತುಂಬಾ ಸುಲವಾಗಿದ್ದು, ಅವರನ್ನು ಪತ್ತೆ ಮಾಡುವುದು ಬಹಳಷ್ಟು ಕಷ್ಟದಾಯಕ ಕೆಲಸವಾಗಿದೆ. ವಿದೇಶದಲ್ಲಿದ್ದುಕೊಂಡು ವಂಚನೆ ಮಾಡಿದರೆ ಇಂಟರ್‌ಪೋಲ್ ಮೂಲಕವೇ ಪತ್ತೆ ಕಾರ್ಯ ನಡೆಯಬೇಕಾಗಿದೆ, ಆದ್ದರಿಂದ ವ್ಯವಹರಿಸುವ ಮೊದಲೇ ಎಚ್ಚರ ವಹಿಸುವುದು ಬಹಳ ಅಗತ್ಯ ಎಂದು ಅವರು ತಿಳಿಸಿದರು.

ಭಾರತೀಯ ರಿಸರ್ವ್ ಬ್ಯಾಂಕ್‌ನ ಮ್ಯಾನೇಜರ್ ಕೃಷ್ಣ ದೇಶಪಾಂಡೆ ಮಾತನಾಡಿ, ನೋಂದಾವಣೆಯಾಗದ, ಮನ್ನಣೆ ಪಡೆಯದ ಸಂಸ್ಥೆಗಳು ಹೆಚ್ಚಿನ ಬಡ್ಡಿಯ ಆಮಿಷವೊಡ್ಡಿ ಸಾರ್ವಜನಿಕರಿಂದ ಠೇವಣಿ ಸಂಗ್ರಹಿಸಿ ಮೋಸ ಮಾಡುತ್ತಿರುವ ಕುರಿತು, ಅಲ್ಲದೆ ಇತರ ರೀತಿಯಲ್ಲಿ ನಡೆಯುತ್ತಿರುವ ಆರ್ಥಿಕ ವಂಚನೆಂು ಕುರಿತು ಆಕಾಶವಾಣಿ, ಎಫ್‌ಎಂ ರೇಡಿಯೊ ಪ್ರಸಾರದ ಮೂಲಕ, ಮೊಬೈಲ್ ಮೆಸೇಜ್‌ಗಳನ್ನು ರವಾನಿಸುವ ಮೂಲಕ ಜನಜಾಗೃತಿ ಮೂಢಿಸುವ ಕೆಲಸ ಮಾಡಲಾಗುವುದು ಎಂದರು.

ರಾಜ್ಯದ 6 ಜಿಲ್ಲೆಗಳ 24 ತಾಲೂಕುಗಳಲ್ಲಿ ಜಾಗೃತಿ ಅಭಿಯಾನ ನಡೆಸಲಾಗಿದೆ. ನ.5ರ ತನಕ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ನಡೆಯಲಿದೆ ಎಂದರು.

ನೊಯ್ಡ, ನೇಪಾಲ ಗಡಿಪ್ರದೇಶ, ಜಾರ್ಖಂಡ್ ಭಾಗದ ಮಂದಿ ಮೋಸದ ದಂಧೆಯಲ್ಲಿ ನಿರತರಾಗಿದ್ದು, ಬೆಂಗಳೂರು ನಗರದಲ್ಲಿಯೇ ಒಂದು ತಿಂಗಳಲ್ಲಿ 5 ರೂ. ಕೋಟಿಗೂ ಹೆಚ್ಚಿನ ವಂಚನೆ ನಡೆದಿದೆ. ಟ್ಯಾಕ್ಸಿ ಚಾಲಕರು, ಉಪನ್ಯಾಸಕರು ಸೇರಿದಂತೆ ಎಲ್ಲಾ ವರ್ಗದ ಜನರೂ ವಂಚನೆಗೆ ಒಳಗಾಗಿದ್ದಾರೆ ಎಂದು ಅವರು ತಿಳಿಸಿದರು.

ತಹಶೀಲ್ದಾರ್ ಅನಂತಶಂಕರ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಜಗದೀಶ್, ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಾಂತಿ ಹೆಗ್ಡೆ, ತಾಲೂಕು ಸ್ತ್ರೀ ಶಕ್ತಿ ಸೊಸೈಟಿಯ ಅಧ್ಯಕ್ಷೆ ಜಯಲಕ್ಷ್ಮೀ ಸುರೇಶ್, ಪುತ್ತೂರು ವರ್ತಕ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಮತ್ತಿತರರು ಉಪಸ್ಥಿತರಿದ್ದರು.

ನಿವೃತ್ತ ಉಪನ್ಯಾಸಕ ಪ್ರೊ.ಬಿ.ಜೆ.ಸುವರ್ಣ ನಿರೂಪಿಸಿದರು. ಸಬಾ ಕಾರ್ಯಕ್ರಮದ ಬಳಿಕ ಸಾಸ್ತಾನದ ಕರ್ನಾಟಕ ಕಲಾದರ್ಶಿನಿ ತಂಡದವರು ಯಕ್ಷಗಾನದ ಮೂಲಕ ಹಾಗೂ ಬೆಂಗಳೂರಿನ ರಂಗ ವಿಸ್ಮಯ ತಂಡದವರು ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಿದರು. ಆ ಬಳಿಕ ನಡೆದ ಜಾಗೃತಿ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಹಲವು ಮಂದಿ ಉತ್ತರ ನೀಡಿ ಬಹುಮಾನ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News