ಹಳೆಯಂಗಡಿ ಗ್ರಾಪಂಗೆ ನೀರು ಪೂರೈಕೆ ಸ್ಥಗಿತ: ಮುಲ್ಕಿ ನಪಂ ಮಾಸಿಕ ಸಭೆ ನಿರ್ಧಾರ

Update: 2016-11-04 18:11 GMT

ಮುಲ್ಕಿ, ನ.4: ಸುಮಾರು 3 ವರ್ಷಗಳಿಂದ 37 ಲಕ್ಷ ರೂ.ಗೂ ಅಧಿಕ ಕುಡಿಯುವ ನೀರಿನ ಬಿಲ್ ಬಾಕಿ ಇರಿಸಿದ್ದಲ್ಲದೆ, ನಪಂ ನೋಟಿಸಿಗೆ ಯಾವುದೇ ಪತಿಕ್ರಿಯೆ ನೀಡದ ಹಳೆಯಂಗಡಿ ಗ್ರಾಪಂಗೆ ತುಂಬೆಯಿಂದ ಸರಬರಾಜಾಗುತ್ತಿರುವ ಕುಡಿಯುವ ನೀರನ್ನು ಸ್ಥಗಿತಗೊಳಿಸಲು ಮುಲ್ಕಿ ನಪಂ ಮಾಸಿಕ ಸಭೆಯಲ್ಲಿ ನಿರ್ಧರಿಸಲಾಯಿತು.

ಶುಕ್ರವಾರ ನಪಂ ಅಧ್ಯಕ್ಷ ಸುನೀಲ್ ಆಳ್ವ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದು ನೀರನ್ನು ಸ್ಥಗಿತಗೊಳಿಸಲು ನಿರ್ಣಯ ಕೈಗೊಳ್ಳಲಾಯಿತು.
ಮುಲ್ಕಿ ನಪಂನಿಂದ ಮಂಗಳೂರು ಮನಪಾಗೆ 75 ಲಕ್ಷ ರೂ. ನೀರಿನ ಬಿಲ್ ಬಾಕಿ ಇದೆ. ಈ ಪೈಕಿ ಹಳೆಯಂಗಡಿ ಗ್ರಾಪಂನಿಂದ 37 ಲಕ್ಷ ರೂ. ಬಾಕಿಯಿದ್ದು, ಬಿಲ್ ಪಾವತಿಗೆ ಹಲವು ಬಾರಿ ತಿಳಿಸಿದರೂ ಹಳೆಯಂಗಡಿ ಪಂಚಾಯತ್‌ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ನೀರು ಸ್ಥಗಿತಗೊಳಿಸುವ ಕುರಿತು ಕ್ರಮ ಕೈಗೊಳ್ಳಲಾಗಿದೆ ಎಂದು ಅಧ್ಯಕ್ಷರು ಹೇಳಿದರು.
ಮುಲ್ಕಿಯ ಪಡುಬೈಲು ರಸ್ತೆಗೆ ಕಂಬಳ ಕ್ಷೇತ್ರದ ಸಾಧಕ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಯ್ಯಿಟ್ಟು ಸದಾಶಿವ ಸಾಲ್ಯಾನ್ ಅವರ ಹೆಸರಿಡಬೇಕೆಂದು ಸಭೆಯಲ್ಲಿ ಸದಸ್ಯರೊಬ್ಬರು ಒತ್ತಾಯಿಸಿದರು.
ಈ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿದ ಆಡಳಿತ ಪಕ್ಷದ ಸದಸ್ಯೆ ರಾಧಿಕಾ ಹಾಗೂ ಸದಸ್ಯರ ಮಧ್ಯೆ ಮಾತು ಬೆಳೆದಾಗ ನಪಂ ಅಧ್ಯಕ್ಷ ಸುನೀಲ್ ಆಳ್ವ ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News