ಭೋಪಾಲ್ ಎನ್‌ಕೌಂಟರ್ ಪ್ರಕರಣ: ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಧರಣಿ

Update: 2016-11-05 05:24 GMT

ಮಂಗಳೂರು, ಅ.4: ಮಧ್ಯಪ್ರದೇಶದ ಭೋಪಾಲ್ ಜೈಲಿನ 8 ಮಂದಿ ವಿಚಾರಣಾಧೀನ ಕೈದಿಗಳನ್ನು ನಕಲಿ ಎನ್‌ಕೌಂಟರ್ ಮೂಲಕ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ), ಈ ಪ್ರಕರಣವನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಿಂದ ತನಿಖೆಗೊಳಪಡಿಸಬೇಕೆಂದು ಆಗ್ರಹಿಸಿದೆ.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಸಂಜೆ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲತೀಫ್ ಪುತ್ತೂರು, ಜೈಲಿನಲ್ಲಿದ್ದ ಶಂಕಿತ ಸಿಮಿ ಸಂಘಟನೆಯ 8 ಮಂದಿ ವಿಚಾರಣಾಧೀನ ಕೈದಿಗಳು ಮತ್ತು ಓರ್ವ ದಲಿತ ಕಾನ್‌ಸ್ಟೇಬಲ್‌ನ ಹತ್ಯೆಯು ಪೂರ್ವಯೋಜಿತ ಕೃತ್ಯವಾಗಿದೆ ಎಂದು ಆರೋಪಿಸಿದರು.
ಕೆಲವೇ ದಿನಗಳಲ್ಲಿ ಬಿಡುಗಡೆಯಾಗಬೇಕಿದ್ದ ಕೈದಿಗಳನ್ನು ನಕಲಿ ಎನ್‌ಕೌಂಟರ್ ಮೂಲಕ ಪೊಲೀಸರು ಹತ್ಯೆ ನಡೆಸಿದ್ದಾರೆ. ಪ್ರಕರಣವು ಹಲವು ಅನುಮಾನಗಳನ್ನು ಹುಟ್ಟುಹಾಕಿದ್ದು, ಈ ಬಗ್ಗೆ ಕೇಂದ್ರ ಸರಕಾರ ಸಮಗ್ರ ತನಿಖೆ ನಡೆಸಿ ಸತ್ಯಾಂಶವನ್ನು ದೇಶದ ಜನರ ಮುಂದಿಡಬೇಕೆಂದು ಆಗ್ರಹಿಸಿದರು.
ಎಸ್‌ಡಿಪಿಐ ದ.ಕ. ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಮಾತನಾಡಿ, ಎನ್‌ಕೌಂಟರ್ ಸಮಯದಲ್ಲಿ ಶಂಕಿತ ಸಿಮಿ ಕಾರ್ಯಕರ್ತರಿಗೆ ಬ್ರಾಂಡೆಡ್ ಉಡುಪುಗಳು, ಶೂ ಮತ್ತು ಕೈಗಡಿಯಾರಗಳು ಎಲ್ಲಿಂದ ಬಂದವು? ಎನ್‌ಕೌಂಟರ್ ಸಮಯದಲ್ಲಿ ಶಂಕಿತ ಸಿಮಿ ಕಾರ್ಯಕರ್ತರು ಯಾವ ಆಯುಧಗಳಿಂದ ಪೊಲೀಸರ ಮೇಲೆ ಆಕ್ರಮಣ ಮಾಡಿದರು? ಕೈದಿಗಳ ಬಳಿ ಆಯುಧಗಳು ಎಲ್ಲಿಂದ ಬಂದವು? ಜೈಲಿನಲ್ಲಿ ಭದ್ರವಾದ 30ಅಡಿ ಎತ್ತರದ ಗೋಡೆಯನ್ನು ಕೇವಲ ಹೊದಿಕೆ ಸಹಾಯದಿಂದ ಜಿಗಿದಿದ್ದಾರೆ ಎನ್ನುವುದು ಎಷ್ಟು ಸರಿ? ಎಂಬಿತ್ಯಾದಿ ಪ್ರಶ್ನೆಗಳಿಂದ ಈ ಎನ್‌ಕೌಂಟರ್ ಪ್ರಕರಣವು ಪೂರ್ವಯೋಜಿತ ಮತ್ತು ಯೋಜನಾಬದ್ಧವಾಗಿದೆ. ಆದ್ದರಿಂದ ಪ್ರಕರಣದ ತನಿಖೆಯನ್ನು ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಿಂದ ನಡೆಸಬೇಕೆಂದು ಅವರು ಆಗ್ರಹಿಸಿದರು.
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಹಗರಣವೊಂದರಲ್ಲಿ ಸಿಲುಕಿರುವುದು ಮತ್ತು ದೇಶದಲ್ಲಿ ವಿವಾದಕ್ಕೆ ಎಡೆ ಮಾಡಿಕೊಟ್ಟಿರುವ ಸಮಾನ ನಾಗರಿಕ ಸಂಹಿತೆಯ ಚರ್ಚೆ ಮುಂದುವರಿದಿರುವಾಗಲೇ ದೇಶದ ಜನತೆಯ ಗಮನವನ್ನು ಬೇರೆಡೆಗೆ ಸೆಳೆಯಲು 8 ಮಂದಿ ಮುಗ್ಧರ ಬಲಿ ಪಡೆಯಲಾಗಿದೆ ಎಂದು ಇಕ್ಬಾಲ್ ಬೆಳ್ಳಾರೆ ಆರೋಪ ಮಾಡಿದರು.

 ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಕೂಸಪ್ಪ ಮಾತನಾಡಿ, ಪ್ರಕರಣಕ್ಕೆ ಸಂಬಂಧಿಸಿ ಮಧ್ಯಪ್ರದೇಶದ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಬೇರೆ ಬೇರೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಒಂದು ಟೀ ಚಮಚದ ಸಹಾಯದಿಂದ ಜೈಲ್‌ನಿಂದ ವಿಚಾರಣಾಧೀನ ಕೈದಿಗಳು ಬಿಗು ಭದ್ರತೆಯ ಜೈಲಿನಿಂದ ಪರಾರಿಯಾಗುತ್ತಾರೆಂದಾದರೆ, ಒಂದು ಟೀ ಚಮಚದಿಂದ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಯಾಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರಲ್ಲದೆ, ಪೊಲೀಸ್ ಅಧಿಕಾರಿಯೊಬ್ಬರು ಕೈದಿಗಳು ಊಟದ ತಟ್ಟೆಯಿಂದ ಭದ್ರತಾ ಸಿಬ್ಬಂದಿಯ ಕತ್ತು ಸೀಳಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಇವೆಲ್ಲಾ ಕಟ್ಟುಕತೆಗಳನ್ನು ನಬಲು ಭಾರತೀಯ ಪ್ರಜೆಗಳು ಸಿದ್ಧರಿಲ್ಲ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಎಸ್‌ಡಿಪಿಐ ಜಿಲ್ಲಾ ಉಪಾಧ್ಯಕ್ಷ ಅತಾವುಲ್ಲಾ ಜೋಕಟ್ಟೆ, ರಾಜ್ಯ ಪ್ರಧಾನ ಕಾರ್ಯದರ್ಶಿ ಅಲ್ಫೋನ್ಸೊ ಫ್ರಾಂಕೊ ಮಾತನಾಡಿದರು. ಎಸ್‌ಡಿಟಿಯು ರಾಜ್ಯಾಧ್ಯಕ್ಷ ಜಲೀಲ್ ಕೃಷ್ಣಾಪುರ, ಪಿಯುಸಿಎಲ್ ಜಿಲ್ಲಾಧ್ಯಕ್ಷ ಕಬೀಲ್ ಉಳ್ಳಾಲ್, ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವಾಝ್ ಉಳ್ಳಾಲ್, ಕೋಶಾಧಿಕಾರಿ ಇಕ್ಬಾಲ್ ಐಎಂಆರ್, ಕಾರ್ಪೊರೇಟರ್ ಅಯಾಝ್ ಕೃಷ್ಣಾಪುರ ಉಪಸ್ಥಿತರಿದ್ದರು.
ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಮಂಚಿ ಸ್ವಾಗತಿಸಿದರು. ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಶ್ರಫ್ ಎ.ಕೆ. ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News